ನ್ಯಾಯಾಂಗ, ಕಾರ್ಯಾಂಗ ಮೇಲ್ವರ್ಗದ ಹಿಡಿತದಲ್ಲಿ: ಯತೀಂದ್ರ ಸಿದ್ದರಾಮಯ್ಯ

| Published : Feb 27 2024, 01:32 AM IST

ನ್ಯಾಯಾಂಗ, ಕಾರ್ಯಾಂಗ ಮೇಲ್ವರ್ಗದ ಹಿಡಿತದಲ್ಲಿ: ಯತೀಂದ್ರ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗಸುಗೂರು ತಾಲೂಕಿನ ಈಚನಾಳ ಕ್ರಾಸ್ ಬಳಿಯಲ್ಲಿ ನಿರ್ಮಿಸಿದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯನವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಶಾಸಕಾಂಗ ಹೊರತು ಪಡಿಸಿ ನ್ಯಾಯಾಂಗ, ಕಾರ್ಯಾಂಗ ಹಾಗೂ ಮಾದ್ಯಮ ರಂಗಗಳು ಇನ್ನೂ ಮೇಲ್ವರ್ಗದ ಜನರ ಹಿಡಿತದಲ್ಲಿ ಇವೆ. ಇದನ್ನು ಹೋಗಲಾಡಿಸಲು ದಲಿತ, ಹಿಂದುಳಿದ, ಶೋಷಿತ ಸಮುದಾಯಗಳ ಜನರು ಹೋರಾಟಕ್ಕೆ ಮುಂದಾಗಬೇಕೆಂದು ಮಾಜಿ ಶಾಸಕ, ಕುರುಬ ಸಮುದಾಯದ ಯುವ ಮುಖಂಡ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಈಚನಾಳ ವೃತ್ತದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಹಿಂದುಳಿದ ಶೋಷಿತ ಸಮುದಾಯಗಳ ಏಳಿಗೆಗಾಗಿ ಬುದ್ಧ, ಬಸವ, ಕನಕದಾಸರು ಜಾತಿ ಮೂಲೋತ್ಪಾಟನೆಗೆ ಹೋರಾಡಿದರು. ಆದರೆ ಜಾತಿ ವ್ಯವಸ್ಥೆ ನಾಶವಾಗಲಿಲ್ಲ. ಡಾ.ಅಂಬೇಡ್ಕರ್ ರವರು ಸಂವಿಧಾನದ ಮೂಲಕ ಶೋಷಿತ ಸಮುದಾಯಗಳಿಗೆ ರಾಜಕೀಯ ಅಧಿಕಾರ ನೀಡಿದರು. ಇದರಿಂದ ಶಾಸಕಾಂಗದಲ್ಲಿ ಸ್ವಲ್ಪಮಟ್ಟಿಗೆ ಶೋಷಿತ, ಹಿಂದುಳಿದ ಜನರು ನಾಯಕರಾಗಿದ್ದಾರೆ. ಆದರೆ ಉಳಿದ ರಂಗಗಳಲ್ಲಿ ಹಿಂದಕ್ಕೆ ತಳ್ಳಲ್ಪಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಕ್ಕಾಗಿ ಪ್ರಸ್ತುತ ದಿನಮಾನಗಳಲ್ಲಿ ರಾಜಕಾರಣದಲ್ಲಿ ದೇವರು, ಧರ್ಮ, ಜಾತಿ, ಮತ-ಪಂಥಗಳ ವಿಷಯಗಳನ್ನು ಎಳೆದು ತಂದು ಜನರ ಮಧ್ಯೆ ದ್ವೇಷ ಭಾವನೆ ಕೆರಳಿಸುತ್ತಿದ್ದಾರೆ. ಇದು ದೇಶದಲ್ಲಿ ಅಪಾಯಕಾರಿ ಬೆಳವಣಿಗೆಯಾಗಿದೆ ಇದು ತರವಲ್ಲ. ಭಾವನಾತ್ಮಕ ವಿಷಯಗಳ ಬದಿಗೊತ್ತಿ ನಿರುದ್ಯೋಗ, ಬಡತನ, ಸಾಮಾಜಿಕ ನ್ಯಾಯದ ಪರಿಕಲ್ಪನೆಗಳು ಮುನ್ನೆಲೆಗೆ ಬರಬೇಕೆಂದು ಆಗ್ರಹಿಸಿದರು.

ಶೋಷಿತ ಸಮುದಾಯಗಳ ಏಳಿಗೆಗಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳ ಮೂಲಕ ಶೋಷಿತ ಸಮುದಾಯಗಳ ಏಳಿಗೆಗೆ ಶ್ರಮಿಸುತ್ತಿದ್ದಾರೆ. ದಲಿತ, ಹಿಂದುಳಿದ, ಶೋಷಿತ ಸಮುದಾಯಗಳ ಪರವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸದಾ ಬೆಂಬಲ ನೀಡಬೇಕೆಂದು ಕರೆ ನೀಡಿದರು.

ಈ ವೇಳೆ ಮಾಜಿ ಶಾಸಕ ಡಿ.ಎಸ್ ಹೂಲಗೇರಿ, ಮುಖಂಡರಾದ ಡಿ.ಜಿ ಗುರಿಕಾರ, ಮಾಳಿಂಗರಾಯ ಮಹಾರಾಜ, ಪಿಡ್ಡಪ್ಪ ಪೂಜಾರಿ ಸೇರಿ ಅನೇಕರು ಇದ್ದರು.