ಕೊನೆಗೂ ಗುಂಡ್ಲುಪೇಟೆಗೆ ಹರಿದು ಬಂದಳು ಕಬಿನಿ..!

| Published : Mar 30 2024, 12:57 AM IST

ಸಾರಾಂಶ

ಕನ್ನಡಪ್ರಭದ ನಿರಂತರ ವರದಿ ಮೂಲಕ ಜಿಲ್ಲಾಡಳಿತ ಗಮನ ಸೆಳೆದ ಪರಿಣಾಮ ಹಾಗೂ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕೊನೆಯಲ್ಲಿ ಖಡಕ್‌ ಸೂಚನೆ ನೀಡಿದ ಬೆನ್ನಲ್ಲೆ 50 ದಿನ ಪೂರೈಸಿದ ಬಳಿಕ ಕೊನೆಗೂ ಗುಂಡ್ಲುಪೇಟೆಗೆ ಕಬಿನಿ ಕುಡಿಯುವ ನೀರು ಗುಡ್‌ ಪ್ರೈಡೆಗೆ (ಶುಭ ಶುಕ್ರವಾರ) ಬಂದಿದೆ!

ಕಬಿನಿ ನೀರಿನ ಸಮಸ್ಯೆ ಬಗ್ಗೆ ನಿರಂತರ ವರದಿ ಪ್ರಕಟ । ಕನ್ನಡಪ್ರಭ ವರದಿಗೆ ಜನರ ಮೆಚ್ಚುಗೆಯ ಮಹಾಪೂರರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕನ್ನಡಪ್ರಭದ ನಿರಂತರ ವರದಿ ಮೂಲಕ ಜಿಲ್ಲಾಡಳಿತ ಗಮನ ಸೆಳೆದ ಪರಿಣಾಮ ಹಾಗೂ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕೊನೆಯಲ್ಲಿ ಖಡಕ್‌ ಸೂಚನೆ ನೀಡಿದ ಬೆನ್ನಲ್ಲೆ 50 ದಿನ ಪೂರೈಸಿದ ಬಳಿಕ ಕೊನೆಗೂ ಗುಂಡ್ಲುಪೇಟೆಗೆ ಕಬಿನಿ ಕುಡಿಯುವ ನೀರು ಗುಡ್‌ ಪ್ರೈಡೆಗೆ (ಶುಭ ಶುಕ್ರವಾರ) ಬಂದಿದೆ!

ಗುಂಡ್ಲುಪೇಟೆ ಹಾಗೂ ಸುಮಾರು 15 ಹಳ್ಳಿಗೆ ಸರಬರಾಜಾಗುವ ಕಬಿನಿ ನೀರು ಕಳೆದ ಒಂದೂವರೆ ತಿಂಗಳಿನಿಂದ ಬಂದಿರಲಿಲ್ಲ. ಸಿಂಧುವಳ್ಳಿ ಶುದ್ಧೀಕರಣ ಘಟಕ ಹಾಗೂ ತಗ್ಗಲೂರು ಪಂಪ್‌ ಹೌಸ್‌ನ ಡಿಜಿಟಲ್‌ ಸ್ಟಾರ್ಟರ್‌ ಕೆಟ್ಟಿದ ಕಾರಣ ಕಬಿನಿ ನೀರು ಬಂದಿರಲಿಲ್ಲ. ನೀರಿನ ಹಾಹಾಕಾರ ಗುಂಡ್ಲುಪೇಟೆ ಪಟ್ಟಣದ ಜನತೆಗೆ ಹಾಗೂ 15 ಹಳ್ಳಿಗಳಿಗೂ ತಟ್ಟಿತ್ತು. ಕುಡಿಯುವ ನೀರಿನ ಹಾಹಾಕಾರ ಭುಗಿಲೆದ್ದರೂ ಪುರಸಭೆಯ ಸದಸ್ಯರು ಪುರಸಭೆ ಆಡಳಿತಾಧಿಕಾರಿ ವಿರುದ್ಧ ತುಟಿ ಬಿಚ್ಚಲಿಲ್ಲ. ದುರಂತ ಎಂದರೆ ಬಿಜೆಪಿ ಕೂಡ ಸೊಲ್ಲು ಎತ್ತಲೇ ಇಲ್ಲ.

