ಕೆ.ಆರ್‌.ಪೇಟೆ: ನಾಗರಿಕರ ಸಮಸ್ಯೆ ಪರಿಹರಿಸುವಂತೆ ಒತ್ತಾಯ

| Published : Jan 26 2024, 01:47 AM IST

ಸಾರಾಂಶ

ಪಟ್ಟಣದ ನಾಗರೀಕ ಸಮಸ್ಯೆಗಳನ್ನು ಪರಿಹರಿಸುವಂತೆ ನಾಗರಿಕ ಹಿತರಕ್ಷಣಾ ಸಮಿತಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್‌. ಲೋಕೇಶ್ ಅವರನ್ನು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್‌.ಪೇಟೆ

ಪಟ್ಟಣದ ನಾಗರೀಕ ಸಮಸ್ಯೆಗಳನ್ನು ಪರಿಹರಿಸುವಂತೆ ನಾಗರಿಕ ಹಿತರಕ್ಷಣಾ ಸಮಿತಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್‌. ಲೋಕೇಶ್ ಅವರನ್ನು ಒತ್ತಾಯಿಸಿದರು.

ಸಮಿತಿ ಅಧ್ಯಕ್ಷ ಬೊಪ್ಪನಹಳ್ಳಿ ಬಸವೇಗೌಡ ನೇತೃತ್ವದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿಗೆ ಆಗಮಿಸಿದ ಸಮಿತಿ ಸದಸ್ಯರು ಪೌರ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ಪಟ್ಟಣ ದಿನೇ ದಿನೇ ಬೆಳವಣಿಗೆಯಾಗುತ್ತಿದೆ. ಹೊಸ ಹೊಸ ಬಡಾವಣೆಗಳು ತಲೆಯೆತ್ತುತ್ತಿವೆ. ಇಲ್ಲಿ ದೈನಂದಿನ ವ್ಯವಹಾರಕ್ಕೆ ಗ್ರಾಮೀಣ ಪ್ರದೇಶದಿಂದ ನಿತ್ಯ ಸಾವಿರಾರು ಜನ ಬಂದು ಹೋಗುತ್ತಾರೆ. ಹತ್ತಾರು ಶಿಕ್ಷಣ ಸಂಸ್ಥೆಗಳಿದ್ದು ನಿತ್ಯ ಸಾವಿರಾರು ವಿದ್ಯಾರ್ಥಿಗಳು ಪಟ್ಟಣಕ್ಕೆ ಕಲಿಯಲು ಬರುತ್ತಾರೆ ಎಂದರು.

ಪಟ್ಟಣದಲ್ಲಿ ಮಿತಿ ಮೀರಿದ ವಾಹನ ಸಂಚಾರವಿದೆ. ಆದರೆ, ಪಾದಚಾರಿಗಳು ಸಂಚರಿಸಲು ಫುಟ್‌ಪಾತ್ ವ್ಯವಸ್ಥೆ ಇಲ್ಲ. ರಸ್ತೆ ಬದಿಯ ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರು ಫುಟ್ ಪಾತ್ ಅತಿಕ್ರಮಣ ಮಾಡಿದ್ದು ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಜೀವಭಯದಲ್ಲಿಯೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಫುಟ್‌ಪಾತ್‌ನಲ್ಲಿ ಜನರ, ಮಕ್ಕಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ನಾಗರಿಕ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಕೆ.ಎಸ್. ಸುರೇಶ್ ಕುಮಾರ್ ಆಗ್ರಹಿಸಿದರು.

ಒಳಚರಂಡಿ ಯೋಜನೆ ಪೂರ್ಣಗೊಳ್ಳದೆ ಬಹುತೇಕ ಕಡೆ ಮ್ಯಾನ್ ವೋಲ್‌ಗಳು ಉಕ್ಕಿ ಹರಿಯುತ್ತಿವೆ. ಮಲೀನ ನೀರು ಕೆಲವು ಕಡೆ ಕುಡಿಯುವ ನೀರಿನ ಸಂಪರ್ಕವಿರುವ ಪೈಪುಗಳಿಗೂ ಸೇರಿ ತ್ಯಾಜ್ಯ ನೀರನ್ನು ಕುಡಿಯುವ ಪರಿಸ್ಥಿತಿ ಇದೆ ಸುರೇಶ್ ಕುಮಾರ್ ಹೇಳಿದರು.

