ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಹರೆಯದ ವಯಸ್ಸಿನಲ್ಲಿ ಆಸೆಗಳನ್ನು ನಿಯಂತ್ರಿಸಿಕೊಂಡು ದುಶ್ಚಟಗಳಿಂದ ದೂರವಿದ್ದರೆ ಅಪರಾಧ ಕೃತ್ಯಗಳನ್ನು ನಿಯಂತ್ರಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ನ್ಯಾಯಾಧೀಶ ಈಶ್ವರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಕಾರ್ಮಿಕ ಇಲಾಖೆ ಹಾಗೂ ಸಾಂತ್ವನ ಸಹಾಯವಾಣಿ ಕೇಂದ್ರ, ಗ್ರೀನ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮಕ್ಕಳು ಮಕ್ಕಳ ಸಹಾಯವಾಣಿ 1098 ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ, ಮಕ್ಕಳಿಗೆ ಸಂಬಂಧಿತ ಕಾನೂನುಗಳು, ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಶಾಲಾ ಕಾಲೇಜು ಮಕ್ಕಳಿಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಪ್ರೌಢಾವಸ್ಥೆಯಲ್ಲಿ ಚಂಚಲ ಸ್ವಭಾವವನ್ನು ಹೊಂದಿರುತ್ತಾರೆ. ಈ ವೇಳೆ ಮಾದಕ ವಸ್ತುಗಳ ಚಟ, ಧೂಮಪಾನ, ಮದ್ಯಪಾನ ಹಾಗೂ ಪ್ರೀತಿ, ಪ್ರೇಮದಂತಹ ವಿಷಯಗಳಿಗೆ ಆಕರ್ಷಿತರಾಗಿ ಚಟಗಳ ದಾಸರಾಗುತ್ತಾರೆ. ಈ ಚಟಕ್ಕೆ ಬಿದ್ದರೆ ಅವರು ತಮ್ಮ ಅಮೂಲ್ಯ ಸಮಯ ಕಳೆದುಕೊಂಡು ಬಿಡುತ್ತಾರೆ. ಕಲಿಕೆಯ ವಯಸ್ಸಿನಲ್ಲಿ ಇಂತಹ ದುರಾಭ್ಯಾಸಗಳು ಶಿಕ್ಷಣವನ್ನೇ ಮೊಟುಕುಗೊಳಿಸುವ ಅಪಾಯವಿದೆ. ಈ ವಯಸ್ಸಿನಲ್ಲಿ ಮಕ್ಕಳು ಇದನ್ನು ಬಿಟ್ಟು ಶಿಕ್ಷಣಕ್ಕೆ ಆದ್ಯತೆ ನೀಡಿ ತಮ್ಮ ಜೀವನ್ನು ಉಜ್ವಲಗೊಳಿಸಕೊಳ್ಳಬೇಕು ಎಂದು ಹೇಳಿದರು.ಸಿವಿಲ್ ನ್ಯಾಯಾಧೀಶ ಆಕರ್ಷ್ ಮಾತನಾಡಿ, ಕಾನೂನು ಎಂದರೆ ನಮ್ಮ ವಿವೇಚನಾ ಶಕ್ತಿಯಾಗಿದೆ. ನಾವು ನಮ್ಮ ವಿವೇಚನೆಯನ್ನು ಒಳ್ಳೆಯದಕ್ಕೆ ಬಳಸಿಕೊಂಡರೆ ಕೃತ್ಯಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.
ಮಕ್ಕಳ ರಕ್ಷಣೆಗೆ ಅನೇಕ ಕಾನೂನುಗಳಿದ್ದರೂ ಪೋಕ್ಸೋ ಹಾಗೂ ಬಾಲ್ಯ ವಿವಾಹದಲ್ಲಿ ನಮ್ಮ ಜಿಲ್ಲೆ 3ನೇ ಸ್ಥಾನದಲ್ಲಿರುವುದು ದುರದೃಷ್ಟ. 73 ಸಾವಿರಕ್ಕೂ ಹೆಚ್ಚು ಕಾನೂನುಗಳು ನಮ್ಮ ದೇಶದಲ್ಲಿದ್ದು ಎಲ್ಲವನ್ನೂ ತಿಳಿದುಕೊಳ್ಳುವುದು ಕಷ್ಟವಾಗುತ್ತದೆ. ಆದರೆ ನಮ್ಮ ವಿವೇಚನೆಯಲ್ಲಿ ಒಳಿತು ಮಾಡುವ ಮನಸ್ಸು ಇದ್ದಲ್ಲಿ ಅಪರಾಧ ಕೃತ್ಯಗಳು ಕಡಿಮೆಯಾಗುತ್ತವೆ ಎಂದರು.ಕಾನೂನಿಗೆ ಶಿಕ್ಷೆ ಕೊಡುವ ಶಕ್ತಿ ಮಾತ್ರ ಇದೆ. ಆದರೆ ಅಪರಾಧ ಮಾಡುವ ಮನೋಭಾವನೆಯ ವ್ಯಕ್ತಿ ಇದರಿಂದ ತನ್ನ ಹಾಗೂ ತನ್ನ ಇಡೀ ಕುಟುಂಬದ ನೆಮ್ಮದಿ ಕಳೆದುಕೊಳ್ಳುತ್ತಾನೆ. ಹಾಗಾಗಿ ಪ್ರತಿಯೊಬ್ಬರೂ ಕಾನೂನನ್ನು ಗೌರವಿಸಿ ಹಾಗೂ ಅಪರಾಧ ಕೃತ್ಯದಿಂದ ದೂರವಿರಬೇಕು. ವಿದ್ಯಾರ್ಥಿಗಳು ಕಲಿಕೆಯನ್ನು ತಮ್ಮ ಜ್ಞಾನಾರ್ಜನೆ ದೃಷ್ಟಿಯಿಂದ ಕಲಿತರೆ ಫಲಿತಾಂಶ ತಾನಾಗಿಯೇ ಬರುತ್ತದೆ ಎಂದು ಹೇಳಿದರು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾವನ್ನು ನಡೆಸಲಾಯಿತು.
ಬಿಇಒ ಮಾರಯ್ಯ, ಸಿಪಿಐ ಶ್ರೀಕಾಂತ್, ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ನಂಜುಂಡಯ್ಯ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್, ವೈ.ಎಂ.ಮಲ್ಲಿಕಾರ್ಜುನಸ್ವಾಮಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿಜಯ ಪಿಎಸ್‌ಐ ಕರಿಬಸಪ್ಪ, ಗ್ರೀನ್ ಸಂಸ್ಥೆಯ ಮಹಾದೇವಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣ ಘಟಕದ ಸಾಂಸ್ಥಿಕ ಅಧಿಕಾರಿ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ, ಸರಸ್ವತಿ, ರೇಚಣ್ಣ, ಮಹಿಳಾ ಸಾಂತ್ವನ ಕೇಂದ್ರದ ಕವಿತಾ, ಉಷಾ, ಶಿವಮ್ಮ ಇದ್ದರು.