ಸಾರಾಂಶ
ಗಜೇಂದ್ರಗಡ:
ಮಳೆಗಾಲದ ಭರಾಟೆ ಮುಗಿದು, ಚಳಿಗಾಲ ಕಣ್ಣು ತೆರಯುವ ಸಂದರ್ಭದಲ್ಲಿ ಬಾನಂಗಳದಲ್ಲಿ ತುಂಬಿ ಬರುವ ಬೆಳೆದಿಂಗಳ ಹಬ್ಬವೇ ಗೌರಿ ಹುಣ್ಣಿಮೆ. ಇದು ಹೆಣ್ಣು ಮಕ್ಕಳಿಗೆ ವಿಶೇಷ ಹಬ್ಬವಾಗಿದೆ.ಗೌರಿ ಹುಣ್ಣಿಮೆ ಬಂದಿತೆಂದರೆ ಸಾಕು, ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂತಸ, ಹಾಲು ಚೆಲ್ಲಿದಂತಿರುವ ಆ ಹುಣ್ಣಿಮೆ ಬೆಳದಿಂಗಳಲ್ಲಿ ಗ್ರಾಮೀಣ ಹಾಗೂ ಪಟ್ಟಣದ ಬಡಾವಣೆಗಳಲ್ಲಿ ಖುಷಿಯಿಂದ ಗೌರಿ ಹಬ್ಬ ಆಚರಿಸಲು ಮುಂದಾಗುತ್ತಾರೆ. ಅದರಲ್ಲಿ ಉತ್ತರ ಕರ್ನಾಟಕದಲ್ಲಿ ಗೌರಿಹಬ್ಬದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳು ಗೌರಿ ಕುರಿತು ಹಾಡು ಹಾಡುತ್ತಾರೆ.
ಕಾರ್ತಿಕ ಶುದ್ಧ ಪಂಚಮಿಯಂದು ಶಿವನ ತೊಡೆಯ ಮೇಲೆ ಅಲಕೃಂತಳಾದ ಗೌರಿಯನ್ನು ಸುಂದರವಾದ ಮಂಟಪದಲ್ಲಿ ಪ್ರತಿಷ್ಠಾಪಿಸುವ ಮೂಲಕ ಹುಣ್ಣಿಮೆ ಗೌರಿಗೆ ದಿನವೊಂದು ತರಹದ ಸಕ್ಕರೆ ಆರತಿಯನ್ನೆತ್ತಿ ಪೂಜೆಗೈಯುತ್ತಾರೆ.ಬೆಳದಿಂಗಳ ರಾತ್ರಿಯಲ್ಲಿ ಹೆಣ್ಣು ಮಕ್ಕಳು, ಚಿಕ್ಕ ಹುಡುಗರು ಗುಂಪುಗೂಡಿ ಕುಳಿತು ಜನಪದ ಹಾಡುಗಳನ್ನು ಹಾಡುತ್ತಾ, ಕೋಲಾಟ ಹಾಕುವ ಮೂಲಕ ಗೌರಿ ಗೌರಿ ಗಾಣಾ ಗೌರಿ ಕುಂಕಮ ಗೌರಿ ಅವರಿಯಂಥ ಅಣ್ಣನ ಕೊಡ ಅಣ್ಣನ ಕೊಡ ತೊಗರಿಯಂಥ ತಮ್ಮನ ಕೊಡ ತಮ್ಮನ ಕೊಡ ನಿಲ್ಲು ನಿಲ್ಲು ಗೌರವ್ವ ಕರಸೇನ ಕರಸೇನ ಅರಿಷಿಣ ಪತ್ತಲ ಉಡಿಸೇನ ಉಡಿಸೇನ! ಹಸಿರುಬಳಿ ಇಡಿಸೇನ ಇಡಸೇನ ಉಡಿಯಕ್ಕಿ ಹಾಕಿ ಅಗಸಿಮಟ ಕಳಿಸೇನ... ಎಂದು ಗೌರವ್ವನ ಬಗ್ಗೆ ಹಾಡುಗಳನ್ನು ಹಾಡುತ್ತಾರೆ.
