ಪ್ರೊ.ಕ.ವೆಂ.ರಾಜಗೋಪಾಲ್ ಅವರ ಕುರಿತಾದ ಕೃತಿಯನ್ನು ಗಣ್ಯರು ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಂಗಭೂಮಿ ಹಾಗೂ ಸಾಹಿತ್ಯ ವಿದ್ಯಾರ್ಥಿಗಳಿಗೆ ಪ್ರಗತಿಪರ ಚಿಂತನೆಯ ಹಾದಿ ತೋರುವಲ್ಲಿ ಪ್ರೊ.ಕ.ವೆಂ. ರಾಜಗೋಪಾಲ್ ಅವರ ಕೊಡುಗೆ ಸಾಕಷ್ಟಿದ್ದು, ಇಂದಿನವರು ಅನುಸರಿಸಬೇಕು ಎಂದು ಸಾಹಿತಿ ಡಾ.ಹಂ.ಪ. ನಾಗರಾಜಯ್ಯ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಪ್ರೊ.ಕ.ವೆಂ.ರಾಜಗೋಪಾಲ್ ಜನ್ಮ ಶತಮಾನೋತ್ಸವ ಸಮಿತಿ ಸಹಯೋಗದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ‘ರಂಗಚಿಂತಕ ಪ್ರೊ. ಕ.ವೆಂ.ರಾಜಗೋಪಾಲ್ - 100 ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.

ಮೊದಮೊದಲು ಸಂಪ್ರದಾಯವಾದಿ ಆಗಿದ್ದರೂ, ನಂತರದ ದಿನಗಳಲ್ಲಿ ಜೈಲುವಾಸಕ್ಕೆ ಹೋದ ಬಳಿಕ ಅವರ ಮನಸ್ಸು ಪರಿವರ್ತನೆಯಾಗಿ ಸಂಪೂರ್ಣ ಪ್ರಗತಿಪರ ಚಿಂತಕರಾಗಿ ಹೊರಹೊಮ್ಮಿದರು. ನೂರಾರು ರಂಗಭೂಮಿ ಹಾಗೂ ಸಾಹಿತ್ಯ ವಿದ್ಯಾರ್ಥಿಗಳಿಗೆ ಪ್ರಗತಿಪರ ಚಿಂತನೆಯ ಹಾದಿ ತೋರಿದ ಮಹಾನ್ ಚೇತನ ಎಂದು ಅವರ ಒಡನಾಟ ಸ್ಮರಿಸಿದರು.

ಕ.ವೆಂ.ಕೊಡುಗೆ ಬಹಳ: ಹಿರಿಯ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಮಾತನಾಡಿ, ಬೆಂಗಳೂರು ವಿಶ್ವವಿದ್ಯಾಲಯ ಏನಾದರೂ ರಂಗಭೂಮಿ ಮತ್ತು ಸಂಸ್ಕೃತಿ ಹಾಗೂ ನೃತ್ಯದಲ್ಲಿ ಹೆಸರು ಗಳಿಸಿದೆ ಎಂದರೆ ಅದಕ್ಕೆ ಕ.ವೆಂ. ರಾಜಗೋಪಾಲರ ಕೊಡುಗೆ ಬಹಳವಿದೆ. ಎಂಇಎಸ್, ನ್ಯಾಷನಲ್ ಕಾಲೇಜುಗಳಲ್ಲಿ ರಂಗಭೂಮಿಯ ಗೀಳು ಹತ್ತಿಸಿ ಕಾಲೇಜು ರಂಗಭೂಮಿ ಅತ್ಯಂತ ಸುಭದ್ರವಾಗಿ ರಾಜ್ಯದಲ್ಲಿ ನೆಲೆಯೂರಲು ಕಾರಣರಾದವರು, ಲಂಕೇಶ್, ಕಾರ್ನಾಡ್, ಬಿ.ವಿ. ಕಾರಂತ್ ಅವರಿಗೆ ಕ.ವೆಂ. ಗುರುಗಳು ಎಂದರೂ ತಪ್ಪಾಗಲಾರದು ಎಂದು ಹೇಳಿದರು.

ಕ.ವೆಂ. ಶತಮಾನೋತ್ಸವ ಆಚರಣೆ: ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಮಾತನಾಡಿ, ಕ.ವೆಂ. ರಾಜಗೋಪಾಲರ ಶತಮಾನೋತ್ಸವವನ್ನು ಇಡೀ ವರ್ಷ ಆಚರಿಸಲಾಗುತ್ತಿದ್ದು, ಮುಂದಿನ ತಿಂಗಳು ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಕ.ವೆಂ. ರಾಜಗೋಪಾಲರ ಸಮಗ್ರ ನಾಟಕ ಸಾಹಿತ್ಯ ಮತ್ತು ಅನುವಾದ ಸಾಹಿತ್ಯ ಸಂಪುಟ ಅನಾವರಣ ಗೊಳಿಸಲಾಗುವುದು. ಮೈಸೂರು, ಗೌರಿಬಿದನೂರು, ಕೋಲಾರ, ಬಳ್ಳಾರಿ, ಮಂಗಳೂರು ಮತ್ತು ಕೊಡಗಿನಲ್ಲಿ ಕ.ವೆಂ. ಅವರ ಶತಮಾನೋತ್ಸವದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.