ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಬ್ಯಾಂಕ್ ಖಾತೆ ಹ್ಯಾಕರ್‌ಗಳ ಸುಳಿಗೆ ಸಿಲುಕಿ ವಂಚನೆ ಆರೋಪಕ್ಕೆ ತುತ್ತಾಗಿ ಸೌದಿ ಅರೇಬಿಯಾದ ರಿಯಾದ್‌ನ ಜೈಲಿನಲ್ಲಿ ಕಳೆದ ೧೧ ತಿಂಗಳಿನಿಂದ ಬಂಧಿಯಾಗಿದ್ದ ಕಡಬ ತಾಲೂಕಿನ ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್ ಬಂಧಮುಕ್ತನಾಗಿದ್ದು, ಸೋಮವಾರ ರಾತ್ರಿ ಮನೆಗೆ ಆಗಮಿಸಿದ್ದಾರೆ.ಸೋಮವಾರ ಬೆಳಗ್ಗೆ ರಿಯಾದ್‌ನಿಂದ ಅಲ್ಲಿನ ಪೊಲೀಸರು ಚಂದ್ರಶೇಖರ್ ಅವರನ್ನು ವಿಮಾನದಲ್ಲಿ ಮುಂಬೈಗೆ ಕಳುಹಿಸಿಕೊಡಲಿದ್ದು, ಅವರು ಮುಂಬೈನಿಂದ ಸಂಜೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ.ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಕೆಲಸದಲ್ಲಿ ಪದೋನ್ನತಿ ಪಡೆದು ಸೌದಿ ಅರೇಬಿಯಾಕ್ಕೆ ೨೦೨೨ರಲ್ಲಿ ತೆರಳಿದ್ದರು. ಅಲ್ಲಿ ಅಲ್ಪಾನರ್ ಸೆರಾಮಿಕ್ಸ್ ಎಂಬ ಕಂಪನಿಯಲ್ಲಿದ್ದರು. ೨೦೨೨ರ ನವೆಂಬರ್‌ನಲ್ಲಿ ಮೊಬೈಲ್ ಮತ್ತು ಸಿಮ್ ಖರೀದಿಗೆ ರಿಯಾದ್‌ನ ಅಂಗಡಿಗೆ ಭೇಟಿ ನೀಡಿದ್ದರು. ಅರ್ಜಿಯೊಂದಕ್ಕೆ ಎರಡು ಬಾರಿ ವಿದ್ಯುನ್ಮಾನ ವ್ಯವಸ್ಥೆಯಲ್ಲಿ ಹೆಬ್ಬೆಟ್ಟು (ತಂಬ್) ಸಹಿ ನೀಡಿದ್ದರು. ವಾರದ ಬಳಿಕ ಅವರಿಗೆ ಅರೇಬಿಕ್ ಭಾಷೆಯಲ್ಲಿ ಹೊಸ ದೂರವಾಣಿ ಸಂಖ್ಯೆಗೆ ಸಂದೇಶ ಬಂದಿತ್ತು. ಅದನ್ನು ತೆರೆದು ಚಂದ್ರಶೇಖರ್ ನೋಡಿದ್ದರು. ೨ ದಿನಗಳ ಬಳಿಕ ದೂರವಾಣಿ ಕರೆ ಬಂದು ಸಿಮ್‌ನ ಬಗ್ಗೆ ಮಾಹಿತಿ ಕೇಳಲಾಗಿತ್ತು. ಒಟಿಪಿ ತಿಳಿಸಿದ್ದರು. ವಾರದ ಬಳಿಕ ಅಲ್ಲಿನ ಪೊಲೀಸರು ಬಂದು ಚಂದ್ರಶೇಖರ್ ಅವರನ್ನು ಬಂಧಿಸಿದ್ದರು.
