ತಮ್ಮ ಬದುಕನ್ನೇ ಯಕ್ಷಗಾನಕ್ಕೆ ಮುಡಿಪಾಗಿಟ್ಟು ಕಲಾರಸಿಕರನ್ನು ರಂಜಿಸಿ ಯಕ್ಷಗಾನ ಬೆಳೆಸಿದ ಕಲಾವಿದರ ದುಡಿಮೆ ತಪಸ್ಸಿಗೆ ಸಮಾನ. ಯಕ್ಷಗಾನ ಕಲಾರಂಗವು ಪ್ರಶಸ್ತಿಗೆ ಕಲಾವಿದರನ್ನು ಆಯ್ಕೆ ಮಾಡುವಲ್ಲಿ ಎಲ್ಲಾ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಉಡುಪಿ : ತಮ್ಮ ಬದುಕನ್ನೇ ಯಕ್ಷಗಾನಕ್ಕೆ ಮುಡಿಪಾಗಿಟ್ಟು ಕಲಾರಸಿಕರನ್ನು ರಂಜಿಸಿ ಯಕ್ಷಗಾನ ಬೆಳೆಸಿದ ಕಲಾವಿದರ ದುಡಿಮೆ ತಪಸ್ಸಿಗೆ ಸಮಾನ. ಯಕ್ಷಗಾನ ಕಲಾರಂಗವು ಪ್ರಶಸ್ತಿಗೆ ಕಲಾವಿದರನ್ನು ಆಯ್ಕೆ ಮಾಡುವಲ್ಲಿ ಎಲ್ಲಾ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಶ್ರೀಗಳು ಯಕ್ಷಗಾನ ಕಲಾರಂಗದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಮಾನವ ಹಕ್ಕುಗಳ ಆಯೋಗದ ಸದಸ್ಯ ಡಾ. ಟಿ. ಶ್ಯಾಮ ಭಟ್ ಮಾತನಾಡಿ, ಕಲಾರಂಗ ಯಕ್ಷಗಾನ ಕಲೆ-ಕಲಾವಿದರ ಕ್ಷೇಮ ಚಿಂತನೆಗಿರುವ ಶ್ರೇಷ್ಠ ಸಂಘಟನೆ. ಎಲ್ಲಾ ಕಲಾವಿದರು ಈ ಸಂಸ್ಥೆಗೆ ಕೃತಜ್ಞರಾಗಿರಬೇಕು ಎಂದರು.ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಯಕ್ಷಗಾನ ಕಲಾವಿದರ ಮಕ್ಕಳಿಗೆ ನೀಡುವ ಯಕ್ಷವಿದ್ಯಾಪೋಷಕ್ ಸಹಾಯಧನವನ್ನು ಕಲಾವಿದರ 74 ಮಕ್ಕಳಿಗೆ 8,34,500 ರು.ಗಳನ್ನು ಸಾಂಕೇತಿಕವಾಗಿ ವಿತರಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಇತ್ತೀಚಿಗೆ ನಿಧನರಾದ ಯಕ್ಷಗಾನ ಕಲಾವಿದರ ಕುಟುಂಬಗಳಿಗೆ ತಲಾ 30,000 ರು. ಸಾಂತ್ವನ ನಿಧಿ ವಿತರಿಸಿದರು.
