ಗದಗ: ಸಹಕಾರಿ ಕ್ಷೇತ್ರದ ಧೀಮಂತ ನಾಯಕ, ನಾಡು ಮೆಚ್ಚಿದ ಜನಪ್ರಿಯ ಧುರೀಣ ದಿ. ಕೆ.ಎಚ್. ಪಾಟೀಲರ 101ನೇ ಜನ್ಮದಿನಾಚರಣೆ ಕಾರ್ಯಕ್ರಮ ಸೋಮವಾರ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಅತ್ಯಂತ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಜರುಗಿತು.

ಈ ಸಂಭ್ರಮವು ಕೇವಲ ಆಚರಣೆಗೆ ಸೀಮಿತವಾಗದೆ, ಹಿರಿಯರಿಗೆ ಗೌರವ ಹಾಗೂ ಬಡವರ ಆರೋಗ್ಯ ಸೇವೆಗೆ ಸಮರ್ಪಿತವಾದ ಹತ್ತಾರು ಯೋಜನೆಗಳ ಚಾಲನೆ ಸೇರಿದಂತೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು. ​ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ ಸಚಿವರು ಹಾಗೂ ಉತ್ತರ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಿ ದಿ. ಕೆ. ಎಚ್. ಪಾಟೀಲರ ಸೇವೆಯನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಕಾನೂನು ಸಚಿವ ಎಚ್. ಕೆ. ಪಾಟೀಲ, ರೋಣ ಶಾಸಕ ಜಿ.ಎಸ್.ಪಾಟೀಲ, ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಜಿಲ್ಲೆಯ ಎಲ್ಲ ಮಾಜಿ ಸಚಿವರು, ಮಾಜಿ ಸಂಸದರು, ಸ್ಥಳೀಯ ಸಂಸ್ಥೆಗಳ ಸದಸ್ಯರು, ಜಿಪಂ, ತಾಪಂ, ಗ್ರಾಪಂ ಮಾಜಿ ಸದಸ್ಯರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.

​101 ಒಡನಾಡಿಗಳಿಗೆ ಸನ್ಮಾನ:

​ಈ ಬಾರಿಯ ಜನ್ಮ ದಿನಾಚರಣೆಯ ಅತ್ಯಂತ ಭಾವುಕ ಮತ್ತು ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು. ದಿ. ಕೆ.ಎಚ್. ಪಾಟೀಲರ ಜತೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದ ಅವರ 101 ಅಪರೂಪದ ಒಡನಾಡಿಗಳನ್ನು ಸನ್ಮಾನಿಸಲಾಯಿತು. ​ದಿ. ಕೆ.ಎಚ್. ಪಾಟೀಲರ ಜೀವನ ಪಯಣದಲ್ಲಿ ಹೆಗಲು ಕೊಟ್ಟು ಅವರನ್ನು ಬೆಳೆಸಿದವರು, ಅವರ ಹಲವಾರು ಹೋರಾಟಗಳಲ್ಲಿ ಸಾಥ್ ನೀಡಿದವರು. ಅವರಿಗೆ ಊಟ ಸಿದ್ಧಪಡಿಸಿ ನೀಡಿದವರು ಸೇರಿದಂತೆ 101 ಹಿರಿಯ ಜೀವಿಗಳನ್ನು ಗುರುತಿಸಿ, ಅವರನ್ನು ಸನ್ಮಾನಿಸಿ ಹಿರಿಯರನ್ನು ಪ್ರೀತಿಸುವ ಔದಾರ್ಯಕ್ಕೆ ಕಾರ್ಯಕ್ರಮ ಹೊಸ ಭಾಷೆ ಬರೆಯಿತು. ಈ ದೃಶ್ಯವು ನೆರೆದಿದ್ದ ಕೆ.ಎಚ್.ಪಾಟೀಲರ ಹಿರಿಯ ಅಭಿಮಾನಿ ಜೀವಗಳ ಕಣ್ಣು ತುಂಬುವಂತೆ ಮಾಡಿತು.ಕ್ರಾಂತಿಕಾರಿ ಕೊಡುಗೆಗಳು


ದಿ. ಕೆ.ಎಚ್. ಪಾಟೀಲರ ಜಯಂತಿ ಕಾರ್ಯಕ್ರಮವನ್ನು ಕೇವಲ ಒಂದು ಕಾರ್ಯಕ್ರಮನ್ನಾಗಿ ಮಾಡದೇ ​ಜನರ ಆರೋಗ್ಯದ ಹಿತದೃಷ್ಟಿಯಿಂದ ಎಚ್.ಕೆ. ಪಾಟೀಲರ ಸೇವಾ ತಂಡ ಮತ್ತು ಹುಲಕೋಟಿ ಆರ್‌ಎಂಎಸ್ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಜನಮುಖಿ ಯೋಜನೆಗಳಿಗೆ ಸೋಮವಾರ ಚಾಲನೆ ನೀಡಲಾಯಿತು.

ಪ್ರಮುಖವಾಗಿ ವರ್ಷದಲ್ಲಿ 100 ಉಚಿತ ಕೀಲು ಬದಲಾವಣೆ, 12 ಉಚಿತ ಕಿಡ್ನಿ ಕಸಿ ಹಾಗೂ 1000 ಉಚಿತ ಮೋತಿಬಿಂದು ಶಸ್ತ್ರಚಿಕಿತ್ಸೆಗಳನ್ನು ಮಾಡುವ ಸಂಕಲ್ಪ ಮಾಡಲಾಯಿತು. ಹುಲಕೋಟಿ ಆಸ್ಪತ್ರೆಯಲ್ಲಿ ಹೆಣ್ಣುಮಗುವಿನ ಹೆರಿಗೆಯಾದಲ್ಲಿ ಅದರ ಸಂಪೂರ್ಣ ವೆಚ್ಚವನ್ನು ಭರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲಾಯಿತು.

ಜಿಲ್ಲಾ ಆಸ್ಪತ್ರೆಗೆ ನಿತ್ಯವೂ ಚಿಕಿತ್ಸೆಗಾಗಿ ಬರುವ ಸಾವಿರಾರು ಬಡವರಿಗೆ ಬುತ್ತಿ ಯೋಜನೆಯಡಿಯಲ್ಲಿ ಶುಚಿ, ರುಚಿಯಾದ ಊಟ ಕೊಡುವ ಯೋಜನೆ ಹಾಗೂ ಹುಲಕೋಟಿ ರಾಜೇಶ್ವರಿ ವಿದ್ಯಾನಿಕೇತನ ಶಾಲೆಯಲ್ಲಿ ಕೊಠಡಿಗಳ ಸಂಕೀರ್ಣ ಲೋಕಾರ್ಪಣೆಗೊಳಿಸಲಾಯಿತು. ಪ್ರತಿವರ್ಷವೂ ಹೊಸ ಜನಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಚಿವ ಎಚ್.ಕೆ. ಪಾಟೀಲರ ಸೇವಾ ತಂಡವು ಜಿಲ್ಲೆಯ ಅಭಿವೃದ್ಧಿ ಹಾಗೂ ಜನಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ​ಗದಗ- ಬೆಟಗೇರಿ ಅವಳಿ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕೆ.ಎಚ್. ಪಾಟೀಲರ ಅಭಿಮಾನಿಗಳಿಗೆ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿತ್ತು.