ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಬಡವರ ಬದುಕಿನ ಅಪಾರ ಕಾಳಜಿ ವ್ಯಕ್ತಪಡಿಸುತ್ತಿದ್ದ ಕೆ. ಶಿವರಾಮ್, ಶಿಕ್ಷಣಕ್ಕೂ ಹೆಚ್ಚಿನ ಮಹತ್ವ ನೀಡುತ್ತಿದ್ದರು.ಶಾಲಾ ಕಾಲೇಜುಗಳಿಗೆ ಖುದ್ದಾಗಿ ತೆರಳಿ ಅಲ್ಲಿನ ವ್ಯವಸ್ಥೆಗಳ ಪರಿಶೀಲಿಸುತ್ತಿದ್ದ ಅವರು, ಅನೇಕ ಸಂದರ್ಭಗಳಲ್ಲಿ ಮಕ್ಕಳಿಗೆ ಪಾಠಗಳನ್ನೂ ಮಾಡಿದ್ದಾರೆ. ಕಷ್ಟದಲ್ಲಿ ಜೀವನ ಸವೆಸಿ ಮಹತ್ತರ ಸ್ಥಾನಕ್ಕೇರಿದ್ದ ತಮ್ಮ ಬದುಕು-ಬವಣೆಯ ಬಗ್ಗೆ ತಿಳಿಸುತ್ತಿದ್ದರು. ಅನೇಕ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹೊಣೆಯನ್ನೂ ಅವರು ಹೊತ್ತಿದ್ದರು ಎಂದು ಆಗ ವಿದ್ಯಾರ್ಥಿ ಸಂಘದ ನಾಯಕಾರಾಗಿದ್ದ ಮಹೇಂದ್ರ ನೆನಪಿಸಿಕೊಳ್ಳುತ್ತಾರೆ.
ಖುದ್ದು ಕಲಾವಿದರಾಗಿದ್ದ ಕೆ. ಶಿವರಾಮ್ ಅವರು, ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚು ಪ್ರೋತ್ಸಾಹಿಸುತ್ತಿದ್ದರಲ್ಲದೆ, ಬಡಜನರ ಸಾಮಾಜಿಕ - ಆರ್ಥಿಕ ಅಭಿವೃದ್ಧಿಗೆ ಅನೇಕ ಯೋಜನೆಗಳ ರೂಪಿಸಿದ್ದರು. ಅಸ್ಪೃಶ್ಯತಾ ನಿವಾರಣೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಳ್ಳಿಗಳಿಗೆ ತೆರಳಿ ಜಾಗೃತಿ ಮೂಡಿಸುವ ಬೀದಿ ನಾಟಕಗಳನ್ನು ತಂಡ ಕಟ್ಟಿಕೊಂಡು ಸ್ವತ: ಖುದ್ದಾಗಿ ಮುನ್ನೆಡೆಸುತ್ತಿದ್ದರು. ಹಾಡುಗಾರ, ಜನಪದ ಗೀತೆಗಳ ಅವರ ಗಾಯನ ಹಾಗೂ ಅವರ ಗಡ್ಡ ಬಿಟ್ಟ ಸ್ಟೈಲ್‌ಗೆ "ಫಿದಾ " ಆಗಿದ್ದ ಯುವಜನತೆ ಕೆ. ಶಿವರಾಲೇ ಮಾದರಿಯಲ್ಲೇ ಗಡ್ಡ ಬಿಡುವದನ್ನು ರೂಢಿಸಿಕೊಂಡಿದ್ದರು ಎಂದು ಮಹೇಂದ್ರ ಅಂದಿನ ಒಡನಾಟದ ಮೆಲುಕು ಹಾಕಿದರು.ರಂಗಸಂಸ್ಥೆಗಳನ್ನು ಹುಟ್ಟು ಹಾಕಿದರು. ಡಾ. ಅಂಬೇಡ್ಕರ್ ವೃತ್ತ ಬಡಾವಣೆಯ ನಮ್ಮ ಯುವಜನರ ತಂಡವೊಂದು "ಜನಪ್ರಿಯ ತರುಣ ಸಂಘ "ದ ಹೆಸರಲ್ಲಿ ಗ್ರಾಮೀಣ ಭಾಗದಲ್ಲಿ ಅನೇಕ ಸಾಂಸ್ಕೃತಿಕ ಚಟುವಟಿಕೆಗಳ ಹಮ್ಮಿಕೊಂಡು ಅರಿವು ಮೂಡಿಸುವ ಯತ್ನ ನಡೆಸಿತ್ತು ಎನ್ನುವ ಸ್ಯಾಂಸನ್ ಮಾಳಿಕೇರಿ, ದಲಿತರು ಎಂದಷ್ಟೇ ಅಲ್ಲ, ಯಾರೇ ಬಡವರಾಗಿರಲಿ ಅವರಿಗೆ ನೆರವಾಗುವ ಕೆ. ಶಿವರಾಮ್ ಸಾಹೇಬರ ಕಾರ್ಯವೈಖರಿ ಜನಜೀವನದ ಬದಲಾವಣೆಯ ಮೇಲೆ ಪರಿಣಾಮ ಬೀರಿತ್ತು ಎಂದರು.
ಇನ್ನು, ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುತ್ತಿದ್ದ ಅನ್ಯಾಯದ ವಿರುದ್ಧ ಮುಲಾಜಿಲ್ಲದ ಕಾರ್ಯಾಚರಣೆ ನಡೆಸಿದ್ದ ಕೆ. ಶಿವರಾಮ್, ಅಂತಹ ಅಂಗಡಿಗಳ ಮುಂದೆ ನಿಂತು ಆಹಾರ ಧಾನ್ಯಗಳು ಹಾಗೂ ಸೀಮೆಎಣ್ಣೆ ಹಂಚುವಿಕೆಯಲ್ಲಿ ಬಡವರಿಗೆ ನ್ಯಾಯ ದೊರಕಿಸುವಂತೆ ಮಾಡಿದ್ದರು.ಸರ್ಕಾರಿ ಆಸ್ಪತ್ರೆಯಲ್ಲೇ ಪತ್ನಿ ಹೆರಿಗೆ: ಖಾಸಗಿ ಆಸ್ಪತ್ರೆಗಳಿಗಿಂತಲೂ ಉತ್ತಮವಾದ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವಂತೆ ಮಾಡಿದ್ದ ಅವರು, ಪತ್ನಿಯ ಹೆರಿಗೆಯನ್ನೂ ಸರ್ಕಾರಿ ಆಸ್ಪತ್ರೆಯಲ್ಲೇ ಮಾಡಿಸಿದ್ದರು. ಇದು ಸರ್ಕಾರಿ ವ್ಯವಸ್ಥೆಯ ಮೇಲೆ ಜನರು ನಂಬಿಕೆ ಇಡುವಂತೆ ಮಾಡಿತ್ತು.
ಗ್ರಾಮ ವಾಸ್ತವ್ಯ ಹಾಗೂ ಗ್ರಾಮೀಣ ಭಾಗದ ಜನರ ಮನೆಗಳಿಗೆ ತೆರಳಿ ಕುಂದುಕೊರತೆ ವಿಚಾರಿಸುವ, ಗ್ರಾಮ ವಾಸ್ತವ್ಯದ ಪರಿಕಲ್ಪನೆಯನ್ನು 37 ವರ್ಷಗಳ ಹಿಂದೆಯೇ ಕೆ. ಶಿವರಾಮ್ ಶುರು ಮಾಡಿದ್ದರು.