ಚರಂಡಿ ನೀರು ರಸ್ತೆಯ ಒಂದು ಕಡೆ ಹರಿದರೆ ಮತ್ತೊಂದು ಕಡೆ ರಸ್ತೆಯಲ್ಲಿಯೇ ನಿಲ್ಲುತ್ತಿದೆ. ರಸ್ತೆಯ ಎರಡೂ ಬದಿಯಲ್ಲೂ ಡ್ರೈನೇಜ್ ನಿರ್ಮಿಸಿ ಬಡಾವಣೆಗಳ ನಿವಾಸಿಗಳ ಆರೋಗ್ಯವನ್ನು ಕಾಪಾಡಿ ಎಂದು ಮನವಿ ಮಾಡಿದರು.

ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಶಾಲಾಮಕ್ಕಳು ರಸ್ತೆಯಲ್ಲಿ ಹೋಗಲು ಎದರುತ್ತಿದ್ದಾರೆ. ಕೆಲವು ಕಡೆ ಮಕ್ಕಳು ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದಾರೆ. ಬೀದಿ ನಾಯಿಗಳ ಹಿಡಿದು ಮಕ್ಕಳು, ನಾಗರೀಕರನ್ನು ಕಾಪಾಡುವಂತೆ ಒತ್ತಾಯಿಸಿದರು.

ಹೇಮಾವತಿ ಬಡಾವಣೆಯ ನಿವೇಶನಗಳನ್ನು ಸಕ್ರಮಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ಸಕ್ರಮ ನಿವೇಶನಗಳ ಈ ಸ್ವತ್ತು ಮಾಡಿಕೊಡಲು ಪುರಸಭೆಯಲ್ಲಿ ಲಂಚ ಕೊಡಬೇಕಾದ ಸ್ಥಿತಿಯಿದೆ. ಕಂದಾಯ ಕಟ್ಟಿದ ನಂತರೂ ಇ-ಸ್ವತ್ತು ಮಾಡಲು ಸತಾಯಿಸಲಾಗುತ್ತಿದೆ. ಪುರಸಭೆಯ ಅಧ್ಯಕ್ಷರಿಲ್ಲದ ಕಾರಣ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಜವಾಬ್ದಾರಿ ವಹಿಸಿಕೊಂಡು ಎಲ್ಲಾ ನಿವೆಶನಗಳ ಇ-ಸ್ವತ್ತು ಮಾಡಿಸಿಕೊಡಬೇಕು. ಉಳಿದ ನಿವೇಶನಗಳ ಸಕ್ರಮಾತಿಗೂ ಕ್ರಮವಹಿಸುವಂತೆ ಮನವಿ ಮಾಡಿದರು.

ಈ ವೇಳೆ ಪುರಸಭೆ ಸದಸ್ಯ ಕೆ.ಎಸ್. ಪ್ರಮೋದ್ ಕುಮಾರ್, ಸಮಿತಿ ಸದಸ್ಯರಾದ ಚಾ.ಶಿ. ಜಯಕುಮಾರ್, ಬಸ್ತಿರಂಗಪ್ಪ, ಮರಡಹಳ್ಳಿ ಪುಟ್ಟಸ್ವಾಮಿ, ಮರಿಸ್ವಾಮೀಗೌಡ, ಕೃಷ್ಣೇಗೌಡ, ಕೃಷ್ಣಮೂರ್ತಿ, ಹೊಸಹೊಳಲು ವಿಶ್ವನಾಥ್, ಶಶಿಕಾಂತ್, ಶೋಭಾ ಸೇರಿದಂತೆ ಹಲವರಿದ್ದರು.