ಸಾರಾಂಶ
ಪ್ರಸಕ್ತ ವರ್ಷ ಬಹಳಷ್ಟು ಕ್ರೀಡಾಪಟುಗಳಿಗೆ ಅವಕಾಶ ನೀಡುವ ಮೂಲಕ ಉತ್ತಮ ಆರಂಭ ನೀಡಿದೆ ಎಂದು ಬಿಇಎಸ್ ಕಾಲೇಜು ಉಪನ್ಯಾಸಕ ಎನ್.ಎಸ್. ಪ್ರಶಾಂತ ಹೇಳಿದರು.
ಬ್ಯಾಡಗಿ: ಜಿಲ್ಲೆಯಲ್ಲಿರುವ ಕಬಡ್ಡಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಹಾವೇರಿ ವಿಶ್ವವಿದ್ಯಾಲಯದಿಂದ ನಡೆಯುತ್ತಿದ್ದು, ಪ್ರಸಕ್ತ ವರ್ಷ ಬಹಳಷ್ಟು ಕ್ರೀಡಾಪಟುಗಳಿಗೆ ಅವಕಾಶ ನೀಡುವ ಮೂಲಕ ಉತ್ತಮ ಆರಂಭ ನೀಡಿದೆ ಎಂದು ಬಿಇಎಸ್ ಕಾಲೇಜು ಉಪನ್ಯಾಸಕ ಎನ್.ಎಸ್. ಪ್ರಶಾಂತ ಹೇಳಿದರು.
ಪಟ್ಟಣದ ಬಿಇಎಸ್ ಮಹಾವಿದ್ಯಾಲಯದ ಆಶ್ರಯದಲ್ಲಿ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯದಲ್ಲಿ ನ. 29ರಿಂದ ಆರಂಭವಾಗಲಿರುವ ಅಂತರ್ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಹಾವೇರಿ ವಿಶ್ವವಿದ್ಯಾಲಯ ತಂಡದ 10 ದಿನಗಳ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ದೇಶದ ಎರಡನೇ ಅತೀದೊಡ್ಡ ಕ್ರೀಡೆ ಕಬಡ್ಡಿಯನ್ನು ವಿಶ್ವದೆಲ್ಲೆಡೆ ಪಸರಿಸಬೇಕಾಗಿದ್ದು, ಇದಕ್ಕಾಗಿ ಕಾಲೇಜು ಹಾಗೂ ವಿಶ್ವವಿದ್ಯಾಲಯ ಮಟ್ಟದ ಕ್ರೀಡೆಗಳು ಉತ್ತಮ ಅಡಿಪಾಯವನ್ನು ಹಾಕಲಿವೆಯ ಅದರಲ್ಲೂ ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸುವುದು ಬಹಳಷ್ಟು ಅವಶ್ಯವಿದ್ದು, ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದರು.ವಿಶ್ವವಿದ್ಯಾಲಯ ಮೊದಲ ತಂಡ
ಉಪನ್ಯಾಸಕ ಡಾ. ಸುರೇಶಕುಮಾರ ಪಾಂಗಿ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯ ಆರಂಭವಾದ ಬಳಿಕ ಇದೇ ಪ್ರಥಮ ಬಾರಿಗೆ ಹಾವೇರಿ ವಿವಿ ಮಹಿಳಾ ತಂಡ ಅಂತರ ವಿವಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಕುಲಪತಿಗಳು ಸೇರಿದಂತೆ ಕ್ರೀಡಾ ವಿಭಾಗ ಬಹಳಷ್ಟು ಆಸಕ್ತಿ ತೋರುತ್ತಿರುವುದು ಸ್ತುತ್ಯಾರ್ಹ ಹಾಗೂ ಸ್ವಾಗತಾರ್ಹ ಎಂದರು.ಕಬಡ್ಡಿ ಬೆಳೆಸಲು ಶ್ರಮವಹಿಸಿ
ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸಿ.ಜಿ.ಚಕ್ರಸಾಲಿ ಮಾತನಾಡಿ, ಇನ್ನಿತರ ಕ್ರೀಡೆಗಳಿಗಿಂತ ಕಬಡ್ಡಿ ವಿಭಿನ್ನವಾಗಿದೆ, ಇದರ ಬೆಳವಣಿಗೆ, ಆರಂಭ ಗ್ರಾಮೀಣ ಪ್ರದೇಶದಿಂದ ಆಗಲಿದ್ದು, ಬಳಿಕ ಅಂತಾರಾಷ್ಟ್ರೀಯ ಮಟ್ಟವನ್ನು ತಲುಪಲಿದೆ. ಕಬಡ್ಡಿಯನ್ನು ಬೆಳೆಸಬೇಕಾದಲ್ಲಿ ಮೊದಲು ಹಳ್ಳಿಗಳಲ್ಲಿಯೇ ಆರಂಭಿಸಬೇಕು. ಇದಕ್ಕಾಗಿ 25 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಶ್ರಮದಿಂದ ಸುಮಾರು 150ಕ್ಕೂ ಹೆಚ್ಚು ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ, ನೂರಾರು ಕ್ರೀಡಾಪಡುಗಳು ಅಂತರ ವಿವಿಯಲ್ಲಿ, 5 ಕ್ರೀಡಾಪಟುಗಳು ಡಾಕ್ಟರೇಟ್, 6 ಕ್ರೀಡಾಪಟುಗಳು ಎನ್‌ಐಎಸ್ ತರಬೇತಿ ಪಡೆದಿದ್ದಾರೆ. ಹೀಗಾಗಿ, ಸುಸಜ್ಜಿತ ಕಬಡ್ಡಿ ವಸತಿ ನಿಲಯ ನಿರ್ಮಾಣದ ಗುರಿ ಹೊಂದಿದೆ ಎಂದರು.ಪ್ರಾಚಾರ್ಯ ಡಾ. ಎಸ್.ಜಿ. ವೈದ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಾವೇರಿ ವಿವಿ ಕ್ರೀಡಾ ವಿಭಾಗದ ನಿರ್ದೇಶಕ ಸಿ.ಎನ್. ಸೊರಟೂರ, ಬಿಇಎಸ್ ಕಾಲೇಜು ದೈಹಿಕ ನಿರ್ದೇಶಕ ಶಶಿಧರ ಮಾಗೋಡ, ಕಬಡ್ಡಿ ತಂಡದ ಕೋಚ್ (ಜಿಲ್ಲಾ ಪಂಚಾಯಿತಿ) ಮಂಜುಳಾ ಭಜಂತ್ರಿ, ಉಪನ್ಯಾಸಕರಾದ ಕಿರಣ ಡೊಂಬರಮತ್ತೂರ, ಪ್ರಭುಲಿಂಗ ದೊಡ್ಡಮನಿ, ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಮಲ್ಲಿಕಾರ್ಜುನ ಕೋಡಿಹಳ್ಳಿ, ಗ್ರಂಥಪಾಲಕ ಸಂತೋಷ ಉದ್ಯೋಗಣ್ಣನವರ ಸೇರಿದಂತೆ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಮಹಿಳಾ ಕ್ರೀಡಾಪಟುಗಳು ಉಪಸ್ಥಿತರಿದ್ದರು.