ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮಂಡ್ಯದಲ್ಲಿ ಪಿಇಎಸ್ ಶಿಕ್ಷಣ ಸಂಸ್ಥೆಯನ್ನು, ಭಾರತೀನಗರದಲ್ಲಿ ಭಾರತೀ ಶಿಕ್ಷಣ ಸಂಸ್ಥೆಯನ್ನು ತೆರೆದು ನಿತ್ಯ ಸಚಿವ ಕೆ.ವಿ.ಶಂಕರಗೌಡ ಹಾಗೂ ಗಾಂಧಿವಾದಿ ಡಾ.ಜಿ.ಮಾದೇಗೌಡರು ಅಕ್ಷರ ಜ್ಞಾನದಾತರಾಗಿದ್ದಾರೆ ಎಂದು ಚಾಂಶುಗರ್ಸ್ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಎಂ.ರವಿ ಹೇಳಿದರು.ಭಾರತೀ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಅನ್ನದಾತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್. ಎಂ.ವಿಶ್ವೇಶ್ವರಯ್ಯ ಅವರಂತೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸಿದ ಕೆ.ವಿ.ಶಂಕರಗೌಡ ಹಾಗೂ ಡಾ.ಜಿ.ಮಾದೇಗೌಡರು ಜಿಲ್ಲೆಯ ಧ್ರುವತಾರೆಗಳಾಗಿದ್ದಾರೆ ಎಂದರು.
ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿದರೆ ಮುಂದೆ ಸಮಾಜದ ಜವಾಬ್ದಾರಿಗಳನ್ನು ಅರಿತು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ವಿದ್ಯಾರ್ಥಿ ನಾಯಕನು ತನ್ನ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಅರಿತು ಶಿಕ್ಷಕರು ಹಾಗೂ ಸಹಪಾಠಿಗಳ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು. ಶಿಸ್ತು ಮತ್ತು ಉತ್ತಮ ನಡವಳಿಕೆ ನಾಯಕತ್ವದ ಮೂಲ ಅಂಶಗಳಾಗಿವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಸಹಪಾಠಿಗಳನ್ನು ಜೊತೆಯಲ್ಲಿ ಕರೆದುಕೊಂಡು ಸಾಗುವ ವ್ಯಕ್ತಿಯೇ ಉತ್ತಮ ನಾಯಕನಾಗಲು ಸಾಧ್ಯ. ಕೂಡಿ ಬಾಳಿದರೆ ಸ್ವರ್ಗಸುಖ ಎಂಬ ಗಾದೆ ನಮ್ಮ ಜೀವನದಲ್ಲಿ ಸಹಬಾಳ್ವೆ ಮತ್ತು ಸಹಕಾರದ ಮಹತ್ವವನ್ನು ಸಾರುತ್ತದೆ. ನಾಯಕತ್ವದಿಂದ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ, ಸಂಘಟನಾ ಶಕ್ತಿ, ಆತ್ಮವಿಶ್ವಾಸ, ವೇದಿಕೆ ಭಯ ನಿವಾರಣೆ ಹಾಗೂ ಸಾಮಾಜಿಕ ಪ್ರಜ್ಞೆ ಬೆಳೆಯುತ್ತದೆ ಎಂದು ಹೇಳಿದರು.
ವಿಶ್ರಾಂತ ಪ್ರಾಂಶುಪಾಲ, ಸಾಹಿತಿ ಡಾ.ಮ.ರಾಮಕೃಷ್ಣ ಮಾತನಾಡಿ, ಮೊಬೈಲ್ ಫೋನ್ ಅನ್ನು ಅನಗತ್ಯ ವಿಷಯಗಳನ್ನು ವೀಕ್ಷಿಸಲು ಬಳಸದೆ ಜ್ಞಾನ ಮತ್ತು ಮಾಹಿತಿಯನ್ನು ಸಂಪಾದಿಸಲು ಬಳಸಬೇಕು. ವಿದ್ಯಾರ್ಥಿಗಳು ಧೈರ್ಯವಾಗಿ ಮಾತನಾಡುವ ಗುಣ ಬೆಳೆಸಿಕೊಳ್ಳಬೇಕು. ಅದುವೇ ನಾಯಕತ್ವದ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದರು.
ರೈತ ಬಿತ್ತಿದ ಎಲ್ಲಾ ಬೀಜಗಳೂ ಫಲ ನೀಡುವುದಿಲ್ಲ. ಅದೇ ರೀತಿ ಶಿಕ್ಷಕರು ಬೋಧಿಸಿದ ವಿಷಯವನ್ನು ಎಲ್ಲ ವಿದ್ಯಾರ್ಥಿಗಳೂ ಒಂದೇ ರೀತಿ ಅರ್ಥಮಾಡಿಕೊಳ್ಳುವುದಿಲ್ಲ. ಜ್ಞಾನ ಸಂಪಾದಿಸಿದವರು ಸಮಾಜದಲ್ಲಿ ಸನ್ಮಾನಿತರಾಗುತ್ತಾರೆ. ವ್ಯಕ್ತಿಯ ಮೌಲ್ಯವೂ ಅವನ ವ್ಯಕ್ತಿತ್ವ, ಸಾಧನೆ ಮತ್ತು ಸಮರ್ಪಣೆಯಿಂದ ನಿರ್ಧಾರವಾಗುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಭಾರತೀ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲೆ ಮುಖ್ಯ ಶಿಕ್ಷಕ ಪಿ.ರಾಜೇಂದ್ರ ರಾಜೇ ಅರಸ್, ಹೆಲ್ತ್ ಸೈನ್ಸ್ ನ ನಿರ್ದೇಶಕರಾದ ಟಿ.ತಮಿಜ್ ಮಣಿ, ಸಿ.ರಮ್ಯಾ, ಡಾ.ಎಂ.ಎಸ್. ಮಹದೇವಸ್ವಾಮಿ, ಜವರೇಗೌಡ, ವಿ.ಎನ್.ಸುಶ್ಮಿತಾ, ದೈಹಿಕ ಶಿಕ್ಷಣ ಶಿಕ್ಷಕರಾದ ನಾಗರಾಜು, ಶಿಕ್ಷಕರಾದ ನಂದಿನಿ, ಶಿವಮಣಿ ಸಿ., ಸ್ವಾಮಿ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.