ರಾಮನಗರ: ಮಕ್ಕಳಲ್ಲಿ ಮಾನವೀಯ ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸುವ ನಿಟ್ಟಿನಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‌ಒ) ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನ ಕೆಲ ಹಳ್ಳಿಗಳಲ್ಲಿ ಒಂದು ದಿನದ ವಿಶೇಷ ಮಕ್ಕಳ ಶಿಬಿರ ನಡೆಸಿತು

ರಾಮನಗರ: ಮಕ್ಕಳಲ್ಲಿ ಮಾನವೀಯ ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸುವ ನಿಟ್ಟಿನಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‌ಒ) ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನ ಕೆಲ ಹಳ್ಳಿಗಳಲ್ಲಿ ಒಂದು ದಿನದ ವಿಶೇಷ ಮಕ್ಕಳ ಶಿಬಿರ ನಡೆಸಿತು.

ರಾಮನಗರ ತಾಲೂಕಿನ ತಿಮ್ಮೇಗೌಡನದೊಡ್ಡಿ ಹಾಗೂ ಚನ್ನಪಟ್ಟಣ ತಾಲೂಕಿನ ಕನ್ನಿದೊಡ್ಡಿ, ಹೂಡಿಕೆಹೊಸಹಳ್ಳಿ ಮತ್ತು ಸಂತೇಮೊಗೇನಹಳ್ಳಿಗಳಲ್ಲಿ ನಡೆದ ಒಂದು ದಿನದ ವಿಶೇಷ ಶಿಬಿರದಲ್ಲಿ ಮಕ್ಕಳಿಗಾಗಿ ನಾಟಕದ ಆಟಗಳು, ಮತ್ತು ವಿವಿಧ ಸಾಂಸ್ಕೃತಿಕ-ಸೃಜನಶೀಲ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.

ಶಿಬಿರದ ಮೊದಲ ಗೋಷ್ಠಿಯಲ್ಲಿ ಮಾತನಾಡಿದ ಎಐಡಿಎಸ್‌ಒ ಜಿಲ್ಲಾ ಸಂಚಾಲಕ ಎಂ.ಆರ್.ರೋಹಿತ್, ಮಹಾತ್ಮ ಜ್ಯೋತಿ ಬಾ ಫುಲೆ ಅವರ ಜೀವನ ಹಾಗೂ ಶೋಷಣೆ ವಿರುದ್ಧ ಸಮಾನ ಶಿಕ್ಷಣಕ್ಕಾಗಿ ಅವರು ನಡೆಸಿದ ಹೋರಾಟ ಇಂದಿಗೂ ಸ್ಫೂರ್ತಿದಾಯಕ. ನೂರಾರು ವರ್ಷಗಳ ಕತ್ತಲೆಯನ್ನು ಓಡಿಸಿ, ಪ್ರತಿಯೊಬ್ಬರಿಗೂ ಉಚಿತ ಹಾಗೂ ಸಾರ್ವತ್ರಿಕ ಶಿಕ್ಷಣ ದೊರೆಯಬೇಕೆಂದು ಫುಲೆ ದಂಪತಿಗಳು ಶಾಲೆಗಳನ್ನು ಪ್ರಾರಂಭಿಸಿದರು. ಅವರ ಹೋರಾಟದ ಫಲವಾಗಿಯೇ ಇಂದು ಕೆಳ ಸಮುದಾಯಗಳು ಹಾಗೂ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವಂತಾಗಿದೆ ಎಂದು ಸ್ಮರಿಸಿದರು.

ಪ್ರಸ್ತುತ ಸರ್ಕಾರಗಳು ಕೆಪಿಎಸ್ ಮ್ಯಾಗ್ನೆಟ್ ಯೋಜನೆಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದು, ಬಡ ಹಾಗೂ ಮಧ್ಯಮ ವರ್ಗದ ಮಕ್ಕಳನ್ನು ಶಿಕ್ಷಣದಿಂದ ವಂಚಿಸುತ್ತಿವೆ. ಜೊತೆಗೆ, ಮೌಲ್ಯಾಧಾರಿತ ಪಠ್ಯದ ಕೊರತೆ, ಮಾದಕ ದ್ರವ್ಯಗಳ ಹಾವಳಿ ಹಾಗೂ ಅಶ್ಲೀಲ ಸಿನಿಮಾಗಳ ಪ್ರಭಾವದಿಂದ ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಫುಲೆ ಅವರ ಆದರ್ಶಗಳನ್ನು ಎತ್ತಿಹಿಡಿದು, ನಮ್ಮೂರಿನ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ವಿದ್ಯಾರ್ಥಿ ಸಮುದಾಯವು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಕರೆ ನೀಡಿದರು.

ಎಐಡಿಎಸ್ ಒ ಜಿಲ್ಲಾ ಸೆಕ್ರೆಟೇರಿಯಟ್ ಸದಸ್ಯರಾದ ನವಾಜ್ ಮಾತನಾಡಿ, ಬುಡಕಟ್ಟು ಜನಾಂಗದಲ್ಲಿ ಜನಿಸಿದ ಅಸಮಾನ್ಯ ಬಾಲಕ ಏಕಲವ್ಯನ ವಿದ್ಯೆ ಕಲಿಯುವ ಛಲ, ಗುರುಗಳ ಮೇಲಿನ ಅಪಾರ ಶ್ರದ್ಧೆ ಮತ್ತು ಶೋಷಿತ ಜನಾಂಗದ ಮೇಲಿನ ಪ್ರೀತಿ ಏಕಲವ್ಯನನ್ನು ಮಹಾನ್ ವ್ಯಕ್ತಿತ್ವವನಾಗಿಸಿದೆ. ಇತಿಹಾಸದಲ್ಲಿ ಮಹಾನ್ ವ್ಯಕ್ತಿಗಳಾದವರೆಲ್ಲರೂ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತವರೇ ಆಗಿದ್ದಾರೆ. ಇಂದಿನ ವಿದ್ಯಾರ್ಥಿಗಳು ಸಹ ಇಂತಹ ಉನ್ನತ ಸಾಮಾಜಿಕ ಕಾಳಜಿಯೊಂದಿಗೆ ವ್ಯಾಸಂಗ ಮಾಡಬೇಕು ಎಂದು ತಿಳಿಸಿದರು.

ಶಿಬಿರದಲ್ಲಿ ಎಐಡಿಎಸ್ ಒ ಬೆಂಗಳೂರು ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯೆ ಹಂಸ, ಕಾರ್ಯಕರ್ತರಾದ ಸಂಜಯ್, ರಾಜಶೇಖರ್ ಹಾಗೂ ರಾಹುಲ್ ಉಪಸ್ಥಿತರಿದರು.

26ಕೆಆರ್ ಎಂಎನ್ 1.ಜೆಪಿಜಿ

ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್ ಒ) ವತಿಯಿಂದ ವಿಶೇಷ ಮಕ್ಕಳ ಶಿಬಿರ ನಡೆಯಿತು.