ಸಂವಿಧಾನ ಮಹಿಳೆಯರ ಪಾಲಿನ ಬೆಳಕು

| Published : Aug 21 2024, 12:30 AM IST

ಸಾರಾಂಶ

ಎರಡು ದಿನಗಳ ರಾಜ್ಯಮಟ್ಟದ ಸಂಚಿ ಹೊನ್ನಮ್ಮ ನಾಟಕೋತ್ಸವ

ಕನ್ನಡಪ್ರಭ ವಾರ್ತೆ ಮೈಸೂರು

ಬಾಲ್ಯ ವಿವಾಹ, ಮಹಿಳಾ ಕಾರ್ಮಿಕರ ಶೋಷಣೆ, ಅತ್ಯಾಚಾರ ಮೊದಲಾದ ಅನಿಷ್ಟ ಪದ್ದತಿಗಳ ವಿರುದ್ಧ ಹೋರಾಟ ರೂಪಿಸಲು ಸಂವಿಧಾನ ಮಹಿಳೆಯರ ಪಾಲಿನ ಬೆಳಕಾಗಿದೆ ಎಂದು ಹಿರಿಯರಂಗ ನಿರ್ದೇಶಕಿ ಕೆ.ಆರ್. ಸುಮತಿ ಅಭಿಪ್ರಾಯಪಟ್ಟರು.

ಕಿರುರಂಗ ಮಂದಿರದಲ್ಲಿ ಚಾಮರಾಜನಗರದ ರಂಗವಾಹಿನಿ, ನೆಲೆ ಹಿನ್ನೆಲೆ , ಜಿಪಿಐಇಆರ್ ರಂಗತಂಡಗಳ ಸಹಯೋಗದಲ್ಲಿ ನಡೆದ ಎರಡು ದಿನಗಳ ರಾಜ್ಯಮಟ್ಟದ ಸಂಚಿ ಹೊನ್ನಮ್ಮ ನಾಟಕೋತ್ಸವ ಹಾಗೂ ಸಂಚಿಹೊನ್ನಮ್ಮ ಮಹಿಳಾ ಪ್ರಶಸ್ತಿ ಪ್ರದಾನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ತ್ರೀ ಪರ ನಿಲುವಿನ ಮತ್ತು ಶೋಷಣೆಯ ವಿರುದ್ಧ ಧ್ವನಿಯಾಗಿರುವ ಗುಲಾಬಿ ಗ್ಯಾಂಗು ನಾಟಕ ಪ್ರದರ್ಶನ ನಿಜಕ್ಕೂ ಅರ್ಥಪೂರ್ಣವಾಗಿದೆ. ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂಬ ಕಾಲದಿಂದಲೂ ಆಕೆ ಶಿಕ್ಷಣ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಾನಮಾನಗಳಿಂದ ವಂಚಿತಳಾಗಿದ್ದಳು. ಇಂದು ಮಹಿಳೆ ಪ್ರಗತಿ ಸಾಧಿಸಲು ಸಂವಿಧಾನ ಮತ್ತು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಕಾರಣ ಎಂದು ಹೇಳಿದರು.ಸಂಚಿ ಹೊನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ ಮಾತನಾಡಿ, ಸಂಚಿಹೊನ್ನಮ್ಮ ಕ್ರಿಸ್ತಶಕ 1680 ರಲ್ಲಿ ಮೈಸೂರಿನ ಚಿಕ್ಕದೇವರಾಜ ಒಡೆಯರ ಸಂಚಿಯ ಊಳಿಗದಲ್ಲಿ ಇದ್ದ ಮಹಿಳೆ. ಈಕೆ ಆಗಿನ ಮೈಸೂರು ಜಿಲ್ಲೆ ಈಗಿನ ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ಹುಟ್ಟಿದವಳು. ಚಿಕ್ಕ ದೇವರಾಜರ ಪಟ್ಟದರಸಿಯಾಗಿದ್ದ ದೇವರಾಜಮ್ಮಣ್ಣಿ ಯ ಬಾಲ್ಯ ಸ್ನೇಹಿತೆ ಆಗಿದ್ದಳು. ಸಂಚಿಹೊನ್ನಮ್ಮ ಬರೆದ ಹದಿಬದೆಯ ಧರ್ಮ ಎಂಬ ಕಾವ್ಯವು ಸ್ತ್ರೀಪರ ಧೋರಣೆಯಿಂದಾಗಿ ಕನ್ನಡ ಕಾವ್ಯ ಲೋಕದಲ್ಲಿ ಹೆಸರುವಾಸಿಯಾಗಿದ್ದಾರೆ ಎಂದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ. ಎನ್. ಕೆ . ಲೋಲಾಕ್ಷಿ, ಚಾಮರಾಜನಗರ ನಗರಸಭಾ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಚಿನ್ನಮ್ಮ ಸಿದ್ದರಾಮಯ್ಯ, ರಂಗನಟಿ ನಯನ ಸೂಡ, ಚಿತ್ರ ಕಲಾವಿದೆ ಸ್ಪಂದನ ರಾಮೇಶ್ವರ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ. ಮಲ್ಲಿಕಾರ್ಜುನ ಸ್ವಾಮಿ ಅವರು ರಾಜ್ಯಮಟ್ಟದ ಸಂಚಿಹೊನ್ನಮ್ಮ ಪ್ರಶಸ್ತಿ ಪ್ರದಾನ ಮಾಡಿದರು.

ಹಾಸನದ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಡಿ.ಎಂ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಕೆರೆಹಳ್ಳಿ ವೆಂಕಟೇಶ ಪ್ರಸಿದ್ಧ ರಂಗ ನಟ ಹರಿದತ್ತ ನೆಲೆ ಹಿನ್ನೆಲೆ ಸಂಸ್ಥೆಯ ಕೆ.ಆರ್. ಗೋಪಾಲಕೃಷ್ಣ, ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, ಸಂಚಾಲಕ ರೂಬಿನ್ ಸಂಜಯ್ ಜಗ್ಗು ಜಾದುಗಾರ ಮೊದಲಾದವರು ಇದ್ದರು.

ನಂತರ ಬೆಂಗಳೂರಿನ ರಂಗ ಪಯಣ ತಂಡ ಅಭಿನಯಿಸಿದ ರಾಜಗುರು ಹೊಸಕೋಟೆ ನಿರ್ದೇಶನದ ಗುಲಾಬಿ ಗ್ಯಾಂಗು-2 ಎಂಬ ಎಂಬ ನಾಟಕ ಪ್ರೇಕ್ಷಕರ ಜನಮನ ಸೆಳೆಯಿತು.