ಮಗಳ ಸಾವಿಗೆ ನ್ಯಾಯ ಕೊಡಿಸಿ

| Published : Jun 19 2024, 01:03 AM IST

ಸಾರಾಂಶ

ಮಾನಸಿಕ ಕಿರುಕುಳಕ್ಕೆ ನೇಣಿಗೆ ಶರಣಾದ ತನ್ನ ಮಗಳ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಮಹಿಳೆಯೋರ್ವಳು ಸಚಿವರ ಕಾರು ತಡೆದು ಅಳಲು ತೋಡಿಕೊಂಡರು.

ಸಚಿವರ ಕಾರು ತಡೆದು ಅಳಲು ತೋಡಿಕೊಂಡ ಮಹಿಳೆ

ಕನ್ನಡಪ್ರಭ ವಾರ್ತೆ ಕನಕಗಿರಿ

ಮಾನಸಿಕ ಕಿರುಕುಳಕ್ಕೆ ನೇಣಿಗೆ ಶರಣಾದ ತನ್ನ ಮಗಳ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಮಹಿಳೆಯೋರ್ವಳು ಸಚಿವರ ಕಾರು ತಡೆದು ಅಳಲು ತೋಡಿಕೊಂಡರು.

ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದ ಮೃತ ಭೀಮಮ್ಮಳ ಸಂಬಂಧಿಕರು, ಪಾಲಕರು ಆಕೆಗೆ ಕಿರಿಕಿರಿ ನೀಡಿದ್ದರಿಂದಲೇ ಅವಳು ನೇಣಿಗೆ ಶರಣಾಗಿದ್ದಾಳೆ ಎಂದು ಆರೋಪಿತರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದೇ ವೇಳೆಗೆ ಪಟ್ಟಣದಲ್ಲಿನ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರಟಗಿಗೆ ತೆರಳುತ್ತಿದ್ದ ಸಚಿವ ಶಿವರಾಜ ತಂಗಡಗಿ ಕಾರು ಬರುತ್ತಿದ್ದಂತೆಯೇ ಮೃತಳ ತಾಯಿ ಯಮನಮ್ಮ ಸಚಿವರ ಕಾರು ತಡೆದರು. ಸಚಿವರು ಕಾರಿನಿಂದ ಇಳಿದು ದುಃಖತಪ್ತ ಮಹಿಳೆಯಿಂದ ಮಾಹಿತಿ ತಿಳಿದುಕೊಂಡರು.

ಅಲ್ಲದೇ, ತಮ್ಮ ವಾಹನದ ಮುಂದೆಯೇ ಇದ್ದ ಸ್ಥಳೀಯ ಠಾಣೆಯ ಪಿಐ ಎಂ.ಡಿ. ಫೈಜುಲ್ಲಾರಿಗೆ ಪ್ರಕರಣ ದಾಖಲಿಸಿಕೊಂಡು ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಏನಿದು ಪ್ರಕರಣ:

ಫೆಬ್ರವರಿ ತಿಂಗಳಲ್ಲಿ ಮೃತ ವಿಧವೆಯನ್ನು ತಾಲೂಕಿನ ವರನಖೇಡ ಗ್ರಾಮದ ಯುವಕ ಮಂಜುನಾಥ ಎನ್ನುವಾತ ಅಪಹರಿಸಿ ಕರೆದುಕೊಂಡು ಹೋಗಿದ್ದು, ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಪಾತ ಮಾಡಿಸಿ ಕೈಕೊಟ್ಟು ಹೋಗಿದ್ದ. ಈ ಪ್ರಕಣದ ಬೆನ್ನಲ್ಲೆ ವೈದ್ಯ ಸಹಿತ ಯುವಕ ಹಾಗೂ ಆತನ ಮನೆಯವರ ಮೇಲೆ ಪ್ರಕರಣ ದಾಖಲಾಗಿದ್ದು, ಹಲವರ ಬಂಧನವಾಗಿತ್ತು. ಬೇಲ್ ಮೇಲೆ ಹೊರಗೆ ಬಂದಿದ್ದ ಆರೋಪಿತರಲ್ಲಿ ಯುವಕನ ಮನೆಯವರು ಮೃತ ಮಹಿಳೆಗೆ ಮಾನಸಿಕ ಕಿರುಕುಳ ನೀಡಿದ್ದರಿಂದಲೇ ಭಾನುವಾರ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನುವುದು ಮೃತ ಮಹಿಳೆಯ ಸಂಬಂಧಿಕರ ಆರೋಪವಾಗಿದೆ.ಹಾವು ಕಚ್ಚಿ ಮಹಿಳೆ ಸಾವು:

ವಿಷಪೂರಿತ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿದ ಘಟನೆ ಕನಕಗಿರಿ ತಾಲೂಕಿನ ಕರಡಿಗುಡ್ಡದಲ್ಲಿ ಸೋಮವಾರ ನಡೆದಿದೆ.ಕರಡಿಗುಡ್ಡದ ದುರುಗಮ್ಮ ಸರಕಲರ್ (೩೦) ಸಾವನ್ನಪ್ಪಿದ ಮಹಿಳೆ. ದುರುಗಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಬಲಗೈಗೆ ಹಾವು ಕಚ್ಚಿದೆ. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಗೆ ಕರೆದುಕೊಂಡು ಹೋಗುವಾಗ ರಸ್ತೆ ಮಧ್ಯ ಮೃತಪಟ್ಟಿದ್ದಾಳೆ. ಈ ಬಗ್ಗೆ ಮೃತಳ ಪತಿ ನಿಂಗಪ್ಪ ಸರಕಲರ್ ದೂರು ನೀಡಿದ್ದಾರೆ.