ಟೆಕ್ಸೆಲ್ ಪ್ರೈ.ಲಿ.ನ ಆಡಳಿತ ನಿರ್ದೇಶಕ ಹರೀಶ್ ರಾಯಸ, ಮಂಗಳೂರು ನಮ್ಮ ಕುಡ್ಲದ ಆಡಳಿತ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ, ಹೊನ್ನಾವರ ಎಂ.ಪಿ.ಇ. ಸೊಸೈಟಿಯ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾನಿ ಕೃಷ್ಣಮೂರ್ತಿ ಭಟ್ ಇದ್ದರು.ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಕೆ. ಗಣೇಶ್ ರಾವ್ ಮತ್ತು ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಸ್ವಾಮೀಜಿಯವರಿಗೆ ಫಲಪುಷ್ಪ ಸಮರ್ಪಿಸಿದರು. ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಪ್ರಶಸ್ತಿ ಪುರಸ್ಕೃತ ಕಲಾವಿದರನ್ನು ಪರಿಚಯಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು. ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ವಂದಿಸಿದರು. ಈ ಬಾರಿಯ 24 ಪ್ರಶಸ್ತಿ ಪುರಸ್ಕೃತರಿವರುರಾಮಚಂದ್ರ ಪಾಂಗಣ್ಣಾಯ ಉಡುಪಿ, ಮಾನ್ಯ ನರಸಿಂಹ ಮರಕಾಲ, ಹನುಮಂತ ಗೌಡ ಸಿದ್ದಾಪುರ, ಸರಪಾಡಿ ವಿಠಲ ಶೆಟ್ಟಿ, ಮಂಜು ಗೌಡ ಗುಣವಂತೆ, ರಾಮಚಂದ್ರ ಹೆಗಡೆ ಗುಡ್ಡೇದಿಂಬ, ಸುಬ್ರಹ್ಮಣ್ಯ ಐತಾಳ ಶಂಕರನಾರಾಯಣ, ಬೇಳಂಜೆ ಸುಂದರ ನಾಯ್ಕ, ಉಪ್ಪುಂದ ನಾಗೇಂದ್ರ ರಾವ್, ಹಾರಾಡಿ ರಮೇಶ ಗಾಣಿಗ, ಜಿ. ಎಂ. ಶಿವಾನಂದ ಗೀಜಗಾರು ಸಾಗರ, ಬಸವ ಹಟ್ಟಿಯಂಗಡಿ, ಜಯರಾಮ ಭಟ್ ಪದ್ಯಾಣ, ಶಿವಶಂಕರ ಭಟ್ ಎಚ್. ಜಿ. ಕೊಪ್ಪ, ಸುಬ್ರಹ್ಮಣ್ಯ ಗಾಣಿಗ ಸಜಿಪ, ಶ್ಯಾಮ ನಾಯ್ಕ್ ಪೇತ್ರಿ, ಆನೆಕಲ್ಲು ಗಣಪತಿ ಭಟ್, ಕೆರೆಮನೆ ಶಿವಾನಂದ ಹೆಗಡೆ, ಬಾಲಕೃಷ್ಣ ಶೆಟ್ಟಿ ತಾರಿಯಡ್ಕ, ಸಂಜು ಕುಲಾಲ, ರಾಮ ಭಟ್ ಸಬ್ಬಣಕೋಡಿ, ದಿವಾಣ ಶಿವಶಂಕರ ಭಟ್, ಕೆದಿಲ ಜಯರಾಮ ಭಟ್, ಪ್ರಭಾಕರ ಆಚಾರ್ಯ ಇಂದ್ರಾಳಿ ಅವರಿಗೆ ತಲಾ 20 ಸಾವಿರ ರು. ನಗದು ಸಹಿತ ಫಲಕ ನೀಡಿ ಸನ್ಮಾನಿಸಲಾಯಿತು.
ಶ್ರೀ ವಿನಾಯಕ ಮೇಳ, ಕೆರೆಕಾಡು ಸಂಸ್ಥೆಗೆ ಶ್ರೀ ವಿಶ್ವೇಶತೀರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ 1,00,000 ರು. ಮತ್ತು ಫಲಕವನ್ನು ನೀಡಿ ಗೌರವಿಸಲಾಯಿತು. ಕಲಾರಂಗದ ಸದಸ್ಯರಾದ ಕಿಶೋರ್ ಸಿ. ಉದ್ಯಾವರ ಅವರಿಗೆ ‘ಯಕ್ಷ ಚೇತನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.