ಜೆಎಸ್ಎಸ್‌ ವಿಶೇಷ ಚೇತನರ ಪಾಲಿಟೆಕ್ನಿಕ್‌ ಭವಿಷ್ಯದಲ್ಲಿ ವಿಶ್ವವಿದ್ಯಾನಿಲಯವಾಗಿ ಪರಿವರ್ತನೆ: ಬಿ.ಇಳಂಗೋವನ್‌ ಅಭಿಮತ

| Published : Feb 16 2025, 01:45 AM IST

ಜೆಎಸ್ಎಸ್‌ ವಿಶೇಷ ಚೇತನರ ಪಾಲಿಟೆಕ್ನಿಕ್‌ ಭವಿಷ್ಯದಲ್ಲಿ ವಿಶ್ವವಿದ್ಯಾನಿಲಯವಾಗಿ ಪರಿವರ್ತನೆ: ಬಿ.ಇಳಂಗೋವನ್‌ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ದೇವರ ಮಕ್ಕಳಾದ ವಿಶೇಷಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಉದ್ದೇಶದಿಂದ ಸುತ್ತೂರು ಶ್ರೀಗಳು ಆರಂಭಿಸಿದ ಈ ಪಾಲಿಟೆಕ್ನಿಕ್‌ನಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉದ್ಯೋಗವಕಾಶಗಳು ಲಭ್ಯವಾಗುತ್ತಿವೆ. ಅದರಲ್ಲೂ ಜುವೆಲರಿ ಹಾಗೂ ಅಪರಾಲ್ಸ್‌ ವಿಭಾಗದಲ್ಲಿ ಕ್ಯಾಂಪಸ್‌ ಸಂದರ್ಶನದ ಮೂಲಕವೇ ಎಲ್ಲರಿಗೂ ಉದ್ಯೋಗ ಸಿಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಜೆಎಸ್ಎಸ್‌ ವಿಶೇಷ ಚೇತನರ ಪಾಲಿಟೆಕ್ನಿಕ್‌ನಲ್ಲಿ ಮುಂದಿನ ವರ್ಷದಿಂದ ಎಂಜಿನಿಯರಿಂಗ್‌ ಕಾಲೇಜು ಆರಂಭಿಸಲಾಗುವುದು. ಮುಂದೆ ಅದನ್ನು ವಿಶೇಷಚೇತನರ ವಿಶ್ವವಿದ್ಯಾಲನಿಲಯವಾಗಿ ಪರಿವರ್ತಿಸುವ ಉದ್ದೇಶವಿದೆ ಎಂದು ಪ್ರಾಂಶುಪಾಲ ಬಿ. ಇಳಂಗೋವನ್‌ ಹೇಳಿದರು.

ಎಸ್‌ಜೆಸಿಇ ಆವರಣದಲ್ಲಿರುವ ಜೆಎಸ್ಎಸ್‌ ವಿಶೇಷ ಚೇತನರ ಪಾಲಿಟೆಕ್ನಿಕ್‌ನಲ್ಲಿ ನಡೆದ ಮುಕ್ತ ದಿನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮಲ್ಲಿ ಮಾತ್ರ ಇರುವ ವಿಶೇಷಚೇತನರ ಪಾಲಿಟೆಕ್ನಿಕ್‌ನಲ್ಲಿ ಜಮ್ಮು- ಕಾಶ್ಮೀರ, ಉತ್ತರ ಪ್ರದೇಶ, ಆಂಧ್ರ ಸೇರಿದಂತೆ ದೇಶದ ವಿವಿಧ ಮೂಲೆಗಳಿಂದ ಬಂದಿರುವ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ದೇವರ ಮಕ್ಕಳಾದ ವಿಶೇಷಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಉದ್ದೇಶದಿಂದ ಸುತ್ತೂರು ಶ್ರೀಗಳು ಆರಂಭಿಸಿದ ಈ ಪಾಲಿಟೆಕ್ನಿಕ್‌ನಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉದ್ಯೋಗವಕಾಶಗಳು ಲಭ್ಯವಾಗುತ್ತಿವೆ. ಅದರಲ್ಲೂ ಜುವೆಲರಿ ಹಾಗೂ ಅಪರಾಲ್ಸ್‌ ವಿಭಾಗದಲ್ಲಿ ಕ್ಯಾಂಪಸ್‌ ಸಂದರ್ಶನದ ಮೂಲಕವೇ ಎಲ್ಲರಿಗೂ ಉದ್ಯೋಗ ಸಿಗುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ವಾಯುಸೇನೆಯ ಗ್ರೂಪ್‌ ಕ್ಯಾಪ್ಟನ್‌ ಡಾ. ವಿನಯ್‌ ವಿಠಲ್‌ ಮಾತನಾಡಿ, ವಿಶೇಷಚೇತನರಲ್ಲಿ ಇರುವ ಬುದ್ಧಿವಂತಿಕೆ ಕಂಡು ಸ್ಫೂರ್ತಿಗೊಂಡಿದ್ದೇನೆ ಎಂದರು.

ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ. ಅವುಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ಅವರು ಸಲಹೆ ಮಾಡಿದರು.

