ಮನ್‌ಮುಲ್ ಪ್ರಕರಣ ನಿಷ್ಪಕ್ಷಪಾತ ತನಿಖೆ ಪೊಲೀಸರಿಂದ ಸಾಧ್ಯವಿಲ್ಲದ ಕಾರಣ ಈ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಹಾಲಿನ ಪುಡಿಗೆ ವಿಷ ಬೆರಸುವಂತಹ ನೀಚ ಕೃತ್ಯ ನಡೆಸಿರುವ ಯಾವುದೇ ಪಕ್ಷದವರು ಇದರಲ್ಲಿ ಶಾಮೀಲಾಗಿದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಹಾಲಿನ ಪುಡಿ ಕಲಬೆರಕೆ ಹಾಗೂ ಹಾಲಿನ ಪುಡಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹಾಲು ಒಕ್ಕೂಟವನ್ನು ಸೂಪರ್ ಸೀಡ್ ಮಾಡಬೇಕು ಎಂದು ಮಾಜಿ ಶಾಸಕ ಕೆ.ಸುರೇಶ್‌ಗೌಡ ಆಗ್ರಹಪಡಿಸಿದರು.

ಪ್ರಕರಣದ ನಿಷ್ಪಕ್ಷಪಾತ ತನಿಖೆ ಪೊಲೀಸರಿಂದ ಸಾಧ್ಯವಿಲ್ಲದ ಕಾರಣ ಈ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಹಾಲಿನ ಪುಡಿಗೆ ವಿಷ ಬೆರಸುವಂತಹ ನೀಚ ಕೃತ್ಯ ನಡೆಸಿರುವ ಯಾವುದೇ ಪಕ್ಷದವರು ಇದರಲ್ಲಿ ಶಾಮೀಲಾಗಿದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಬೆಂಗಳೂರಿನ ರಾಜಾನುಕುಂಟೆಯಲ್ಲಿರುವ ಗೆಣಸಿನ ಪುಡಿ ಮಿಲ್ ಮಾಲೀಕ ನಿಗೂಢವಾಗಿ ಸಾವನ್ನಪ್ಪಿ ಒಂದು ತಿಂಗಳಾಗಿದೆ. ಅದು ಆತ್ಮಹತ್ಯೆಯೋ, ಕೊಲೆಯೋ ಇದುವರೆಗೂ ಪತ್ತೆಯಾಗಿಲ್ಲ. ಪೊಲೀಸರ ಪ್ರಕಾರ ಅದು ಆತ್ಮಹತ್ಯೆ ಎಂದಿದ್ದಾರೆ. ಹಾಲಿನ ಪುಡಿಗೆ ಮಿಶ್ರಣ ಮಾಡಲು ಗೆಣಸಿನಪುಡಿಯನ್ನು ಅಲ್ಲಿಂದಲೇ ತರಲಾಗಿದೆ ಎಂದು ಹೇಳಲಾಗುತ್ತಿದೆ. ಹಾಲಿನಪುಡಿ ಕಲಬೆರಕೆ ಹಾಗೂ ಗೆಣಸಿನಪುಡಿ ಮಿಲ್ ಮಾಲೀಕನ ಹತ್ಯೆಗೆ ಸಂಬಂಧವಿರುವ ಬಗ್ಗೆ ಸುರೇಶ್‌ಗೌಡರು ಅನುಮಾನ ವ್ಯಕ್ತಪಡಿಸಿದರು.

ಕಲಬೆರಕೆ ಹಾಲಿನಪುಡಿ ಪ್ರಕರಣದಲ್ಲಿ ಸರ್ಕಾರದ ಹಂತದಲ್ಲಿ ಪ್ರಭಾವಿಗಳು ಭಾಗಿಯಾಗಿದ್ದು, ಅವರಿಗೆ ಪ್ರತಿ ತಿಂಗಳು ಇಂತಿಷ್ಟು ಹಣವನ್ನು ನೀಡಲಾಗುತ್ತಿತ್ತು. ಅದಕ್ಕಾಗಿಯೇ ತನಿಖೆಯನ್ನು ಹಳ್ಳ ಹಿಡಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ನೀರು-ಹಾಲು ಹಗರಣದಂತೆ ಈ ಪ್ರಕರಣ ಮುಚ್ಚಿಹೋಗಬಾರದು. ಪೊಲೀಸರು ಪಾರದರ್ಶಕ ರೀತಿಯಲ್ಲಿ ತನಿಖೆ ನಡೆಸದೆ ರಾಜಕೀಯ ಒತ್ತಡಕ್ಕೆ ಮಣಿಯುತ್ತಿದ್ದಾರೆ. ಪೊಲೀಸರು ನ್ಯಾಯ ದೊರಕಿಸಿಕೊಡುವ ವಿಶ್ವಾಸವಿಲ್ಲ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಮಂತ್ರಿಗಳು ಪ್ರಕರಣದ ಬಗ್ಗೆ ಇದುವರೆಗೂ ಮಾತನಾಡದೆ ಮೌನವಾಗಿದ್ದಾರೆ. ಏನಿದರ ಅರ್ಥ. ಅವರೂ ಇದರಲ್ಲಿ ಪಾಲುದಾರರೇ ಎಂಬ ಅನುಮಾನಗಳಿವೆ. ಅವರಿಗೆ ವಿಷಯ ಗೊತ್ತಿದ್ದರೂ ಮಾತನಾಡದೆ ತಮ್ಮ ಪಕ್ಷದ ನಿರ್ದೇಶಕರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿರುವುದು ರೈತರಿಗೆ ಮಾಡುವ ದೊಡ್ಡ ದ್ರೋಹ. ಪ್ರಬರೆಲ್ಲರೂ ಸೇರಿ ಒಕ್ಕೂಟವನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಟೀಕಿಸಿದರು.

