ಶಿಕ್ಷಣ ಕ್ರಾಂತಿಯ ಹರಿಕಾರ ಮಹಾತ್ಮ ಜ್ಯೋತಿಬಾ ಫುಲೆ ಅವರನ್ನು ಅವರ 199ನೇ ಜನ್ಮದಿನದಂದು ಸ್ಮರಿಸಿಕೊಂಡು, ಜನ್ಮ ದ್ವಿಶತಮಾನೋತ್ಸವಕ್ಕೆ ಎಐಡಿಎಸ್ಒ ವತಿಯಿಂದ ಚಾಲನೆ ನೀಡಲಾಯಿತು.
ಧಾರವಾಡ: ಶಿಕ್ಷಣ ಕ್ರಾಂತಿಯ ಹರಿಕಾರ ಮಹಾತ್ಮ ಜ್ಯೋತಿಬಾ ಫುಲೆ ಅವರನ್ನು ಅವರ 199ನೇ ಜನ್ಮದಿನದಂದು ಸ್ಮರಿಸಿಕೊಂಡು, ಜನ್ಮ ದ್ವಿಶತಮಾನೋತ್ಸವಕ್ಕೆ ಎಐಡಿಎಸ್ಒ ವತಿಯಿಂದ ಚಾಲನೆ ನೀಡಲಾಯಿತು.
ಏ. 11ರ ವರೆಗೂ ವರ್ಷವಿಡೀ ಮಹಾತ್ಮ ಫುಲೆ ಜನ್ಮ ದ್ವಿಶತಮಾನೋತ್ಸವವನ್ನು ಜಿಲ್ಲಾದ್ಯಂತ ಆಚರಿಸಲಾಗುತ್ತಿದೆ.ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಕರ್ನಾಟಕದಾದ್ಯಂತ 40000ಕ್ಕೂ ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆ ಮುಚ್ಚುವುದನ್ನು ಖಂಡಿಸಿ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸಿದ ಜಿಲ್ಲೆಯ ನೂರಾರು ಪೋಷಕರು ಮತ್ತು ಗ್ರಾಮಸ್ಥರು ಧಾರವಾಡಕ್ಕೆ ಮರಳಿದರು. ಈ ಸಂದರ್ಭದಲ್ಲಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಜ್ಯೋತಿಬಾ ಫುಲೆ ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಮಾತನಾಡಿ, “ಶಿಕ್ಷಣವನ್ನು ಸಮಾಜದ ಕೆಲವೇ ಕೆಲವು ಮೇಲ್ಜಾತಿಯ ಜನರಿಗೆ ಸೀಮಿತವಾಗಿರಿಸಿದ್ದ ಕ್ರೂರ ಜಾತಿ ವ್ಯವಸ್ಥೆಯ ವಿರುದ್ಧ ಜ್ಯೋತಿಬಾ ಸಮರ ಸಾರಿದರು. ಎಲ್ಲರಿಗೂ ಮುಕ್ತವಾಗಿ ಶಿಕ್ಷಣ ದೊರೆಯಬೇಕು ಮತ್ತು ಸಂಖ್ಯೆ ಎಷ್ಟೇ ಇದ್ದರೂ ಸರ್ಕಾರ ಶಿಕ್ಷಣವನ್ನು ಎಲ್ಲರಿಗೂ ಖಾತ್ರಿ ಪಡಿಸಬೇಕು ಎಂದು ಜ್ಯೋತಿಬಾ ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಅವರೇ ಸ್ವತಃ ಸ್ನೇಹಿತರ ಸಹಾಯದಿಂದ ಶಾಲೆಗಳನ್ನು ತೆರೆದರು. ಬ್ರಿಟಿಷ್ ಸರ್ಕಾರ ಈ ದೇಶದ ದುಡಿಯುವ ವರ್ಗವಾದ ಬಡ ರೈತ-ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಒದಗಿಸುವಂತೆ ಒತ್ತಾಯಿಸಿದರು.ಅನೇಕ ಕಷ್ಟ-ಕಾರ್ಪಣ್ಯಗಳನ್ನು ಎದುರಿಸಿ ತಮ್ಮ ಇಡೀ ಜೀವನವನ್ನು ಸಾಮಾಜಿಕ ಪರಿವರ್ತನೆಗೆ ಮುಡಿಪಾಗಿಟ್ಟರು. ಜಾತಿ ವ್ಯವಸ್ಥೆ ವಿರುದ್ಧ ಸಮಾನತೆಯ ಸಮರ ಸಾರಿದರು. ಆದರೆ, ಇಲ್ಲಿ ವರೆಗೂ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳೂ ಮಹಾನ್ ವ್ಯಕ್ತಿಗಳ ಆಶಯಗಳನ್ನು ಗಾಳಿಗೆ ತೂರಿ ಶಿಕ್ಷಣವನ್ನು ವ್ಯಾಪಾರದ ಸರಕನ್ನಾಗಿಸುತ್ತಿದ್ದಾರೆ. ಇದೇ ವರ್ಷ ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಹೆಸರಿನಲ್ಲಿ ರಾಜ್ಯದಲ್ಲಿ 40,000 ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಕೇವಲ ಧಾರವಾಡ ಜಿಲ್ಲೆಯೊಂದರಲ್ಲೇ 600ಕ್ಕೂ ಅಧಿಕ ಶಾಲೆ ಮುಚ್ಚುತ್ತಿರುವುದನ್ನು ವಿರೋಧಿಸಿ ಈಗಾಗಲೇ ಜಿಲ್ಲಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಜ್ಯೋತಿ ಬಾಪುಲೆ ಅವರ ಶತಮಾನೋತ್ಸವದ ಹಿನ್ನೆಲೆಯಲ್ಲಿ ಅವರ ಆಶಯಗಳನ್ನು ಸಾಕಾರಗೊಳಿಸುವಂತೆ ಚಳವಳಿಯನ್ನು ಬುಡಮಟ್ಟದಲ್ಲಿ ಕಟ್ಟಿ ಬೆಳೆಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ನಮ್ಮೂರ ಶಾಲೆ ಉಳಿಸುವ ಐತಿಹಾಸಿಕ ಹೋರಾಟವನ್ನು ಬಲಪಡಿಸುವ ನಿಟ್ಟಿನಲ್ಲಿ ಶಿಕ್ಷಣ ಕ್ರಾಂತಿಯ ಹರಿಕಾರ ಮಹಾತ್ಮ ಪುಲೆ ಅವರ ಸಂದೇಶಗಳನ್ನು ಹಳ್ಳಿಯಲ್ಲಿ ಸಾರುವ ಸಂಕಲ್ಪ ತೆಗೆದುಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷ ಮಲ್ಲೇಶ್ ಕಟಗಿ, ಉಪಾಧ್ಯಕ್ಷ ವೀರಭದ್ರಯ್ಯ ಚಿಕ್ಕಮಠ ಸದಸ್ಯರಾದ ಹನುಮಂತು ಉಣಕಲ್, ನಾಗಪ್ಪ ಏಣಿ, ನಿಂಗಪ್ಪ, ಸಂಗಪ್ಪ, ಶಾಂತೇಶ್, ಸಿದ್ದು ಹಾಗೂ ನೂರಾರು ಜನರು ಪಾಲ್ಗೊಂಡಿದ್ದರು.