ಚಂದ್ರಶೇಖರ್‌ಗೆ ತಿಳಿಯದಂತೆ ಅಲ್ಲಿನ ಬ್ಯಾಂಕೊಂದರಲ್ಲಿ ಅವರದೇ ಹೆಸರಿನಲ್ಲಿ ಹ್ಯಾಕರ್‌ಗಳು ಖಾತೆ ತೆರೆದಿದ್ದರು. ಅಲ್ಲಿನ ಮಹಿಳೆಯೊಬ್ಬರ ಖಾತೆಯಿಂದ ಚಂದ್ರಶೇಖರ್ ಖಾತೆಗೆ ೨೨ ಸಾವಿರ ರಿಯಲ್ ಜಮೆಯಾಗಿ, ಅದರಿಂದ ಕೂಡಲೇ ಬೇರೆ ಯಾವುದೋ ದೇಶಕ್ಕೆ ಆ ಹಣ ವರ್ಗಾವಣೆಯಾಗಿತ್ತು. ಹಣ ಕಳೆದುಕೊಂಡ ಮಹಿಳೆಯು ಚಂದ್ರಶೇಖರ್ ಅವರ ಖಾತೆಗೆ ಹಣ ಜಮೆಯಾಗಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು.ಚಂದ್ರಶೇಖರ್ ಅವರ ಸ್ನೇಹಿತರು ೧೦ ಲಕ್ಷ ರು. ಸಂಗ್ರಹಿಸಿ ಅಲ್ಲಿನ ವಕೀಲರಿಗೆ ನೀಡಿದ್ದರು. ಹಣ ಕಳೆದುಕೊಂಡ ಮಹಿಳೆಗೆ ಸುಮಾರು ೬ ಲಕ್ಷ ರೂ. ಹಣವನ್ನು ಪಾವತಿಸಲಾಗಿತ್ತು. ಆದರೂ ಬಿಡುಗಡೆ ಸಾಧ್ಯವಾಗಿರಲಿಲ್ಲ, ಮಾಧ್ಯಮ ವರದಿಯ ಬಳಿಕ ಅಲ್ಲಿನ ಕಂಪೆನಿ ಎಚ್ಚೆತ್ತುಕೊಂಡು ನಿರಪರಾಧಿ ಚಂದ್ರಶೇಖರ್ ಅವರ ಬಿಡುಗಡೆಗೆ ಕೈಜೋಡಿಸಿತ್ತು. ಚಂದ್ರಶೇಖರ್ ಬಿಡುಗಡೆಗೆ ಮಡಿಕೇರಿಯ ಬಿ.ಆರ್.ಅರುಣ್ ಕುಮಾರ್ ಹಾಗೂ ಮಂಗಳೂರಿನ ಕಬೀರ್, ಉಡುಪಿಯ ಪ್ರಕಾಶ್ ನಿರಂತರ ಪ್ರಯತ್ನ ಮಾಡಿದ್ದರು. ಊರಿನಲ್ಲಿ ವಿವಾಹದ ವ್ಯವಸ್ಥೆಯನ್ನು ಸಿದ್ದಗೊಳಿಸಿ ಸಂಪಾದನೆಗೆಂದು ವಿದೇಶಕ್ಕೆ ಹೋದ ವೇಳೆ ವಿನಾ ಕಾರಣ ವಂಚನಾ ಜಾಲದಲ್ಲಿ ಸಿಲುಕಿ ಬಂಧಿಯಾಗಿ ಸಂಕಷ್ಟಕ್ಕೆ ತುತ್ತಾಗಿದ್ದ ಇವರು ಕೊನೆಗೂ ಬಂಧಮುಕ್ತರಾಗಿ ಹುಟ್ಟೂರಿಗೆ ಹಿಂತಿರುಗಿದ್ದಾರೆ.
ಈ ಮಧ್ಯೆ ಅರೇಬಿಯಾದ ರಿಯಾದ್‌ನಿಂದ ಸ್ವದೇಶಕ್ಕೆ ಬರುವಾಗ ವಿಮಾನ ಯಾನ ಸಂದರ್ಭದಲ್ಲೂ ಕೆಲವೊಂದು ಗೊಂದಲ ಉಂಟಾಯಿತು. ಈ ವೇಳೆ ಚಂದ್ರಶೇಖರ ಗೆಳೆಯರು ಸಮಸ್ಯೆ ಬಗೆಹರಿಸಿದರು. ಸಂಜೆ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಚಂದ್ರಶೇಖರ ಅವರನ್ನು ಕುಟುಂಬ ವರ್ಗ ಸ್ವಾಗತಿಸಿ, ಖಾಸಗಿ ವಾಹನದಲ್ಲಿ ಮನೆ ತಲುಪಿದ್ದಾರೆ. ಆರೋಗ್ಯವಾಗಿದ್ದಾರೆ ಎಂದು ಚಂದ್ರಶೇಖರ ಅವರ ಸಹೋದರ ಹರೀಶ್ ತಿಳಿಸಿದ್ದಾರೆ.