12ನೇ ಶತಮಾನ ವೈಜ್ಞಾನಿಕ ಮತ್ತು ವೈಚಾರಿಕ ಕಾಲಘಟ್ಟವಾಗಿದ್ದು, ಅನುಭಾವಿಗಳ ನಡೆಯಲ್ಲಿ ನಡೆಯುವುದೇ ದರ್ಶನ. ಶರಣ ಚಳವಳಿ ಜೀವಪರ ಕಾಳಜಿಯನ್ನು ಹೊಂದಿದ್ದು
ಕನ್ನಡಪ್ರಭ ವಾರ್ತೆ ಮೈಸೂರುಅನುಭಾವಿಗಳ ನಡೆಯಲ್ಲಿ ನಡೆಯುವುದೇ ದರ್ಶನ ಎಂದು ಸಂಸ್ಕೃತಿ ಚಿಂತಕ ಹಾಗೂ ನಿವೃತ್ತ ಮುಖ್ಯ ಎಂಜಿನಿಯರ್ ಶಂಕರ ದೇವನೂರು ತಿಳಿಸಿದರು.ನಗರದ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಮೈಸೂರು ವಿವಿ ಪ್ರಸಾರಾಂಗ ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತವಾಗಿ ಶುಕ್ರವಾರ ಆಯೋಜಿಸಿದ್ದ ಪ್ರಚಾರೋಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಶರಣರ ಜೀವನ ದರ್ಶನ ಕುರಿತು ಉಪನ್ಯಾಸ ನೀಡಿದರು.12ನೇ ಶತಮಾನ ವೈಜ್ಞಾನಿಕ ಮತ್ತು ವೈಚಾರಿಕ ಕಾಲಘಟ್ಟವಾಗಿದ್ದು, ಅನುಭಾವಿಗಳ ನಡೆಯಲ್ಲಿ ನಡೆಯುವುದೇ ದರ್ಶನ. ಶರಣ ಚಳವಳಿ ಜೀವಪರ ಕಾಳಜಿಯನ್ನು ಹೊಂದಿದ್ದು, ಧ್ವನಿ ಇಲ್ಲದವರಿಗೆ ಚೈತನ್ಯ ಶಕ್ತಿಯನ್ನು ನೀಡಿದೆ. ಶರಣರು ಜಗತ್ತಿಗೆ ಕಾಯಕದ ಮೌಲ್ಯವನ್ನು ತಿಳಿಸಿದ ಅಸ್ತಿತ್ವವಾದಿಗಳು. ವಚನ ಸಾಹಿತ್ಯ ಅನುಭಾವದಿಂದ ಉದಯಿಸಿದ ಅಮೃತಧಾರೆ. ವಚನಗಳ ಓದು ನಮ್ಮ ವರ್ತಮಾನದ ಬದುಕಿಗೆ ದಿವ್ಯ ಬೆಳಕಾಗಿದ್ದು, ಶಾಂತಿ ಮತ್ತು ಸಮಾಧಾನವನ್ನು ನೀಡುತ್ತದೆ ಎಂದು ಅವರು ಹೇಳಿದರು.ನಾಡು ಕಂಡಂತಹ ಮಹತ್ವದ ಕಾಲಘಟ್ಟ ಹಾಗೂ ಪ್ರತಿಯೊಂದರಲ್ಲೂ ಮೈತ್ರಿಯನ್ನು ಕಂಡದ್ದು 12ನೇ ಶತಮಾನ. ನಮ್ಮ ಧಾರ್ಮಿಕ ಪರಂಪರೆಯನ್ನು ಅವಲೋಕನ ಮಾಡಿದಾಗ ಭಾರತದ ಧಾರ್ಮಿಕ ಇತಿಹಾಸದಲ್ಲಿ 12ನೇ ಶತಮಾನದ ಚಿಂತನೆಗಳು, ವಚನಗಳು ಅತ್ಯಂತ ಪಾವನ ಹಾಗೂ ಪವಿತ್ರವಾದದ್ದು. 12ನೇ ಶತಮಾನ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ವೈಚಾರಿಕ, ವೈಜ್ಞಾನಿಕವಾಗಿ ಮಹತ್ವದ ಕಾಲಘಟ್ಟ. ಕಳೆದ ಯಾವುದೇ ಒಂದು ಶತಮಾನವನ್ನು ಸ್ಮರಿಸಿಕೊಂಡು ರೋಮಾಂಚನವಾಗುವುದಾದರೇ ಹಾಗೂ ಆಶ್ಚರ್ಯವನ್ನು ಪಡುವುದಾದರೆ ಅದು 12ನೇ ಶತಮಾನ ಎಂದರು.