ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಿಗೆ ನ್ಯಾಯ ದೊರಕಿಸಿ

| Published : Dec 08 2024, 01:15 AM IST

ಸಾರಾಂಶ

ದಶಕಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರದೇಶಗಳಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದ ನೂರಾರು ಜನರು ಅನೈರ್ಮಲ್ಯತೆ ಮತ್ತು ಸೌಲಭ್ಯಗಳ ಕೊರತೆಯಿಂದ ಅಕಾಲಿಕ ಸಾವಿಗೆ ತುತ್ತಾಗಿರುವ ಹಲವು ಉದಾಹರಣೆಗಳಿವೆ. ಅಂತಹವರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಎಂ.ಎಸ್. ಕಾಯ್ದೆಯ ಯಾವುದೇ ಸೌಲಭ್ಯಗಳು ಇಲ್ಲಿಯ ವರೆಗೆ ದೊರೆತಿಲ್ಲ.

ಹುಬ್ಬಳ್ಳಿ:

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ ವೃತ್ತಿಯಲ್ಲಿದ್ದವರನ್ನು ಗುರುತಿಸಿ ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಮಾದಿಗ ದಂಡೋರ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಮಿತಿಯ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ಮಂಜುನಾಥ ಕೊಂಡಪಲ್ಲಿ ಮಾತನಾಡಿ, ಎಂ.ಎಸ್. ಕಾಯ್ದೆ 2013ರ ಅಡಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳನ್ನು ಗುರುತಿಸಲು ಪಾಲಿಕೆ ಮತ್ತು ಜಿಲ್ಲಾಡಳಿತದ ವತಿಯಿಂದ 2015 ಮತ್ತು 2018 ರಲ್ಲಿ ಬೃಹತ್ ಸಮೀಕ್ಷೆ ನಡೆಸಲಾಗಿತ್ತು. ಅಂದು ಮಹಾನಗರದ 1600 ಜನರು ನೀಡಿದ್ದ ಅರ್ಜಿಗಳನ್ನು ಪಾಲಿಕೆಯಿಂದ ಸ್ವೀಕರಿಸಲಾಗಿತ್ತು. ಬಳಿಕ ಮುಂದಿನ ಹಂತದ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ನೀಡದ ಕಾರಣ ಪಟ್ಟಿಯಲ್ಲಿ ಯಾರು ಸೇರ್ಪಡೆಗೊಳ್ಳದೆ ನೂರಾರು ಜನರಿಗೆ ಅನ್ಯಾಯವಾಗಿತ್ತು ಎಂದರು.

ದಶಕಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರದೇಶಗಳಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದ ನೂರಾರು ಜನರು ಅನೈರ್ಮಲ್ಯತೆ ಮತ್ತು ಸೌಲಭ್ಯಗಳ ಕೊರತೆಯಿಂದ ಅಕಾಲಿಕ ಸಾವಿಗೆ ತುತ್ತಾಗಿರುವ ಹಲವು ಉದಾಹರಣೆಗಳಿವೆ. ಅಂತಹವರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಎಂ.ಎಸ್. ಕಾಯ್ದೆಯ ಯಾವುದೇ ಸೌಲಭ್ಯಗಳು ಇಲ್ಲಿಯ ವರೆಗೆ ದೊರೆತಿಲ್ಲ. ಈಗ ಸರ್ವೋಚ್ಚ ನ್ಯಾಯಲಯವು ಮರು ಸಮೀಕ್ಷೆ ನಡೆಸಲು ಆದೇಶ ನೀಡಿರುವುದು ಒಂದು ಹೊಸ ಆಶಾ ಕಿರಣ ಮೂಡಿಸಿದೆ, ಆದ್ದರಿಂದ ಪಾಲಿಕೆಯ ವತಿಯಿಂದ ಸೂಕ್ತ ಕ್ರಮ ವಹಿಸಿ ಬಾಧಿತರಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.

ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ್ ಮತ್ತು ಸುನೀತಾ ಮಾಳವದಕರ, ಧಾರವಾಡ ಜಿಲ್ಲಾಧ್ಯಕ್ಷ ಸತ್ಯನಾರಾಯಣ ಎಂ, ಕರ್ನಾಟಕ ಪರಿಶಿಷ್ಟ ಕುಲಬಾಂಧವರ ಒಕ್ಕೂಟದ ಕಾರ್ಯಾಧ್ಯಕ್ಷ ಗೋವಿಂದ ಬೆಲ್ಡೋಣಿ, ಮುಖಂಡರಾದ ಸಿದ್ದಣ್ಣ ಮೊಗಲಿಶೆಟ್ಟರ್, ಸಂಜಯ ಮಾಳವಾದಕರ, ರಂಗನಾಯಕ ತಪೇಲ, ಪ್ರಕಾಶ ಹುಬ್ಬಳ್ಳಿ, ಸುರೇಶ ಸೌದುಲ್ ಸೇರಿ ಹಲವರಿದ್ದರು.