ಸಾರಾಂಶ
ಅಂಕೋಲಾ: ರಕ್ತದೊತ್ತಡ ಕಡಿಮೆಯಾಗಿ ಕಬಡ್ಡಿ ಆಟಗಾರರೊಬ್ಬರು ಮೃತಪಟ್ಟ ಘಟನೆ ಅವರ್ಸಾದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಬಾಸ್ಗೋಡದ ಸುದರ್ಶನ ವಿನಾಯಕ ಆಗೇರ (22) ಮೃತಪಟ್ಟ ಯುವಕ. ಅವರ್ಸಾದ ಶ್ರೀ ಮಾರಿಕಾಂಬಾ ಯುವಕ ಸಂಘದ ಆಶ್ರಯದಲ್ಲಿ ಆಗೇರ ಸಮಾಜದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಪಂದ್ಯಾವಳಿಗೆ ಶನಿವಾರ ರಾತ್ರಿ ಚಾಲನೆ ನೀಡಲಾಗಿತ್ತು. ಭಾನುವಾರ ಬೆಳಗ್ಗೆ ಸುಮಾರು 8 ಗಂಟೆಗೆ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯ ನಡೆದಿತ್ತು.
ಪಂದ್ಯದಲ್ಲಿ ಕೊಗ್ರೆಯ ಮಹಾಸತಿ ತಂಡದ ಸುದರ್ಶನ್ ಆಟ ಆಡಿದ್ದರು. ಪಂದ್ಯ ಮುಗಿದ ತಕ್ಷಣ ದಣಿವಾರಿಸಿಕೊಳ್ಳಲು ಸುದರ್ಶನ ಗೆಳೆಯರೊಂದಿಗೆ ಮಾತನಾಡುತ್ತ ಕುಳಿತಿದ್ದರು. ಏಕಾಏಕಿ ಕುಳಿತಲ್ಲಿಯೆ ಸುದರ್ಶನ ಅಸ್ವಸ್ಥರಾಗಿ ಕುಸಿದಿದ್ದಾರೆ. ಕೂಡಲೇ ಅವರನ್ನು ಅಂಕೋಲಾದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಗಿತ್ತು. ಸುದರ್ಶನ ಅವರನ್ನು ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದರು.ಉತ್ತಮ ಕ್ರೀಡಾಪಟುವಾಗಿದ್ದ ಸುದರ್ಶನ್ ಅನೇಕ ಕಬಡ್ಡಿ ಪಂದ್ಯಾವಳಿಯಲ್ಲಿ ಹತ್ತಾರು ಪ್ರಶಸ್ತಿಗಳನ್ನು ಗೆದ್ದಿದ್ದರು. ಸುದರ್ಶನ ಅವರಿಗೆ ತಂದೆ, ತಾಯಿ, ಓರ್ವ ಹಿರಿಯ ಸಹೋದರ ಇದ್ದಾರೆ.
ಹಣ ದೋಚಿದ ಕಳ್ಳನ ಬಂಧನ
ಯಲ್ಲಾಪುರ: ಮನೆಗೆ ನುಗ್ಗಿ ಕಪಾಟಿನ ಒಳಗೆ ಸೀರೆಯಲ್ಲಿ ಇಟ್ಟಿದ್ದ ₹೫೦ ಸಾವಿರ ನಗದು ದೋಚಿ ಪರಾರಿಯಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ಅಂಕೋಲಾ ತಾಲೂಕಿನ ಬಾಳೆಗದ್ದೆಯ ಭಾಸ್ಕರ ತಂದೆ ನಾರಾಯಣ ಸಿದ್ದಿ ಬಂಧಿತ ವ್ಯಕ್ತಿ. ಯಾರೋ ಕಳ್ಳರು ಡಿ. ೧೩ರಂದು ಮನೆಗೆ ಹಾಕಿದ ಬೀಗ ಮುರಿದು ₹೫೦ ಸಾವಿರ ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ರವೀಂದ್ರನಗರದ ನಿವಾಸಿ ಮಧುಕೇಶ್ವರ ನರಸಿಂಹ ಭಟ್ಟ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯಲ್ಲಾಪುರ ತಾಲೂಕಿನ ಮಾಗೋಡ ಕ್ರಾಸ್ ಬಸ್ಸನಿಲ್ದಾಣದಲ್ಲಿದ್ದ ಬಗ್ಗೆ ಖಚಿತ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ., ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ಎಂ.ಎನ್., ಶಿರಸಿ ಡಿಎಸ್‌ಪಿ ಗಣೇಶ ಕೆ.ಎಲ್., ಪೊಲೀಸ್ ನಿರೀಕ್ಷಕ ರಮೇಶ ಹನಾಪೂರ ಮಾರ್ಗದರ್ಶನದಲ್ಲಿ ಪಿಎಸ್‌ಐ ಶೇಡಜಿ ಚೌಹಾಣ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಸವರಾಜ ಹಗರಿ, ಉಮೇಶ ತುಂಬರಗಿ, ಅಮರ ಜಿ., ಶೋಭಾ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.