ಕೆ.ಆರ್.ಪೇಟೆ: ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ ಮೂರನೇ ದಿನಕ್ಕೆ

| Published : Feb 13 2025, 12:45 AM IST

ಕೆ.ಆರ್.ಪೇಟೆ: ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ ಮೂರನೇ ದಿನಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ತಳಮಟ್ಟದ ಸಮಸ್ಯೆಗಳ ಪರಿಹಾರಕ್ಕೆ ಗ್ರಾಮ ಆಡಳಿತಾಧಿಕಾರಿಗಳಿಂದ ಬೇಕಾದ ವರದಿಗಳು, ಟಿಪ್ಪಣಿಗಳು ಮತ್ತು ಫೈಲುಗಳು ರಚನೆಯಾಗಿ ಶಿರಸ್ತೆದಾರರು ಮತ್ತು ತಹಸೀಲ್ದಾರರ ಕಛೇರಿಗೆ ಸಲ್ಲಿಕೆಯಾಗದಿರುವುದರಿಂದ ಶ್ರೀ ಸಾಮಾನ್ಯರು ಮತ್ತು ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತಾಧಿಕಾರಿಗಳು ತಾಲೂಕಿನ ಮಿನಿ ವಿಧಾನಸೌಧದ ಮುಂದೆ ಆರಂಭಿಸಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದಿಂದ ಕಂದಾಯ ಇಲಾಖೆ ಕಾರ್ಯಗಳು ಅಸ್ತವ್ಯಸ್ತಗೊಂಡಿವೆ. ಪಹಣಿ ತಿದ್ದುಪಡಿ, ಖಾತೆ ಮಾಡುವುದು, ಆದಾಯ ಧೃಡೀಕರಣ ಪತ್ರ ಪಡೆಯುವುದು ಸೇರಿದಂತೆ ಕಂದಾಯ ಎಲ್ಲಾ ಕಾರ್ಯಗಳು ಸ್ಥಗಿತಗೊಂಡಿವೆ.

ಇದರಿಂದ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ರೈತರು ತಹಸೀಲ್ದಾರ್ ಕಚೇರಿಗೆ ಅಲೆಯುತ್ತಿದ್ದಾರೆ. ರೈತರ ತಳಮಟ್ಟದ ಸಮಸ್ಯೆಗಳ ಪರಿಹಾರಕ್ಕೆ ಗ್ರಾಮ ಆಡಳಿತಾಧಿಕಾರಿಗಳಿಂದ ಬೇಕಾದ ವರದಿಗಳು, ಟಿಪ್ಪಣಿಗಳು ಮತ್ತು ಫೈಲುಗಳು ರಚನೆಯಾಗಿ ಶಿರಸ್ತೆದಾರರು ಮತ್ತು ತಹಸೀಲ್ದಾರರ ಕಛೇರಿಗೆ ಸಲ್ಲಿಕೆಯಾಗದಿರುವುದರಿಂದ ಶ್ರೀ ಸಾಮಾನ್ಯರು ಮತ್ತು ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಫೈಲ್‌ಗಳನ್ನು ವಿಲೇವಾರಿ ಮಾಡಲು ಅಗತ್ಯ ವರದಿ ಮತ್ತು ಟಿಪ್ಪಣಿಗಳು ಗ್ರಾಮ ಆಡಳಿತಧಿಕಾರಿಗಳಿಂದ ಕಚೇರಿಗೆ ಬಾರದ ಕಾರಣ ತಹಸೀಲ್ದಾರರು ರೈತರ ಪ್ರಶ್ನೆಗಳಿಗೆ ಉತ್ತರಿಸಲು ಪರದಾಡುತ್ತಿದ್ದಾರೆ. ಗ್ರಾಮ ಆಡಳಿತಧಿಕಾರಿಗಳ ಮುಷ್ಕರ ನಿಲ್ಲುವವರೆಗೆ ಸಹಕರಿಸುವಂತೆ ರೈತ ಸಮುದಾಯವನ್ನು ಮನವೊಲಿಸಲು ತಹಸೀಲ್ದಾರರು ಹರಸಾಹಸ ಪಡುತ್ತಿದ್ದಾರೆ.

ಮುಷ್ಕರಕ್ಕೆ ತಾಲೂಕು ಸರ್ಕಾರಿ ನೌಕರರ ಸಂಘ ಮತ್ತು ಆಟೋ ಚಾಲಕರ ಸಂಘಗಳು ಬೆಂಬಲ ವ್ಯಕ್ತಪಡಿಸಿವೆ. ಮುಷ್ಕರದ ಸ್ಥಳಕ್ಕೆ ತಾಲೂಕು ಸರ್ಕರಿ ನೌಕರರ ಸಂಘದ ಅಧ್ಯಕ್ಷ ಆನಂದಕುಮಾರ್ ನೇತೃತ್ವದಲ್ಲಿ ಆಗಮಿಸಿದ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸುವ ಮೂಲಕ ತಮ್ಮ ಬೆಂಬಲ ಪ್ರಕಟಿಸಿದರು.

ಈ ವೇಳೆ ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಜಯರಾಂ, ಸತೀಶ್ ಕುಮಾರ್, ವಿನಯ್, ರಾಜ್ಯ ಪರಿಷತ್ ಸದಸ್ಯ ಧರ್ಮಣ್ಣ, ತಾಲೂಕು ಆಟೋ ಚಾಲಕರ ಸಂಘದ ಅಧ್ಯಕ್ಷ ವಾಸು, ಗ್ರಾಮ ಆಡಳಿತಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಹರೀಶ್, ತಮ್ಮಣ್ಣಗೌಡ ಸೇರಿದಂತೆ ಹಲವರು ಮುಷ್ಕರದಲ್ಲಿದ್ದರು.