ನಿರ್ದಿಷ್ಟ ಚರ್ಚೆಯೊಂದಿಗೆ ಪಠ್ಯಪೂರಕ ಪ್ರಶ್ನೆಗಳಿಗೆ ನಿಖರ ಉತ್ತರಗಳನ್ನು ಕಂಡುಕೊಂಡಾಗ ವ್ಯಾಸಂಗದ ವಿಷಯಗಳು ನೆನಪಿನಾಳದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ. ಮಾನವನ ಮೆದುಳು ಹೊಂದಿರುವ 1 ಸಾವಿರ ಕೋಟಿ ನರವ್ಯೂಹಗಳು 400 ಕಿಮೀ ವೇಗದಲ್ಲಿ ಕಾರ್ಯ ಮಾಡುತ್ತಿದೆ.
ಧಾರವಾಡ:
ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಕೆಯ ಹಂಬಲದಿಂದ ವಿಷಯಗಳ ಆಳವಾದ ಜ್ಞಾನ ಸಂಪಾದನೆಗೆ ತೆರೆದುಕೊಳ್ಳದೇ ನಡೆಸುವ ಕೇವಲ ಅಂಕ ಪ್ರಣೀತ ಅಧ್ಯಯನ ವ್ಯರ್ಥಗೊಳ್ಳುತ್ತದೆ ಎಂದು ಹಿರಿಯ ಶಿಕ್ಷಣ ಚಿಂತಕ ಸುರೇಶ ಕುಲಕರ್ಣಿ ಪ್ರತಿಪಾದಿಸಿದರು.ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಅಂಗವಾಗಿ ತಾಲೂಕಿನ ಅಮ್ಮಿನಬಾವಿಯ ಶ್ರೀಶಾಂತೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸದಲ್ಲಿ ಮಾತನಾಡಿದರು.
ನಿರ್ದಿಷ್ಟ ಚರ್ಚೆಯೊಂದಿಗೆ ಪಠ್ಯಪೂರಕ ಪ್ರಶ್ನೆಗಳಿಗೆ ನಿಖರ ಉತ್ತರಗಳನ್ನು ಕಂಡುಕೊಂಡಾಗ ವ್ಯಾಸಂಗದ ವಿಷಯಗಳು ನೆನಪಿನಾಳದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ. ಮಾನವನ ಮೆದುಳು ಹೊಂದಿರುವ 1 ಸಾವಿರ ಕೋಟಿ ನರವ್ಯೂಹಗಳು 400 ಕಿಮೀ ವೇಗದಲ್ಲಿ ಕಾರ್ಯ ಮಾಡುತ್ತಿದೆ. ಧನಾತ್ಮಕ ಚಿಂತನೆ, ಅನ್ವೇಷಣೆ, ಅರ್ಥಪೂರ್ಣ ಓದು, ವಿಷಯದ ಆಸ್ವಾದನೆ ಅಧಿಕವಾದಷ್ಟೂ ಜ್ಞಾನಸಂಪಾದನೆ ವ್ಯಾಪಕಗೊಳ್ಳುತ್ತದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ವಿದ್ಯಾರ್ಥಿಗಳು ಯಾವುದೇ ಋಣಾತ್ಮಕ ಭಾವನೆಗಳ ಹವ್ಯಾಸಗಳತ್ತ ಇಣುಕಿ ಹಾಕದೇ ಮೌಲ್ಯಾಧಾರಿತ ಬದುಕನ್ನು ರೂಢಿಸಿಕೊಳ್ಳಬೇಕು ಎಂದರು.
ಹವ್ಯಾಸಿ ಪತ್ರಕರ್ತ ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕ ಪ್ರೀತಿಯನ್ನು ಬೆಳೆಸಿಕೊಂಡು ನಿರಂತರ ಹೊಸ ಓದಿನೊಂದಿಗೆ ಸಂಪಾದಿಸುವ ಜ್ಞಾನದ ನೆಲೆಯಲ್ಲಿ ಭಾರತ ಬಯಸುವ ಉತ್ಕೃಷ್ಟ ಮಾನವ ಸಂಪನ್ಮೂಲವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.ನಿವೃತ್ತ ಶಿಕ್ಷಕ ಮುಖಂಡ ಗುರು ತಿಗಡಿ, ಪ್ರೌಢಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಸುನೀಲ ಗುಡಿ ಮಾತನಾಡಿದರು. ಮುಖ್ಯಾಧ್ಯಾಪಕ ಎನ್.ಬಿ. ಅಮರಗೋಳ ಅಧ್ಯಕ್ಷತೆ ವಹಿಸಿದ್ದರು. ಡಾ. ಜಿನದತ್ತ ಹಡಗಲಿ, ಮಹಾಂತೇಶ ನರೇಗಲ್ಲ ಇದ್ದರು. ಪ್ರಮಿಳಾ ಜಕ್ಕಣ್ಣವರ ಕನ್ನಡ ಗೀತಗಾಯನ ಪ್ರಸ್ತುತಪಡಿಸಿದರು. ಅಜಿತಕುಮಾರ ದೇಸಾಯಿ, ಎಂ.ಜಿ. ಸುಬೇದಾರ, ಉಮಾ ಬಾಗಲಕೋಟೆ ಇದ್ದರು. ಶಿಕ್ಷಕಿ ಲಲಿತಾ ವೈ.ಎಂ. ನಿರೂಪಿಸಿದರು. ಜಿ.ಎಫ್. ಶಿವಬಸನಗೌಡ್ರ ವಂದಿಸಿದರು.