ಕಬಿನಿ ಕುಡಿಯುವ ನೀರಿನ ಸಂಬಂಧ ಮೊದಲಿಗೆ ಕನ್ನಡಪ್ರಭ ಮಾ.13ರಂದು ಗುಂಡ್ಲುಪೇಟೆಗೆ 15 ದಿನಗಳಿಂದ ಕಬಿನಿ ನೀರಿಲ್ಲ ಎಂದು ವರದಿ ಪ್ರಕಟಿಸಿ ಜಿಲ್ಲಾಡಳಿತ ಗಮನ ಸೆಳೆದರೂ ಡಿಜಿಟಲ್‌ ಸ್ಟಾರ್ಟರ್‌ ರಿಪೇರಿ ಮಾಡಿಸಲು ಪುರಸಭೆಯಿಂದ ಸಾಧ್ಯವಾಗಲಿಲ್ಲ. ಮಾ.17 ರಂದು ಶಾಸಕ ಗಣೇಶ್‌ ಪ್ರಸಾದ್‌ ಗುಂಡ್ಲುಪೇಟೆಯಲ್ಲಿ ಕುಡಿವ ನೀರಿನ ಹಾಹಾಕಾರ ಕಂಡು ಪಟ್ಟಣಕ್ಕೆ 10 ಬೋರ್‌ವೆಲ್‌ ಕೊರೆಸಲು ಸೂಚನೆ ನೀಡಿದರು. ಆದರೂ ನೀರಿನ ಸಮಸ್ಯೆಯಿತ್ತು. ಮಾ.16ರಂದು ಗುಂಡ್ಲುಪೇಟೇಲಿ ನೀರಿಗಾಗಿ ನಿಲ್ಲದ ಹಾಹಾಕಾರ, ಮಾ.21 ರಂದು ಸ್ಟಾರ್ಟರ್‌ ರಿಪೇರಿಯಾದ್ರೂ ನೀರು ಬಂದಿಲ್ಲ, ಮಾ.25 ರಂದು ಗುಂಡ್ಲುಪೇಟೆಗೆ ಕಬಿನಿ ನೀರು ಬರಂಗೆ ಕಾಣ್ತಿಲ್ಲ, ಮಾ.26 ರಂದು ನೀರಿಲ್ಲ, ನೀರಿಲ್ಲ, ತಿಂಗಳಾದ್ರು ಗುಂಡ್ಲುಪೇಟೆಗೆ ಕಬಿನಿ ನೀರಿಲ್ಲ ಎಂದು ನಿರಂತರ ವರದಿ ಪ್ರಕಟಿಸಿ ಜಿಲ್ಲಾಡಳಿತ ವಿರುದ್ಧ ಕನ್ನಡಪ್ರಭ ಸಮರವನ್ನೇ ಸಾರಿತ್ತು.

ಪುರಸಭೆ ಕೂಡ ಹಳೆಯ ಡಿಜಿಟಲ್‌ ಸ್ಟಾರ್ಟರ್‌ ರಿಪೇರಿ ಮಾಡಿಸಲು ಪ್ರಯತ್ನ ಪಟ್ಟರೂ ಯಶ ಕಂಡಿರಲಿಲ್ಲ. ಕುಡಿವ ನೀರಿನ ಸಮಸ್ಯೆ ಅರಿತು ಹೊಸ ಸ್ಟಾರ್ಟರ್‌ ಖರೀದಿಗೆ ಟೆಂಡರ್‌ ಕರೆದರು. ಮಾ.15 ರಂದು ಟೆಂಡರ್‌ ಓಪನ್‌ ಮಾಡಲಾಯಿತು. ಮಾ.15 ರಂದು ಟೆಂಡರ್‌ ಓಪನ್‌ ಆದರೂ ಗುತ್ತಿಗೆದಾರ ಹೊಸ ಎರಡು ಸ್ಟಾರ್ಟರ್‌ ಮಾ.28 ರ ರಾತ್ರಿ ತಂದಿದ್ದಾರೆ. ಮಾ.28 ಶುಕ್ರವಾರ ಸ್ಟಾರ್ಟರ್‌ ಅಳವಡಿಸುವ ಮೂಲಕ ಸಿಂಧುವಳ್ಳಿ, ತಗ್ಗಲೂರಲ್ಲಿ ಸ್ಟಾರ್ಟರ್‌ ಅಳವಡಿಸಿ ನೀರು ಎತ್ತಿಸಿ ಕಬಿನಿ ನೀರು ಹರಿಸುವಲ್ಲಿ ಪುರಸಭೆ ಕೊನೆಗೂ ಸಫಲವಾಗಿದೆ.