ಎಷ್ಟು ಬೇಕಾದರೂ ದುಡ್ಡು ಸಂಪಾದಿಸಬಹುದು. ಆದರೆ ಸ್ವಲ್ಪ ಮಟ್ಟಿಗೆ ಖುಷಿ ಸಿಗುತ್ತದೆ. ಆದರೆ ಅಂತಿಮವಾಗಿ ಸಮಾಜಕ್ಕೆ ಏನಾದರೂ ಉಪಕಾರ ಮಾಡಿದಾಗ ಸಿಗುವ ಸಂತೋಷದ ಮುಂದೆ ಬೇರೆ ಯಾವುದೂ ಇಲ್ಲ. ಆದ್ದರಿಂದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.

ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಶತ್ರು ರಾಷ್ಟ್ರದ ಸೇನೆಯ ವಿರುದ್ಧ ಹೋರಾಟ ಮಾಡಬೇಕಾಗಿ ಬಂದಿದ್ದನ್ನು ಅವರು ವಿವರಿಸಿದರು.

ಮತ್ತೊರ್ವ ಮುಖ್ಯಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ವಿಶೇಷಚೇತನರು ‘ಡಿಸ್‌ ಏಬಲ್ಡ್‌ ’ ಅಲ್ಲ ಬದಲಿಗೆ ‘ಏಬಲ್ಡ್‌’ ಎಂಬುದನ್ನು ನಿರೂಪಿಸಿದ್ದಾರೆ. ಹಲವಾರು ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ವಸ್ತು ಪ್ರದರ್ಶನದಲ್ಲಿರುವ ಮಾಡೆಲ್‌ಗಳು ಒಂದಕ್ಕಿಂತ ಒಂದು ಅತ್ಯುತ್ತಮವಾಗಿವೆ. ಸಾಮಾನ್ಯ ವಿದ್ಯಾರ್ಥಿಗಳಿಗಿಂತ ನಾವೇನು ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.

15 ಲಕ್ಷ ರು. ಕೊಡುಗೆ:

ನಗರದ ಸಮಾಜಸೇವಕ ಸೋದರಿಯರಾದ ಎ. ವೈದೇಹಿ ಹಾಗೂ ಪುಷ್ಪಾ ಅಯ್ಯಂಗಾರ್‌ ಅವರು ಜೆಎಸ್ಎಸ್‌ ವಿಶೇಷಚೇತನರ ಪಾಲಿಟೆಕ್ನಿಕ್‌ಗೆ 15 ಲಕ್ಷ ರು.ಗಳನ್ನು ದೇಣಿಗೆಯಾಗಿ ನೀಡಿದ್ದು, ಅದನ್ನು ಮೂಲಸೌಕರ್ಯಕ್ಕೆ ಬಳಸಲಾಗಿದೆ. ಮುಂದೆ ಕೂಡ ನೆರವು ನೀಡುವುದಾಗಿ ಪುಷ್ಪಾ ಅಯ್ಯಂಗಾರ್‌ ಭರವಸೆ ನೀಡಿದರು.

ಸ್ಟಾರ್‌ ಸಿಂಗರ್‌ ಅಮೂಲ್ಯ ಗಾಯನ:

ಸರಿಗಮಪ ಸ್ಟಾರ್‌ ಸಿಂಗರ್‌ ಆಗಿರುವ ಹಾಗೂ ಇದೇ ಪಾಲಿಟೆಕ್ನಿಕ್‌ನಲ್ಲಿ ಉಪನ್ಯಾಸಕಿಯಾಗಿರುವ ಅಮೂಲ್ಯ ನಾಲ್ಕು ಗೀತೆಗಳನ್ನು ಹಾಡಿದರು. ಡಾ.ಪಳನಿಸ್ವಾಮಿ ನಿರೂಪಿಸಿದರು. ಸುಮಾ ಸ್ವಾಗತಿಸಿದರು. ಶಿವಕುಮಾರಸ್ವಾಮಿ ವಂದಿಸಿದರು. ಕಾಂಚನಾ ಅತಿಥಿಗಳ ಭಾಷಣವನ್ನು ಸಂಜ್ಞೆ ಭಾಷೆಯಲ್ಲಿ ತಿಳಿಸಿಕೊಟ್ಟರು.

ಗಮನ ಸೆಳೆದ ವಸ್ತು ಪ್ರದರ್ಶನ:

ಜೆಎಸ್ಎಸ್‌ ವಿಶೇಷಚೇತರ ಪಾಲಿಟೆಕ್ನಿಕ್‌ನ ಎಲ್ಲಾ ವಿದ್ಯಾರ್ಥಿಗಳು ವಿವಿಧ ಮಾಡೆಲ್‌ಗಳನ್ನು ಮಾಡಿ, ಪ್ರದರ್ಶಿಸಿದ್ದರು. ಎರಡು ದಿನಗಳ ಅವಧಿಯಲ್ಲಿ 1.500 ಮಂದಿ ಭೇಟಿ ನೀಡಿ. ವೀಕ್ಷಿಸಿದ್ದಾರೆ. ಎಟಿಎಂ, ಜಿಎಸ್ಟಿ, ಸೋನಾರ್‌ ಪ್ಯಾನಲ್‌, ಬಾಗಿಲುಗಳು, ಕಟ್ಟಡ, ಸಭಾಂಗಣ, ಕಂಪ್ಯೂಟರ್‌, ಆಭರಣಗಳು, ವಸ್ತ್ರಗಳು ಗಮನ ಸೆಳೆದವು.