ಇಂದಿನ ದಿನಗಳಲ್ಲಿ ಜನರ ಆಯುಷ್ಯ ಪ್ರಮಾಣ ಹೆಚ್ಚುತ್ತಿದೆಯಾದರೂ, ಕೇವಲ ದೀರ್ಘಾಯುಷ್ಯ ಮಾತ್ರ ಸಾಕಾಗುವುದಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರುಹಿರಿಯರು ನಮ್ಮ ಜೀವನದ ಅವಿಭಾಜ್ಯ ಅಂಗ. ಅವರು ಪುಸ್ತಕಗಳಲ್ಲಿ ಸಿಗದ ಅಪಾರ ಅನುಭವ, ಮಾನವೀಯತೆ ಹಾಗೂ ಸಂಸ್ಕಾರದ ದಾರಿದೀಪವಾಗಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ ತಿಳಿಸಿದರು.ನಗರದ ಜೆಎಸ್ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆ ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ದಿನಗಳಲ್ಲಿ ಜನರ ಆಯುಷ್ಯ ಪ್ರಮಾಣ ಹೆಚ್ಚುತ್ತಿದೆಯಾದರೂ, ಕೇವಲ ದೀರ್ಘಾಯುಷ್ಯ ಮಾತ್ರ ಸಾಕಾಗುವುದಿಲ್ಲ. ಹಿರಿಯರು ಆರೋಗ್ಯ, ಸುರಕ್ಷತೆ ಹಾಗೂ ಸ್ವತಂತ್ರ ಘನತೆಯಿಂದ ಬದುಕುವ ಅವಕಾಶ ಸಿಗಬೇಕು. ಇದೇ 2026ರ ಪ್ರಮುಖ ಸಂದೇಶ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಇಂದಿನ ದಿನಗಳಲ್ಲಿ ಅನೇಕ ಯುವಕ-ಯುವತಿಯರು ಉದ್ಯೋಗ ನಿಮಿತ್ತ ವಿದೇಶ ಹಾಗೂ ಹೊರರಾಜ್ಯಗಳಲ್ಲಿ ನೆಲೆಸುತ್ತಿದ್ದು, ಮನೆಯಲ್ಲಿರುವ ವಯೋವೃದ್ಧರ ಆರೈಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ತಿಳಿಸಿದರು. ಹಿರಿಯರಿಗೆ ಸೂಕ್ತ ಗೌರವ ಹಾಗೂ ಸಂಸ್ಕಾರ ನೀಡುವಲ್ಲಿ ಸಮಾಜದ ಹಿರಿಯರ ಪಾತ್ರ ಹಾಗೂ ಮಾರ್ಗದರ್ಶನ ಮುಖ್ಯವಾಗಿದೆ ಎಂದರು. ವೃದ್ಧಾಶ್ರಮಗಳ ಸಂಖ್ಯೆ ಸಮಾಜದಲ್ಲಿ ವೃದ್ಧಾಶ್ರಮಗಳ ಅಗತ್ಯವೇ ಇಲ್ಲದಂತಾಗುವುದು ಸಮಾಜಕ್ಕೆ ಒಳ್ಳೆಯದು. ಮನೆಯ ವಾತಾವರಣಕ್ಕೂ ಹೊರಗಿನ ಆಶ್ರಮದ ವಾತಾವರಣಕ್ಕೂ ನಡುವೆ ದೊಡ್ಡ ವ್ಯತ್ಯಾಸವಿದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್. ನಾಗರಾಜ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಬಿ. ಮಂಜು, ಜೆಎಸ್ಎಸ್ ಮಹಾ ವಿದ್ಯಾಪೀಠದ ಸಾಮಾನ್ಯ ಶಿಕ್ಷಣ ವಿಭಾಗದ ರೇವಣ್ಷ ಸ್ವಾಮಿ, ಸಂಯೋಜನಾಧಿಕಾರಿ ಬಸವರಾಜು ಇದ್ದರು.