ಕಬಿನಿ ಕುಡಿಯುವ ನೀರಿನ ಸಮಸ್ಯೆಗೆ ಕೃತಕ ಸಮಸ್ಯೆ ಒಡ್ಡಿದ್ದಾರೆ ಎಂದು ಕನ್ನಡಪ್ರಭ ಮೊದಲಿಗೆ ಅನುಮಾನ ವ್ಯಕ್ತಪಡಿಸಿದ ಬಳಿಕ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕೂಡ ಕಬಿನಿ ನೀರಿನ ಸಮಸ್ಯೆಗೆ ಕೃತಕ ಸಮಸ್ಯೆ ಕಾರಣ ಎಂದು ಹೇಳಿದ್ದ ಬಗ್ಗೆ ಕನ್ನಡಪ್ರಭ ಪತ್ರಿಕೆ ಮಾ.28 ರಂದು ವರದಿ ಪ್ರಕಟಿಸಿತ್ತು. ಕನ್ನಡಪ್ರಭದಲ್ಲಿ ಕಬಿನಿ ಸಮಸ್ಯೆ ಕೃತಕ: ಜಿಲ್ಲಾಡಳಿತ ತನಿಖೆ ನಡೆಸುತ್ತಾ? ಎಂದು ವರದಿ ಪ್ರಕಟಿಸುವ ಮೂಲಕ ಕನ್ನಡಪ್ರಭ ಬದ್ಧತೆ ಮೆರೆದಿತ್ತು. ಈ ವರದಿಯು ಜನರ ಮೆಚ್ಚುಗೆಗೆ ಕೂಡಾ ಪಾತ್ರವಾಗಿತ್ತು.

ಕನ್ನಡಪ್ರಭಕ್ಕೆ ಮೆಚ್ಚುಗೆ ಸುರಿಮಳೆ:ಗುಂಡ್ಲುಪೇಟೆ ಪಟ್ಟಣಕ್ಕೆ ಕಬಿನಿ ಕುಡಿಯುವ ನೀರು ಕೆಟ್ಟಿದ ಬಳಿಕ ಈ ಸಮಸ್ಯೆ ಕುರಿತು ನಿರಂತರ ವರದಿ ಪ್ರಕಟಿಸಿ ಅಧಿಕಾರಿಗಳ ಬೆನ್ನತ್ತಿ ಕೊನೆಗೂ ನೀರು ಬರಲು ಕಾರಣವಾದ ಕನ್ನಡಪ್ರಭ ಪತ್ರಿಕೆಗೆ ಪಟ್ಟಣದ ನೂರಾರು ಮಂದಿ ನಾಗರೀಕರು ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡಪ್ರಭ ಪತ್ರಿಕೆ ನೇರ, ನಿಷ್ಟುರವಾಗಿ ವರದಿ ಪ್ರಕಟಿಸದಿದ್ದಲ್ಲಿ ಸದ್ಯಕ್ಕೆ ನೀರು ಬರುತ್ತಿರಲಿಲ್ಲ ಎಂದು ಪಟ್ಟಣದ ನಿವಾಸಿ ಹಾಗೂ ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್‌ ಕನ್ನಡಪ್ರಭಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಹಲವರು ಮೊಬೈಲ್‌ ಮೂಲಕ ಕರೆ ಮಾಡಿ ಕನ್ನಡಪ್ರಭ ಪತ್ರಿಕೆಯ ನಿರಂತರ ವರದಿ ಮಾಡಿ ಅಧಿಕಾರಿಗಳ ಎಚ್ಚರಿಸಿ, ಜನಪ್ರತಿನಿಧಿಗಳ ಗಮನಕ್ಕೆ ತಂದು ಕಬಿನಿ ನೀರು ಹರಿಸಲು ಕಾರಣವಾದ ಪತ್ರಿಕೆಗೆ ಧನ್ಯವಾದ ಸಲ್ಲಿಸಿದ್ದಾರೆ.