ಪ್ರಾಸ್ತಾವಿಕವಾಗಿ ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು ಮಾತನಾಡಿ, ನಾನು ಜೆಎಸ್ಎಸ್ ಸಂಸ್ಥೆಯ ಹಿರಿಯ ವಿದ್ಯಾರ್ಥಿ. ರಾಜೇಂದ್ರ ಶ್ರೀಗಳವರು ಆ ಕಾಲಕ್ಕೆ ಚಾಮರಾಜನಗರದಲ್ಲಿ ಕಾಲೇಜನ್ನು ತೆರೆಯದಿದ್ದರೆ ನಾನು ಪದವಿ ಪಡೆದು ಈ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತಿರಲಿಲ್ಲ ಎಂದು ಸ್ಮರಿಸಿದರು.ಮೈಸೂರು ವಿವಿ ಪ್ರಸಾರಾಂಗವನ್ನು ಕುವೆಂಪು ಅವರು ಆರಂಭಿಸಿದ್ದು, ಪ್ರಸಾರಾಂಗವು 9 ಲಕ್ಷಕ್ಕೂ ಹೆಚ್ಚಿನ ಕೃತಿಗಳನ್ನು ಮುದ್ರಿಸಿದೆ. ಓದುವ ಸಂಸ್ಕೃತಿಯನ್ನು ಪಸರಿಸುವ ದೃಷ್ಟಿಯಿಂದ ಪ್ರಸಾರಾಂಗವೂ ಪುಸ್ತಕಗಳನ್ನು ಮುದ್ರಿಸಿ ಅತಿ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ ಎಂದು ಅವರು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಪ್ರಸಾರಾಂಗವೂ ಜ್ಞಾನ ಪಸರಿಸುವ ಕಾರ್ಯವನ್ನು ಮಾಡುತ್ತಿದೆ. ಶರಣ ಸಾಹಿತ್ಯ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಿದೆ. ವಿದ್ಯಾರ್ಥಿಗಳು ಶರಣರ ವಚನಗಳನ್ನು ಅಧ್ಯಯನ ಮಾಡುವುದರ ಮೂಲಕ ತಮ್ಮ ಆದರ್ಶ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ ಇದ್ದರು. ಧಾತ್ರಿ ವೃಂದದವರು ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಆರ್.ಎಸ್. ಕುಮಾರ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಹೊನ್ನಶೆಟ್ಟಿ ವಂದಿಸಿದರು. ಎನ್.ಎಂ. ಕೃಷ್ಣಪ್ಪ ನಿರೂಪಿಸಿದರು.----ಕೋಟ್...ಮಾನವ ಶಕ್ತಿಯ ಪೂರ್ಣವಿಕಾಸವಾಗುವ ಮಾರ್ಗವನ್ನು ಕೊಟ್ಟವರೇ ಬಸವಣ್ಣ. ಮಾತಿಲ್ಲದವರಿಗೆ ಮಾತಾಗಿ, ಧ್ವನಿಯಿಲ್ಲದವರಿಗೆ ಧ್ವನಿಯಾದ್ದದ್ದು 12ನೇ ಶತಮಾನ. ಬಸವಣ್ಣನವರು ಕಾಯಕದ ಮೂಲಕ ನೊಂದವರಿಗೆ ಸ್ವಾಭಿಮಾನಿಯಾಗಿ ಬದುಕುವ ಕಲೆ ಕಲಿಸಿಕೊಟ್ಟರು. ಮಾತಿಲ್ಲದವರಿಗೆ ಮಾತು ಕೊಟ್ಟದ್ದು, ಧ್ವನಿಯಿಲ್ಲದವರಿಗೆ ಧ್ವನಿ ಕೊಟ್ಟವರು ಬಸವಣ್ಣ.- ಶಂಕರ ದೇವನೂರು, ಸಂಸ್ಕೃತಿಕ ಚಿಂತಕ