ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಕೋವಿಡ್ ಹಗರಣದ ಕುರಿತು ತನಿಖೆ ನಡೆಸಿದ ನ್ಯಾ.ಡಿ ಕುನ್ಹಾ ಪ್ರಥಮ ವರದಿ ನೀಡಿದ್ದಾರೆ. ಎರಡನೇ ಮತ್ತು ಕೊನೆಯ ವರದಿ ನೀಡಬೇಕಾಗಿದೆ. ಪ್ರಥಮ ವರದಿಯಲ್ಲಿ ಕೋವಿಡ್ ಸಂದರ್ಭದ ಅವ್ಯವಹಾರಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಇದರಲ್ಲಿ ದಾರಿ ತಪ್ಪಿಸುವ ತಂತ್ರ ಏನಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ನಿಯಮ ಬದ್ಧವಾಗಿ ಕಾನೂನು ಪ್ರಕಾರ ತನಿಖೆ ಮುಂದುವರಿಸುತ್ತೇವೆ. ಇದರಲ್ಲಿ ರಾಜಕೀಯ ದುರುದ್ದೇಶ ಏನಿಲ್ಲ. ನಾವು ವಿಪಕ್ಷದಲ್ಲಿದ್ದಾಗಲೇ ಈ ಬಗ್ಗೆ ಪ್ರಸ್ತಾಪ ಮಾಡಿದ್ದೆವು. ಪಬ್ಲಿಕ್ಸ್ ಅಕೌಂಟ್ಸ್ ಕಮಿಟಿ ಕೂಡ ಇದನ್ನೇ ಹೇಳಿದೆ. ಈಗ ಎಸ್‌ಐಟಿ ರಚನೆ ಮಾಡಬೇಕಾಗಿದೆ. ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ಜಸ್ಟೀಸ್ ಡಿ ಕುನ್ನಾ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೀಡಿದ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರಿಗೆ ಇದರಿಂದ ಸಮಸ್ಯೆ ಆಗಿದೆ. ಅಹಂಕಾರದಿಂದ ಮಾತನಾಡಿದ್ದಾರೆ. ಪ್ರಹ್ಲಾದ ಜೋಷಿ ವಿರುದ್ಧ ಪ್ರಕರಣ ದಾಖಲಾದರೆ ಅವರು ಜೈಲು ಸೇರುವ ಸಂದರ್ಭ ಬರಬಹುದು. ಈ ವಿಚಾರದಲ್ಲಿ ನ್ಯಾ.ಡಿ ಕುನ್ಹಾ ಏನು ಮಾಡುತ್ತಾರೆ ಎಂದು ಗೊತ್ತಿಲ್ಲ. ನಾವು ಈ ಕುರಿತು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಒಬ್ಬ ಜಡ್ಜ್ ಬಗ್ಗೆ ಆ ರೀತಿ ಮಾತನಾಡುವಂತಿಲ್ಲ ಎಂದರು.ಆರಗ ಜ್ಞಾನೇಂದ್ರಗೆ ಬುದ್ಧಿಭ್ರಮಣೆ: ಸಚಿವ ಸಂಪುಟ ಬಗ್ಗೆ ಲಘುವಾಗಿ ಮಾತನಾಡಿರುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಬುದ್ಧಿ ಭ್ರಮಣೆ ಆಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ಮಾಡಿದರು.
ನಾವೆಲ್ಲಾ ಹುಚ್ಚಾಸ್ಪತ್ರೆಯಲ್ಲಿ ಇರಬೇಕು ಎಂದು ಅರಗ ಹೇಳಿದ್ದಾರೆ. ಅಂದರೆ ನಮ್ಮನ್ನು ಆರಿಸಿದವರು ಜನರು, ಅವರ ಮೇಲಿರುವ ಆರೋಪಗಳಿಗೆ ಅವರಿಗೆ ಉತ್ತರ ನೀಡೋದಕ್ಕೆ ಆಗುತ್ತಿಲ್ಲ. ಯಾವಾಗ ಉತ್ತರ ಕೊಡೋದಕ್ಕೆ ಆಗುವುದಿಲ್ಲ ಆಗ ಈ ರೀತಿಯ ವ್ಯಾಕರಣ ಹೊರ ಬರುತ್ತದೆ. ಆಯೋಗದ ವರದಿಯಲ್ಲಿ ಬಂದಿರುವ ಬಗ್ಗೆ ಬಿಜೆಪಿ ಉತ್ತರ ನೀಡಲಿ ಎಂದರು. ಹಿಂದಿನ ಆರೋಗ್ಯ ಸಚಿವರ ಬಗ್ಗೆ ವರದಿಯಲ್ಲೂ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಅವರನ್ನು ಪ್ರಾಷಿಕ್ಯೂಷನ್ ಮಾಡುವ ಬಗ್ಗೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಉಲ್ಲೇಖಿಸಲಾಗಿದೆ. ಇಡೀ ಯೋಜನೆಗಳಲ್ಲಿ ಮೋಸ ಆಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಮೀರಲಾಗಿದೆ ಎಂದರು.ಸಚಿವ ಜಮೀರ್ ಅಹ್ಮದ್ ಅವರು ಹಾಗೆ ಮಾತನಾಡಬಾರದಿತ್ತು. ಅದು ಚುನಾವಣೆ ಮೇಲೆ ಅಷ್ಟಾಗಿ ಪರಿಣಾಮ ಬೀರದು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಹೇಳಿಕೆಗೆ ಜಮೀರ್ ಅಹ್ಮದ್ ಅವರು ಕ್ಷಮೆ ಕೇಳಿದ್ದಾರೆ. ಅದು ಅವರ ವೈಯಕ್ತಿಕ ಹೇಳಿಕೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.