- ಪ್ರಾಂಶುಪಾಲ ಡಾ.ಸಿ.ಎಸ್. ಹೊನ್ನೇಗೌಡ ಅಭಿಮತಫೋಟೋ - 7ಎಂವೈಎಸ್ 34
ಕನ್ನಡಪ್ರಭ ವಾರ್ತೆ ನಂಜನಗೂಡುಪರಿಸರವು ಮಾನವ, ಪ್ರಾಣಿ ಮತ್ತು ಪಕ್ಷಿಗಳ ಜೀವನದ ಮೂಲಾಧಾರವಾಗಿದ್ದು, ನಮಗೆ ಉಸಿರಾಡಲು ಶುದ್ಧ ಗಾಳಿ, ಕುಡಿಯಲು ಶುದ್ಧ ನೀರನ್ನು ಕರುಣಿಸುತ್ತಿರುವ ಪರಿಸರವನ್ನು ಮುಂದಿನ ಪೀಳಿಗೆಗಾಗಿ ರಕ್ಷಿಸಿ ಉಳಿಸುವುದು ನಮ್ಮೆಲ್ಲರ ಹೊಣೆಗಾರಿಕೆ ಆಗಬೇಕು ಎಂದು ಪ್ರಾಂಶುಪಾಲ ಡಾ.ಸಿ.ಎಸ್. ಹೊನ್ನೇಗೌಡ ಅಭಿಪ್ರಾಯಪಟ್ಟರು.
ನಗರದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸಮುಚ್ಚಯದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನವನ್ನು ಸಸಿ ನೆಡುವ ಮೂಲಕ ಪರಿಸರ ಅರಿವಿನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ಮಾನವ ಭೂಮಿಯ ಮೇಲಿರುವ ಸಕಲ ಜೀವಸಂಕುಲದೊಂದಿಗೆ ಬದುಕಬೇಕಾಗಿರುವುದರಿಂದ ಪರಿಸರವು ಜೀವನಕ್ಕೆ ಅಮೂಲ್ಯ ಕೊಡುಗೆಯಾಗಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಸಸ್ಯಗಳು, ಮರಗಳು, ಕಾಡುಗಳು, ನದಿ- ಸಾಗರಗಳು ಸಾರ್ವಕಾಲಿಕವಾಗಿ ಉಳಿಯುವುದು ಬಹುಮುಖ್ಯ. ಈ ದಿಸೆಯಲ್ಲಿ ವಿಶ್ವದಾದ್ಯಂತ ಜೂ. 5 ರಂದು ಆಚರಿಸುತ್ತಿರುವ ವಿಶ್ವಪರಿಸರ ದಿನ ಕೇವಲ ಒಂದು ದಿನದ ಆಚರಣೆಗಷ್ಟೆ ಸೀಮಿತವಾಗದೇ ಸಾರ್ವಕಾಲಿಕವಾದ ಆಚರಣೆ ಆಗಬೇಕು ಎಂದರು.
ಪರಿಸರಕ್ಕೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವುದು, ಪರಿಸರ ಸ್ನೇಹಿ ಅಭಿವೃದ್ಧಿ ಅಭಿಯಾನ ಆರಂಭಿಸುವುದು, ಗಿಡ ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೇಪಿಸುವ ಮೂಲಕ ಪರಿಸರ ನಾಶವನ್ನು ತಡೆಗಟ್ಟಿ ಪರಿಸರ ಸಕಲ ಜೀವಸಂಕುಲಕ್ಕೆ ಅತ್ಯಂತ ಮುಖ್ಯ ಎನ್ನುವ ಸತ್ಯ ಸಂಗತಿಯನ್ನು ತಿಳಿಸುವ ಅರಿವಿನ ಕಾರ್ಯಕ್ರಮ ಆಯೋಜಿಸುವ ಮೂಲಕ ಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನ ಯುಗದಲ್ಲಿ ಜೀವನ ಸಾಗಿಸುತ್ತಿರುವ, ವಿಷೇಶವಾಗಿ ವಿದ್ಯಾವಂತರಾದ ಪ್ರತಿಯೊಬ್ಬರು ಪ್ರಯತ್ನಶೀಲರಾಗಬೇಕೆಂದು ತಿಳಿಸಿದರು .
ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಪ್ರವೀಣ್ ಕುಮಾರ್, ರವಿತೇಜ, ಮಹದೇವಸ್ವಾಮಿ, ಎಂ.ಎಸ್. ದೀಪಾಲಿ, ಗೌರಮ್ಮಣಿ, ರಕ್ಷಿತಾ, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಇದ್ದರು.