ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಶಾಲಾ ಹಂತದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಕ್ಲಸ್ಟರ್ ಹಂತದಲ್ಲಿ ನಂತರ ತಾಲೂಕು ಮಟ್ಟದಲ್ಲಿ ಪ್ರತಿಭೆಯ ಅನಾವರಣಕ್ಕೆ ಅವಕಾಶವಿದ್ದು, ವಿದ್ಯಾರ್ಥಿಗಳು ತಮ್ಮ ಪ್ರೌಢಿಮೆ ಪ್ರರ್ದಶಿಸಬೇಕು ಮತ್ತು ತೀರ್ಪುದಾರರು ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗದಂತೆ ನಿಸ್ವಾರ್ಥತೆಯಿಂದ ಪ್ರತಿಭೆಗಳನ್ನು ಆಯ್ಕೆ ಮಾಡಬೇಕು ಎಂದು ಬಿಇಒ ಸೋಮಲಿಂಗೇಗೌಡ ಸಲಹೆ ನೀಡಿದರು. ಪಟ್ಟಣದ ಕುವೆಂಪು ಬಡಾವಣೆಯಲ್ಲಿರುವ ಮೈಲ್‌ಸ್ಟೋನ್ ಕೆಎನ್‌ಎ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜನೆ ಮಾಡಿದ್ದ ಪೇಟೆ ೨ ಕಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರವೂ ೨೨ ವರ್ಷಗಳಿಂದ ಸುಪ್ತ ಪ್ರತಿಭೆಯನ್ನು ಗುರುತಿಸುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜನೆಗೆ ಒತ್ತು ನೀಡುತ್ತಿದೆ. ಪ್ರತಿಭಾ ಕಾರಂಜಿಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ನಮ್ಮ ನಾಡಿನ ಸಂಸ್ಕೃತಿಯ ಪರಂಪರೆಯ ಅನಾವರಣಕ್ಕೂ ಸೂಕ್ತ ವೇದಿಕೆಯಾಗಿದೆ ಜತೆಗೆ ವೇದಿಕೆ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸುವ ಆತ್ಮಸ್ಥೈರ್ಯವನ್ನು ಪಡೆಯುವ ಮತ್ತು ಕಲಿಯುವ ಅವಕಾಶವಿದೆ.
ಪಠ್ಯದಲ್ಲಿ ಆಸಕ್ತಿ ಕಡಿಮೆ ಇರುವ ವಿದ್ಯಾರ್ಥಿಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ಆಸಕ್ತಿ ಇದ್ದು, ಅಂತಹ ವಿದ್ಯಾರ್ಥಿಯಲ್ಲಿ ಅಡಕವಾಗಿರುವ ಕಲೆ ಅಥವಾ ಕೌಶಲ್ಯ ಗುರುತಿಸಿ, ಪ್ರೋತ್ಸಾಯಿಸಲು ಉತ್ತಮ ಅವಕಾಶವನ್ನು ಬಾಲ್ಯದಲ್ಲಿ ಈ ವೇದಿಕೆ ಕಲ್ಪಿಸುತ್ತದೆ ಎಂದರು. ಶಾಲಾ ಕಾಲೇಜುಗಳಲ್ಲಿ ಇದೇ ರೀತಿಯಲ್ಲಿ ಸ್ವಚ್ಛತೆ ಹಾಗೂ ಪರಿಸರ ಕಾಳಜಿಯ ಹಲವಾರು ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಮತ್ತು ತಾಯಿ ಹೆಸರಿನಲ್ಲಿ ಒಂದು ಮರವೆಂಬ ವಿನೂತನ ಪರಿಕಲ್ಪನೆಯಲ್ಲಿ ಗಿಡ ನೆಟ್ಟು ಪೋಷಿಸುವ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಸಕ್ರೀಯವಾಗಿ ಭಾಗವಹಿಸುವ ಮೂಲಕ ಪರಿಸರ ಸಂರಕ್ಷಣೆಗೆ ಸೇವೆ ಸಲ್ಲಿಸಬೇಕಿದೆ ಎಂದು ಸಲಹೆ ನೀಡಿದರು.ಸುನೀತಾ ಮತ್ತು ತಂಡ ಪ್ರಾರ್ಥಿಸಿದರು ಹಾಗೂ ಸಿಆರ್‌ಪಿ ಪುಟ್ಟಣ್ಣಯ್ಯ ಸ್ವಾಗತಿಸಿದರು ಮತ್ತು ಮಹದೇವ್ ನಿರೂಪಿಸಿದರು.ಮೈಲ್‌ಸ್ಟೋನ್ ಕೆಎನ್‌ಎ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರಜ್ವಲ್, ಮುಖ್ಯ ಶಿಕ್ಷಕ ಈಶ್ವರಪ್ಪ, ಆಡಳಿತಾಧಿಕಾರಿ ಸುಧಾಕರ್, ಇಸಿಒ ಕಾಂತರಾಜು, ಪ್ರೌಢಶಾಲೆ ಶಿಕ್ಷಕರ ಸಂಘದ ಕಾರ್ಯದರ್ಶಿ ಕಾಂತರಾಜು ಎಚ್.ಎಚ್., ದೈಹಿಕ ಶಿಕ್ಷಣ ಪರಿವೀಕ್ಷಕ ಮಹೇಶ್, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಉಷಾ, ಸಿಆರ್‌ಪಿಗಳಾದ ಕೃಷ್ಣಮೂರ್ತಿ, ಪದ್ಮಜ ಹಾಗೂ ಹಿನಾಕೌಸರ್, ಶಿವರಾಮ್ ಹೆಬ್ಬಾರ್, ಶಾಂತಪ್ಪ, ಇತರರು ಇದ್ದರು.