ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರವಾಗಿ ನಮ್ಮಪ್ಪನ ಜೊತೆ ಕುಳಿತಾಗ ಇವರಿಗೇನಾದರೂ ಹೇಳಿದ್ದರಾ? ಯಾವ ಮುಖಂಡರ ಬಳಿ ಹೇಳಿದ್ದರಂತೆ? ಇದೆಲ್ಲಾ ಅಬ್ದುಲ್ ಜಬ್ಬಾರ್ ಹೇಳಿದ್ದಷ್ಟೇ...

- ಹೊರಗಿನವರು ಇಲ್ಲಿ ಯಾರೂ ಇಲ್ಲ, ಒಂದೇ ಮನೆಯ ನಾವೆಲ್ಲಾ ಕುಳಿತು ನಿರ್ಧರಿಸುತ್ತೇವೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರವಾಗಿ ನಮ್ಮಪ್ಪನ ಜೊತೆ ಕುಳಿತಾಗ ಇವರಿಗೇನಾದರೂ ಹೇಳಿದ್ದರಾ? ಯಾವ ಮುಖಂಡರ ಬಳಿ ಹೇಳಿದ್ದರಂತೆ? ಇದೆಲ್ಲಾ ಅಬ್ದುಲ್ ಜಬ್ಬಾರ್ ಹೇಳಿದ್ದಷ್ಟೇ...

ಹೀಗೆಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಮ್ಮ ತಂದೆ ದಿವಂಗತ ಶಾಮನೂರು ಶಿವಶಂಕರಪ್ಪ ಹೇಳಿದ್ದರೆಂಬ ಸಚಿವ ಜಮೀರ್ ಅಹಮ್ಮದ್‌, ಎಂಎಲ್ಸಿ ಅಬ್ದುಲ್ ಜಬ್ಬಾರ್ ಹೇಳಿಕೆ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ನಗರದ ತಮ್ಮ ನಿವಾಸ ಶಿವ ಪಾರ್ವತಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಕುಳಿತು ಮಾತನಾಡಿ, ಸರಿ ಮಾಡಿಕೊಳ್ಳಬೇಕು. ಒಟ್ಟಾರೆ, ದಕ್ಷಿಣ ಕ್ಷೇತ್ರವನ್ನು ಮತ್ತೆ ನಾವು ಗೆಲ್ಲಬೇಕು. ಅಂತಹ ಸೂಕ್ತ ಮತ್ತು ಸಮರ್ಥ ಅಭ್ಯರ್ಥಿಯನ್ನೇ ನಾವು ಹುಡುಕುತ್ತೇವೆ. ಕೆಪಿಸಿಸಿ ಇದೀಗ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಿಗೆ ಸಮಿತಿ ರಚಿಸಿದೆ. ಸಮಿತಿ ಸದಸ್ಯರು ಇಲ್ಲಿ ಬಂದು ಸಭೆ ಮಾಡುತ್ತಾರೆ. ಸೂಕ್ತ ಅಭ್ಯರ್ಥಿ ಬಗ್ಗೆ ಸಮಿತಿ ಹೈಕಮಾಂಡ್‌ಗೆ ಮಾಹಿತಿ ನೀಡುತ್ತದೆ. ಆ ನಂತರ ನಾನು ಈ ಬಗ್ಗೆ ಮಾತನಾಡುತ್ತೇನೆ ಎಂದರು.

ಜಮೀರ್ ಇಲ್ಲಿ ಬಂದು ಮಾತಾಡೋದೇನಿದೆ?:

ದಾವಣಗೆರೆಯಲ್ಲಿ 1991ರಿಂದಲೂ ಅಬ್ದುಲ್ ಜಬ್ಬಾರ್ ಹೀಗೆ ಮಾಡುತ್ತಿದ್ದು, ಒಬ್ಬನಿಂದ ಊರು ಹಾಳಾಗುವುದು ಬೇಡ. ಕಾರ್ಯಕರ್ತರು ಇಲ್ಲದೇ ಏನೂ ಪುಂಗಿ ನಡೆಯುವುದಿಲ್ಲ. ಕೆಲವರು ಹೀಗೆ ಮಾಡುತ್ತಿರುವುದು ಜೋಕರ್‌ಗಳ ಕೆಲಸದಂತಾಗಿದೆ. ಅಬ್ದುಲ್‌ ಜಬ್ಬಾರ್ ಅಂತಾ ಅಲ್ಲ, ಜಮೀರ್ ಅಹಮ್ಮದ್ ಅಲ್ಲಿಂದ ಇಲ್ಲಿಗೆ ಬಂದು, ಇಲ್ಲಿ ಮಾತನಾಡೋದೇನಿದೆ ಎಂದರು.

- - -

(ಕೋಟ್) ನಮ್ಮ ಮನೆಯಲ್ಲಿ ಎಲ್ಲರೂ ರಾಜಕೀಯಕ್ಕೆ ಇಳಿದರೆ, ವ್ಯವಹಾರ ಮಾಡುವವರು ಯಾರು? ಅನ್ನಕ್ಕಾಗಿ ನಾವೂ ದುಡಿಯಬೇಕಲ್ಲವಾ? ಸದ್ಯ ಡಾ.ಪ್ರಭಾ ಇಲ್ಲ, ನಾನೂ ಇರುವುದಿಲ್ಲ. ಸಮು (ಸಮರ್ಥ ಶಾಮನೂರು) ಸಹ ಬಂದಿದ್ದ. ಇಫ್ತಿಯಾರ್ ಕೂಟಗಳಲ್ಲಿ ನಾನು ಇಲ್ಲದಾಗ ಹೋಗು ಅಂದಿದ್ದೆ. ನಾನಾಗಲೀ, ಪ್ರಭಾ ಆಗಲೀ ಒಬ್ಬರು ಭಾಗಿಯಾಗುತ್ತೇವೆ. ನಾವಿಬ್ಬರೂ ಇಲ್ಲದ ವೇಳೆ ಸಮು ಇಫ್ತಿಯಾರ್ ಕೂಟಕ್ಕೆ ಹೋಗಿ ಬರುತ್ತಾನೆ.

- ಎಸ್‌.ಎಸ್‌. ಮಲ್ಲಿಕಾರ್ಜುನ, ಜಿಲ್ಲಾ ಮಂತ್ರಿ.

- - -