ಗೌರಿಯನ್ನು ಮನೆಯ ಮಗಳೆಂದು ವರ್ಷಕ್ಕೊಮ್ಮೆ ಕರೆಸಿ, ಗೌರವಾದರಗಳಿಂದ ಕಳಿಸುತ್ತಾರೆ. ಈ ಹಾಡುಗಳಲ್ಲಿ ಶಿವನ ಸಂಸಾರದ ಚಿತ್ರಣ, ಗಂಗೆ-ಗೌರಿಯ ಸಂವಾದ, ಜಗಳ, ಗಂಗೆ ಮಾಯವಾದ ಪ್ರಸಂಗ ಮೊದಲಾದ ಕಥನ ಗೀತೆಗಳಿವೆ.ಶಿವ ಶಿವದಲ್ಲಿ ಶಿವ ಮಠದಲ್ಲಿ ಶಿವರಾಯ-ಗೌರವ್ವ ಜೂಜಾನಾಡುವರು... ಗಂಗೆಗೆ-ಗೌರಿಗೆ ಜಗಳ ಹಚ್ಚಿದಿ... ವಾದಕ್ಕಚ್ಚಿ ಮಾದೇವ ಸುಮ್ಮನೆ ಕುಳಿತ... ಯಾಕ ಜಗಳಾಡತೀರೆ ಗಂಗೆ-ಗೌರಿ... ಯಾಕೆ ಕಡದಾಡತೀರೆ ಎಂದು ಅವರ ಬಾಳಿನ ಚಿತ್ರಣಗಳ ಹಾಡಲಾಗುತ್ತದೆ. ಮುಂದಿನ ಹಾಡುಗಳಲ್ಲಿ ಗೌರಿಯೂ ಮುಟ್ಟಾದದು, ಗಂಗೆಯು ಜಗಳವನ್ನಾಡಿ ಮಾಯವಾಗಿ ಪಾತಾಳ ಲೋಕದ ಆಲದ ಮರದ ಬುಡದಲ್ಲಿ ಅಡಗಿದ್ದುದು. ಅಲ್ಲಿ ಮೇಯುತ್ತಿದ್ದ ಕತ್ತೆಯು ಬಹಿರಂಗಗೊಳಿಸಲು ಸಿಟ್ಟಿಗೆದ್ದ ಗಂಗೆಯು ಹೊರ ಬಂದು ಕತ್ತೆಯ ಮೂಗನ್ನು ಸೀಳಿದಳೆಂದು ಈ ಹಾಡುಗಳಲ್ಲಿ ಬರುತ್ತದೆ. ಇದರಿಂದ ಕತ್ತೆಯ ಮೂಗಿನ ನಿಂಬೆಗಳು ಇಂದಿಗೂ ಜೋತು ಬಿದ್ದಿವೆ. ಇದು ಜನಪದ ಕಥನ.
ಗೌರಿ ಹುಣ್ಣಿಮೆ ದಿನದಂದು ಸಣ್ಣ ಮಕ್ಕಳಿಗೆ, ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂತಸ. ಅಂದು ಗೌರವ್ವ ಗಂಡನ ಮನೆಗೆ ಹೋಗುವಳೆಂದ ಭಾವನೆ. ಪೂರ್ಣಚಂದ್ರನ ಹಿಟ್ಟು ಚೆಲ್ಲಿದಂತಿರುವ ಬೆಳದಿಂಗಳಲ್ಲಿ ಸಕ್ಕರೆಯಿಂದ ಅಚ್ಚಿನಲ್ಲಿ ಮಾಡಿದ ವಿವಿಧ ಆಕಾರದ ಬೊಂಬೆಗಳನ್ನು ಇಟ್ಟು ದೀಪಗಳನ್ನು ಹಚ್ಚುತ್ತಾರೆ.ಈ ಎಲ್ಲದರ ಉದ್ದೇಶ ಗೌರವ್ವನು ಗಂಡನ ಮನೆಗೆ ನಂದಾದೀವಿಗೆ ಬೆಳಕಿನಲ್ಲಿ ಹೋಗಲೆಂಬುದಾಗಿದೆ.
ಹುಣ್ಣಿಮೆ ಮತ್ತು ಅದರ ಮೂರನೆಯ ದಿನ ಹೀಗೆ ಎರಡು ದಿನ ಆರತಿಯನ್ನು ಬೆಳಗಿ ಗೌರವ್ವನನ್ನು ನದಿ ಅಥವಾ ಬಾವಿಯಲ್ಲಿ ವಿಸರ್ಜನೆ ಮಾಡುತ್ತಾರೆ. ಗೌರಿ ಹಬ್ಬವು ಉತ್ತರ ಕರ್ನಾಟಕದ ಹೆಣ್ಣು ಮಕ್ಕಳ ಪಾಲಿಗೆ ಅತಿ ದೊಡ್ಡ ಹಬ್ಬವಾಗಿದೆ.;Resize=(128,128))
;Resize=(128,128))