ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಕರ್ನಾಟಕ-ಮಹಾರಾಷ್ಟ್ರವನ್ನು ಜೋಡಿಸುವ ಜುಗೂಳ-ಖಿದ್ರಾಪೂರ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಪ್ರವಾಹ ಸಂದರ್ಭದಲ್ಲಿ ನೀರು ನಿಲ್ಲದಂತೆ ಸೇತುವೆ ಬದಿಗೆ ಬಾಕ್ಸ್ ನಿರ್ಮಿಸಿ, ಪೈಪ್ ಅಳವಡಿಸಬೇಕು ಮತ್ತು ಜುಗೂಳ-ಶಿರಗುಪ್ಪಿ ರಸ್ತೆಯನ್ನು ಅಗಲೀಕರಣಗೊಳಿಸಬೇಕೆಂದು ಗ್ರಾಪಂ ವತಿಯಿಂದ ಜುಗೂಳ ಗ್ರಾಮಕ್ಕೆ ಭೇಟಿ ನೀಡಿದ್ದ ಕೆಆರ್‌ಡಿಸಿ ಅಧ್ಯಕ್ಷ ಹಾಗೂ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿ, ಆಗ್ರಹಿಸಿದರು.ತಾಲೂಕಿನ ಜುಗೂಳ ಮತ್ತು ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಶಿರೋಳ ತಾಲೂಕಿನ ಖಿದ್ರಾಪೂರ ಗ್ರಾಮದ ಮಧ್ಯ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದ್ದು, ಮಹಾರಾಷ್ಟ್ರದ ಭಾಗದಲ್ಲಿ ಶೇ.20 ರಷ್ಟು ಮಾತ್ರ ಬಾಕಿ ಉಳಿದಿದೆ. ಈ ಸೇತುವೆಯಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರಿಗೆ ಸಾಕಷ್ಟು ಅನಕೂಲವಾಗಲಿದ್ದು, ಕಳೆದ ಅನೇಕ ದಿನಗಳಿಂದ ಕಾಮಗಾರಿ ಕುಂಠಿತಗೊಂಡಿದೆ. ಇಂದು ಸ್ಥಳಕ್ಕೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಸಿ. ಬಾಳಕೃಷ್ಣ, ಶಾಸಕ ರಾಜು ಕಾಗೆ ಭೇಟಿ ನೀಡಿ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು.ನೂತನ ಸೇತುವೆಯ ಅಕ್ಕ-ಪಕ್ಕದಲ್ಲಿ ನಿರ್ಮಿಸಿರುವ ಮಣ್ಣಿನ ತಡೆಗೋಡೆಯಿಂದಾಗಿ ಪ್ರವಾಹ ಸಂದರ್ಭದಲ್ಲಿ ನೀರು ಗ್ರಾಮಕ್ಕೆ ನೂಗ್ಗುವ ಭೀತಿ ಹೆಚ್ಚಲಿದೆ. ಆದ್ದರಿಂದ ತಡೆಗೋಡೆ ಮಧ್ಯೆ ಬಾಕ್ಸ್ ನಿರ್ಮಿಸಿ, ಜತೆಗೆ ಪೈಪ್ ಅಳವಡಿಸಿ, ನೀರು ಹರಿದು ಹೋಗುವಂತೆ ಮಾಡಿಕೊಡಬೇಕೆಂದು ಜುಗೂಳ ಗ್ರಾಮಸ್ಥರು ಕೇಳಿಕೊಂಡರು. ಅದಕ್ಕೆ ಅವರು ಸಕಾರಾತ್ಮವಾಗಿ ಸ್ಪಂದಿಸಿ, ಗುತ್ತಿಗೆದಾರರಿಗೆ ಸೂಚನೆ ನೀಡಿದರು.ಈ ಸಮಯದಲ್ಲಿ ಮುಖಂಡರಾದ ಅಣ್ಣಾಸಾಬ ಪಾಟೀಲ, ಗ್ರಾಮ ಪಂಚಾಯತಿ ಅಧ್ಯಕ್ಷ ಕಾಕಾಸಾಬ್ ಪಾಟೀಲ, ಬಾಳಾಸಾಹೇಬ್ ಪಾಟೀಲ, ಅನೀಲ ಕಡೋಲೆ, ಅನೀಲ ಸುಂಕೆ, ಬಸವರಾಜ ನಂದಾಳೆ, ಬಾಬಾಸಾಬ ತಾರದಾಳೆ, ವಿಜಯ ಅಗಸರ, ಮಹಾದೇವ ಕಾಂಬಳೆ, ಚಿದಾನಂದ ಪಾಟೀಲ, ಸಂತೋಶ ಚಂದೂರೆ, ಕಾಮಗಾರಿ ಗುತ್ತಿಗೆ ಪಡೆದುಕೊಂಡಿರುವ ಬಿಎಸ್‌ಆರ್ ಕಂಪನಿಯ ಜಿಎಂ. ದೊರೆಸ್ವಾಮಿ, ಕೆಆರ್‌ಡಿಸಿಯ ಅಧಿಕಾರಿ ರಿಜವಾನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.