ಗೋಷ್ಠಿಯಲ್ಲಿ ಶಾಸಕ ಎಚ್.ಟಿ.ಮಂಜು, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಇದ್ದರು.

ಮಹಿಳಾ ಅಧಿಕಾರಿಗೆ ಕಟ್ಟಿಹಾಕಿ ಹೊಡೆಯುವ ಬೆದರಿಕೆ: ಎಚ್.ಟಿ.ಮಂಜು

ಕನ್ನಡಪ್ರಭ ವಾರ್ತೆ, ಮಂಡ್ಯ

ಮನ್‌ಮುಲ್ ನಿರ್ದೇಶಕರೊಬ್ಬರು ಡಿಆರ್‌ಸಿಎಸ್ ಮಹಿಳಾ ಅಧಿಕಾರಿಯೊಬ್ಬರಿಗೆ ಬೋರ್ಡ್‌ನಲ್ಲೇ ಕಟ್ಟಿಹಾಕಿ ಹೊಡೆಯುವುದಾಗಿ ಬೆದರಿಕೆ ಹಾಕಿದ್ದು, ಆ ಬಗ್ಗೆ ಅಧಿಕಾರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮೌಖಿಕವಾಗಿ ತಿಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ಆರೋಪಿಸಿದರು.

ಸರ್ಕಾರದ ಪ್ರತಿನಿಧಿಗಳಿಗೆ ಅಧಿಕಾರರೂಢ ಪಕ್ಷಗಳ ನಿರ್ದೇಶಕರಿಂದ ನಿರ್ಬಂಧಗಳನ್ನು ವಿಧಿಸುವುದು, ಬೆದರಿಕೆ ಹಾಕುವುದು, ದೌರ್ಜನ್ಯ ನಡೆಸುವುದು ಹೆಚ್ಚಾಗಿದೆ. ಇದು ಮಂತ್ರಿಗಳ ಗಮನಕ್ಕಿದ್ದರೂ ಕಂಡೂ ಕಾಣದಂತಿದ್ದಾರೆ. ಅಲ್ಲದೆ, ಜೆಡಿಎಸ್ ಪಕ್ಷದ ಆಡಳಿತ ಮಂಡಳಿ ಬರುವ ಉತ್ಪಾದಕರ ಸಂಘಗಳಿಗೆ ನಿರ್ದೇಶಕರು ಬೆದರಿಕೆ ಹಾಕುವುದು, ಖಾಲಿ ಚೆಕ್, ಆ್ಯಂಡಿಮ್ಯಾಮಡ್ ಪ್ರೊನೋಟ್ ಪಡೆಯುವುದು, ಹೊಸ ಡೈರಿ ತೆರೆಯುವುದಕ್ಕೂ ಖಾಲಿ ಚೆಕ್‌ಗಳನ್ನು ನೀಡುವಂತೆ ಒತ್ತಾಯಿಸುವುದು ಒಕ್ಕೂಟದಲ್ಲಿ ನಿರಂತರವಾಗಿ ಆಡಳಿತಾರೂಢ ಪಕ್ಷದ ನಿರ್ದೇಶಕರು ದಬ್ಬಾಳಿಕೆ, ದೌರ್ಜನ್ಯ ನಡೆಸುವುದು ಸಾಮಾನ್ಯವಾಗಿದೆ. ರೈತರು ಪೂರೈಸುವ ಹಾಲಿನಲ್ಲಿರುವ ಎಸ್‌ಎನ್‌ಎಫ್ ಕದ್ದು ಹಾಲಿನ ಪುಡಿ ಕಲಬೆರಕೆ, ಅಕ್ರಮ ಸಾಗಣೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂಷಿಸಿದರು.

ಹಾಲಿನಪುಡಿ ಕಲಬೆರಕೆ ಮಾಡುವುದೆಂದರೆ ಹಾಲು ಉತ್ಪಾದಕರಿಗೆ ಮಾಡುವ ಮಹಾಮೋಸ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಮಂತ್ರಿಗಳು ರಾಜೀನಾಮೆ ನೀಡಲಿ: ಡಾ.ಕೆ.ಅನ್ನದಾನಿ

ಜಿಲ್ಲಾ ಹಾಲು ಒಕ್ಕೂಟದಲ್ಲಿ ಹಾಲಿನ ಪುಡಿ ಕಲಬೆರಕೆ ಮತ್ತು ನಾಪತ್ತೆ ಪ್ರಕರಣಗಳು ನಡೆದಿದ್ದರೂ ಇಬ್ಬರು ರೈತರಿಗೆ ಸಂಬಂಧಿಸಿದ ಮಂತ್ರಿಗಳಿದ್ದಾರೆ. ಒಬ್ಬರು ಕೃಷಿ ಸಚಿವರು ಮತ್ತೊಬ್ಬರು ನೀರಾವರಿ. ರೈತರಿಗೆ ಅನ್ಯಾಯವಾಗುತ್ತಿರುವುದನ್ನೂ ಕಂಡೂ ಕಾಣದಂತಿರುವ ಇಬ್ಬರೂ ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಒತ್ತಾಯಿಸಿದರು.

ಹಾಲಿಗೆ ವಿಷ ಬೆರೆಸುವವರನ್ನು ಜೊತೆಯಲ್ಲಿಟ್ಟುಕೊಂಡು ರಕ್ಷಿಸುತ್ತಾರೆ ಎಂದರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕಾದರೆ ತನಿಖೆಯನ್ನು ಸಿಬಿಐಗೆ ವಹಿಸಲೇಬೇಕು ಎಂದು ಆಗ್ರಹಪಡಿಸಿದರು.