ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಓದಿಗೆ ಜ್ಯೋತಿ ಬಾಫುಲೆ, ಸಾವಿತ್ರಿಬಾಯಿ ಫುಲೆ ದಂಪತಿ ಪ್ರೇರಣೆಯಾಗಿದ್ದರು ಎಂದು ಪ್ರಾಂಶುಪಾಲ ಡಾ.ಪಿ.ದೇವರಾಜು ಹೇಳಿದರು. ನಗರದ ಪರಿವರ್ತನ ಅಧ್ಯಯನ ಕೇಂದ್ರದಲ್ಲಿ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ 194ನೇ ಜನ್ಮದಿನ ಮತ್ತು ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಂಬೇಡ್ಕರ್ ತಂದೆ ರಾಮಜಿ ಸಕ್ಪಾಲ್ ಜ್ಯೋತಿ ಬಾಫುಲೆ ಅವರು ತೆರೆದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಶಿಕ್ಷಣದ ಮಹತ್ವ ತಿಳಿದುಕೊಂಡಿದ್ದರು. ತಂದೆಯವರ ಆಶಯದಂತೆ ಅಂಬೇಡ್ಕರ್ ಬಾಲ್ಯದಲ್ಲಿ ತುಂಬಾ ಕಷ್ಟದಿಂದ ಉನ್ನತ ಮಟ್ಟದ ವಿದ್ಯಾಭ್ಯಾಸ ಮಾಡಿ ವಿಶ್ವಜ್ಞಾನಿಯಾಗಿದ್ದಾರೆ ಎಂದರು. ಜ್ಯೋತಿ ಬಾಫುಲೆ ಪೂನಾದ ಗಂಜಾಂ ಪೇಟೆಯಲ್ಲಿ ಅಸ್ಪೃಶ್ಯರಿಗೆ ಶಿಕ್ಷಣ ಕಲಿಸಿದರು. ಶಾಲೆಗೆ ಹೆಣ್ಣು ಮಕ್ಕಳು ಬರಲು ಹಿಂಜರಿಯುತ್ತಿದ್ದ ಸಂದರ್ಭದಲ್ಲಿ 1851ರಲ್ಲಿ ಕನ್ಯಾ ಶಾಲೆ ತೆರೆದು ತಮ್ಮ ಪತ್ನಿ ಸಾವಿತ್ರಿ ಬಾಯಿಫುಲೆಗೆ ಶಿಕ್ಷಕಿ ತರಬೇತಿ ಕೊಡಿಸಿ ಅವರನ್ನು ಶಿಕ್ಷಕಿಯಾಗಿ ನೇಮಕಗೊಳ್ಳುವ ಮೂಲಕ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿದರು. ಮನುವಾದಿಗಳು ಹೆಜ್ಜೆ ಹೆಜ್ಜೆಗೂ ತೊಂದರೆ ಕೊಟ್ಟರೂ ಶಿಕ್ಷಣ ಕೊಡಿಸುವ ಮೂಲಕ ಮಹಾನ್ ಸಾಧನೆ ಮಾಡಿ ಮಹಾರಾಷ್ಟ್ರದ ಬೇರೆ ಬೇರೆ ಕಡೆ 18 ಶಾಲೆ ತೆರೆದು ಮಹರ್ ಸಮುದಾಯಕ್ಕೆ ಶಿಕ್ಷಣ ಕೊಡಿಸಿದರು ಎಂದರು.
ಭೀಮ ಕೋರೆಗಾಂವ್ ವಿಜಯೋತ್ಸವ ಅಸ್ಪೃಶ್ಯರ ಸ್ವಾಭಿಮಾನಿ ವಿಜಯೋತ್ಸವವಾಗಿದೆ. 28 ಸಾವಿರ ಪೇಶ್ವೆ ಸೈನಿಕರನ್ನು 500 ಮಹರ್ ಸೈನಿಕರು ಯುದ್ಧ ಮಾಡಿ ಸೋಲಿಸುವ ಮೂಲಕ ದಲಿತರಿಗೆ ಸ್ವಾಭಿಮಾನಿ ತಂದುಕೊಟ್ಟ ಕದನ ಆಗಿದೆ. ಬುದ್ಧ, ಅಂಬೇಡ್ಕರ್, ಜ್ಯೋತಿ ಭಾಫುಲೆ, ಸಾವಿತ್ರಿ ಬಾಯಿಫುಲೆ, ಮಹರ್ ಸೈನಿಕರ ಶೌರ್ಯವನ್ನು ಸಮುದಾಯಕ್ಕೆ ತಿಳಿಸುವ ಕೆಲಸ ನಿರಂತರ ಆಗಬೇಕು ಎಂದರು.ಕೆಪಿಟಿಸಿಎಲ್ ಕಿರಿಯ ಅಭಿಯಂತರ ಎಸ್.ಸಿದ್ದರಾಜಪ್ಪ, ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎನ್.ನಾಗಯ್ಯ, ಬಿಇಒ ಹನುಮಶೆಟ್ಟಿ, ಡಾ. ಸಿ.ವಿ.ಮಾರುತಿ, ಕೆಎಸ್ ಆರ್ ಟಿಸಿ ಕಾರ್ಮಿಕ ವಿಭಾಗದ ಅಧಿಕಾರಿ ರಶ್ಮಿ, ಬಿಎಸ್ ಐ ಜಿಲ್ಲಾಧ್ಯಕ್ಷ ಆರ್.ಬಸವರಾಜು, ಕೆಪಿಟಿಸಿಲ್ ನೌಕರರ ಸಂಘದ ಉಪಾಧ್ಯಕ್ಷ ಮಹೇಶ್ ಮಾತನಾಡಿದರು.ಭಾರತೀಯ ಬೌದ್ಧ ಮಹಾಸಭಾ ಉಪಾಧ್ಯಕ್ಷ ಉಮೇಶ್ ಕುದರ್, ಮಲ್ಲಿಕ್ ಯಲಕ್ಕೂರು, ಪ್ರಧಾನ ಕಾರ್ಯದರ್ಶಿ ನಂಜುಂಡಯ್ಯ ಹರದನಹಳ್ಳಿ ಕೃಷಿ ಅಧ್ಯಯನ ಕೇಂದ್ರ ವಿಜ್ಞಾನಿ ಪ್ರಕಾಶ್, ರಾಮಸಮುದ್ರ ಪುಟ್ಟಸ್ವಾಮಿ, ಎ.ಶಿವಣ್ಣ, ಬಿಎಸ್ ಪಿ ಜಿಲ್ಲಾಧ್ಯಕ್ಷ ಬ.ಮ.ಕೃಷ್ಣಮೂರ್ತಿ ಹಾಜರಿದ್ದರು.