ಕುಕನೂರು: ತಾಲೂಕಿನ ಚಂಡೂರು ಗ್ರಾಮದಲ್ಲಿ ದಲಿತರ ಭೂಮಿ ಕಬಳಿಕೆ ಮಾಡಿದ್ದು, ಅದನ್ನು ದಲಿತರಿಗೆ ಹಿಂದಿರುಗಿಸಬೇಕು ಎಂದು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಕಳೆದ ಎರಡು ದಿನಗಳ ಹಿಂದೆ ಧರಣಿ ಸತ್ಯಾಗ್ರಹ ಜರುಗಿದ್ದು, ಇದನ್ನು ಗಮನಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಗ್ರಾಮಕ್ಕೆ ಭೇಟಿ ನೀಡಿದರು.
ಚಂಡೂರು ಗ್ರಾಮದ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಸಂತ್ರಸ್ತರೊಂದಿಗೆ ಮಾತನಾಡಿ, ವಿಷಯದ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಪೀಡಿತರಿಗೆ ನ್ಯಾಯ ದೊರಕುವಂತೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.ಚಂಡೂರು ಗ್ರಾಮದ ದಲಿತ ರೈತರಾದ ಗೋವಿಂದಪ್ಪ ಗಾಳೇವ್ವ ಹರಿಜನ ಅವರ ಪಿತ್ರಾರ್ಜಿತ ಆಸ್ತಿ ಸರ್ವೆ ನಂ.76ರಲ್ಲಿ ಇರುವ 17 ಎಕರೆ 39 ಗುಂಟೆ ಭೂಮಿ 1954ರಿಂದ 1979ರವರೆಗೆ ಅವರ ಹೆಸರಿನಲ್ಲಿ ದಾಖಲಾಗಿತ್ತು. ನಂತರ ಯಾವುದೇ ಕಾನೂನುಬದ್ಧ ಖರೀದಿ ಪ್ರಕ್ರಿಯೆ,ಮ್ಯೂಟೇಶನ್ ದಾಖಲಾತಿ ಹಾಗೂ ವಾರಸುದಾರರ ಸಹಿ ಇಲ್ಲದೆ, ಕರಿಯಪ್ಪ ಹನುಮಂತಪ್ಪ ಜ್ಯೋತಿ ಎಂಬುವವರ ತಮ್ಮ ಹೆಸರಿಗೆ ಅಕ್ರಮವಾಗಿ ದಾಖಲಿಸಿಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ–ಅಂಬೇಡ್ಕರ್ ಧ್ವನಿ (ಚಂದ್ರಕಾಂತ ಎಸ್. ಕಾದ್ರೋಳ್ಳಿ ಬಣ) ಕೊಪ್ಪಳ ಜಿಲ್ಲಾ ಸಮಿತಿಯವರು ಹೋರಾಟ ಕೈಗೊಂಡಿದ್ದರು.
ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ನಿಂಗಪ್ಪ ಜಿ.ಎಸ್.ಬೆಣಕಲ್, ಈರಪ್ಪ ಹಿರೇಮನಿ, ನಿಂಗಪ್ಪ ಗೊರವರ, ಮಾರುತಿ ದೊಡ್ಡಮನಿ, ರೇಣುಕವ್ವ ಫಕೀರಪ್ಪ ಹಿರೇಮನಿ, ಭಾರಮವ್ವ ಹನುಮಪ್ಪ ಹಿರೇಮನಿ, ರೇಣುಕವ್ವ ಮೈಲಪ್ಪ ಹಿರೇಮನಿ, ಶರಣಪ್ಪ ದುರಗಪ್ಪ ಹಿರೇಮನಿ ಇತರರಿದ್ದರು.