ಕೇವಲ ಹೆಚ್ಚು ಅಂಕುಗಳಿಸುವುದು ಸಾಧನೆಯಲ್ಲ

| Published : Mar 19 2024, 12:51 AM IST

ಸಾರಾಂಶ

ಅಥಣಿ ಪಟ್ಟಣದ ಪ್ರತಿಷ್ಠಿತ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಬಸಲಿಂಗಮ್ಮ ಗುರುಬಸಪ್ಪ ಹಂಜಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ಪರೀಕ್ಷೆಗಳಲ್ಲಿ ಕೇವಲ ಹೆಚ್ಚು ಅಂಕುಗಳಿಸುವುದು ಸಾಧನೆಯಲ್ಲ, ನಮ್ಮ ಬದುಕಿನಲ್ಲಿ ಗಳಿಸುವ ಜ್ಞಾನ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳು ನಮ್ಮನ್ನು ಸಾಧಕರನ್ನಾಗಿ ಬೆಳೆಸುತ್ತದೆ. ವಿದ್ಯಾರ್ಥಿ ಜೀವನದಿಂದಲೇ ವಿದ್ಯೆಯ ಜೊತೆಗೆ ಬುದ್ಧಿ ಮತ್ತು ವಿನಯ ಕಲಿತುಕೊಳ್ಳಬೇಕು ಎಂದು ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಹೇಳಿದರು.

ಪಟ್ಟಣದ ಪ್ರತಿಷ್ಠಿತ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಬಸಲಿಂಗಮ್ಮ ಗುರುಬಸಪ್ಪ ಹಂಜಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂಬುವುದು ಯುದ್ಧವಲ್ಲ, ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷಾ ಕೇಂದ್ರಗಳಿಗೆ ಹೋಗಿ ಆತ್ಮವಿಶ್ವಾಸದಿಂದ ಉತ್ತರಗಳನ್ನು ಬರೆಯಿರಿ. ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ನಿಮ್ಮ ತಂದೆ, ತಾಯಿಯ ಕನಸು ಮತ್ತು ನಿಮಗೆ ಈ ಮಾರ್ಗದರ್ಶನ ಮಾಡಿದ ಶಿಕ್ಷಕರ ಶ್ರಮ ಸಾರ್ಥಕ ಮಾಡಬೇಕು ಎಂದರು.

ಎಸ್ಸೆಸ್ಸೆಲ್ಸಿ ಎಂಬುವುದು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ. ಪರೀಕ್ಷೆ ಬಗ್ಗೆ ಯಾವುದೇ ಆತಂಕ, ಭಯ ಬೇಡ. ಉತ್ತಮ ಅಂಕ ಗಳಿಸುವ ಸಕಾರಾತ್ಮಕ ಭಾವನೆ ನಿಮ್ಮ ಮನಸ್ಸಿನಲ್ಲಿ ದೃಢವಾಗಿರಲಿ, ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕು. ಪರೀಕ್ಷಾ ದಿನ ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೊಠಡಿಗೆ ಹೋಗಿ, ಪ್ರಶ್ನೆ ಪತ್ರಿಕೆ ಬಂದ ನಂತರ ಎಲ್ಲವನ್ನು ಶಾಂತವಾಗಿ ನೋಡಿಕೊಂಡು ನಿಮಗೆ ಬರುವ ಉತ್ತರಗಳನ್ನು ಮೊದಲು ಬರೆದುಕೊಳ್ಳಬೇಕು. ಇನ್ನುಳಿದ ಪ್ರಶ್ನೆಗಳಿಗೆ ಉಳಿದ ಸಮಯದಲ್ಲಿ ಯೋಚಿಸಿ ಉತ್ತರ ಬರೆಯಲು ಪ್ರಯತ್ನಿಸಿ. ಈಗಾಗಲೇ ಪೂರ್ವಭಾವಿ ಸಿದ್ಧತಾ ಪರೀಕ್ಷೆಯಲ್ಲಿ ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಪೂರ್ಣ ಉತ್ತರಗಳನ್ನು ನೀವು ಬರೆದಾಗ ಹೆಚ್ಚು ಅಂಕಗಳಿಸಲು ಸಾಧ್ಯ ಎಂದು ವಿವರಿಸಿದರು.

ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುನಿಲ ಶಿವಣಗಿ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಅವರು, ಅಥಣಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಮಕ್ಕಳು ವ್ಯಾಸಂಗ ಮಾಡುತ್ತಾರೆ. ನಮ್ಮ ವಿದ್ಯಾರ್ಥಿಗಳ ಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಚೆನ್ನಾಗಿ ಬರುತ್ತಿದೆ. ಪ್ರತಿ ವರ್ಷ ನಮ್ಮ ವಿದ್ಯಾರ್ಥಿಗಳು ಜಿಲ್ಲಾಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ರಾಂಕಿಂಗ್ ಸ್ಥಾನ ಪಡೆದುಕೊಳ್ಳುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆ. ಈ ಬಾರಿಯೂ ವಿದ್ಯಾರ್ಥಿಗಳು ಪರೀಕ್ಷೆಯನ್ನು ಚೆನ್ನಾಗಿ ಬರೆಯುವ ಮೂಲಕ ಹೆಚ್ಚು ಹೆಚ್ಚು ಅಂಕಗಳನ್ನು ಗಳಿಸಿ ಹೆತ್ತವರ ಕನಸು ನನಸು ಮಾಡುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.

ಆಡಳಿತ ಮಂಡಳಿಯ ನಿರ್ದೇಶಕ ಶಿವಕುಮಾರ ಹಂಜಿ ಮಾತನಾಡಿ, ಅಂತಿಮ ಪ‍ರೀಕ್ಷೆಯ ಬಗ್ಗೆ ಆತಂಕ ಬೇಡ. ಪೂರ್ವಭಾವಿ ಪರೀಕ್ಷೆಯಲ್ಲಿ ಆಗಿರುವ ತಪ್ಪುಗಳನ್ನು ತಿದ್ದುಕೊಂಡರೆ ಅಂತಿಮ ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಬಹುದು ಎಂದು ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಾವು ಕಲಿತ ವಿದ್ಯಾವರ್ಧಕ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮತ್ತು ಶಿಕ್ಷಕರ ಕುರಿತು ತಮ್ಮ ಅಭಿಮಾನದ ನುಡಿಗಳನ್ನು ಹಂಚಿಕೊಂಡರು. ಈ ಸಮಾರಂಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕ ಪ್ರಕಾಶ ಮಹಾಜನ, ಅಶೋಕ ಬುರ್ಲಿ, ಮುಖ್ಯೋಪಾಧ್ಯಾಯ ಎಂ.ಎಸ್.ದೇಸಾಯಿ, ಎಂ.ಬಿ.ಬಿರಾದಾರ, ಪಿ.ಡಿ.ಚನ್ನಗೌಡರ, ಆಡಳಿತ ಅಧಿಕಾರಿ ಹನುಮಂತ ಗುಡ್ಡೋಡಗಿ, ಪ್ರತಿಭಾ ನಾಯಿಕ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸುನೀಲ ಶಿವಣಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮಲ್ಲು ತೇಲಿ ನಿರೂಪಿಸಿದರು. ವಿ.ಬಿ.ಕವಟೇಕರ ವಂದಿಸಿದರು.ತಂದೆ, ತಾಯಿ ನಮಗೆ ಜನ್ಮ ನೀಡಿದರೇ ಗುರು ಆದವನು ನಮ್ಮ ಬದುಕಿಗೆ ಬೆಳಕಾಗಿರುತ್ತಾನೆ. ಶಿಷ್ಯನಾದವನು ಕೂಡ ಗುರುವಿಗೆ ಋಣಿಯಾಗಿರುತ್ತಾನೆ. ಗುರು, ಶಿಷ್ಯ ಸಂಬಂಧ ಪುರಾತನ ಕಾಲದಿಂದ ಬಂದದ್ದು, ಗುರು, ಶಿಷ್ಯರ ಸಂಬಂಧ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ, ಶಿಕ್ಷಕ ಮತ್ತು ವಿದ್ಯಾರ್ಥಿಗಳಲ್ಲಿ ಕಂಡು ಬಂದಾಗ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ತಮ್ಮ ಸಂಸ್ಕಾರ ಕಾಣಲು ಸಾಧ್ಯ.

-ಡಾ.ಬಾಳಾಸಾಹೇಬ ಲೋಕಾಪುರ, ಹಿರಿಯ ಸಾಹಿತಿ.1ನೇ ತರಗತಿಯಿಂದ 10ನೇ ತರಗತಿಯವರಿಗೆ ಪಡೆದಿರುವ ಶಿಕ್ಷಣವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾವು ಉನ್ನತ ಹುದ್ದೆಗೆ ಹೋದ ನಂತರ ಕಲಿತ ಶಾಲೆ ಮತ್ತು ಶಿಕ್ಷಕರಿಗೆ ಋಣಿಯಾಗಿರಬೇಕು.

-ಸುನಿಲ ಶಿವಣಗಿ,

ಅಧ್ಯಕ್ಷರು ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ.