ಕಡಹಿನಬೈಲು: ತೋಟದಲ್ಲಿ ಒಂಟಿ ಸಲಗದ ದಾಂಧಲೆ

| Published : Mar 19 2025, 12:35 AM IST

ಸಾರಾಂಶ

ನರಸಿಂಹರಾಜಪುರ: ತಾಲೂಕಿನ ಕಡಹಿನಬೈಲು ಗ್ರಾಪಂ ಚೆನಮಣೆಯ ಜಿ.ಡಿ.ಸೋಮಣ್ಣ ಎಂಬುವರ ತೋಟಕ್ಕೆ ಒಂಟಿ ಸಲಗ ಸೋಮವಾರ ರಾತ್ರಿ ದಾಳಿ ಮಾಡಿ ಒಂದು ತೆಂಗಿನಮರ, 20 ಅಡಕೆ ಮರ ಹಾಗೂ 50 ಕ್ಕೂ ಹೆಚ್ಚು ನೇಂದ್ರ ಬಾಳೆಯನ್ನು ನಾಶ ಮಾಡಿದೆ.

ನರಸಿಂಹರಾಜಪುರ: ತಾಲೂಕಿನ ಕಡಹಿನಬೈಲು ಗ್ರಾಪಂ ಚೆನಮಣೆಯ ಜಿ.ಡಿ.ಸೋಮಣ್ಣ ಎಂಬುವರ ತೋಟಕ್ಕೆ ಒಂಟಿ ಸಲಗ ಸೋಮವಾರ ರಾತ್ರಿ ದಾಳಿ ಮಾಡಿ ಒಂದು ತೆಂಗಿನಮರ, 20 ಅಡಕೆ ಮರ ಹಾಗೂ 50 ಕ್ಕೂ ಹೆಚ್ಚು ನೇಂದ್ರ ಬಾಳೆಯನ್ನು ನಾಶ ಮಾಡಿದೆ.

ರಾತ್ರಿ 11 ಗಂಟೆ ಸುಮಾರಿಗೆ ಜಿ.ಡಿ. ಸೋಮಣ್ಣ ಅವರ ಮನೆ ಮುಂಭಾಗದ ಗೇಟಿನ ಮೂಲಕವೇ ಒಂಟಿ ಸಲಗ ನುಗ್ಗಿ ರಾತ್ರಿಯಿಡೀ ತೋಟದಲ್ಲೇ ಉಳಿದು ಬಾಳೆ, ಅಡಕೆ, ತೆಂಗಿನಮರದ ಹೆಡಲು, ಎಳನೀರನ್ನು ತಿಂದು ಬೆಳಕು ಹರಿಯುವ ಮುನ್ನವೇ ಅದೇ ಗೇಟಿನ ಮೂಲಕ ಹೊರಗೆ ಹೋಗಿ ಸಮೀಪದ ಅರಂಬಳ್ಳಿ ಮೀಸಲು ಅರಣ್ಯಕ್ಕೆ ಸೇರಿಕೊಂಡಿದೆ.

ತೆಂಗಿನಮರ ಆನೆಯ ದಾಳಿಗೆ ತುಂಡಾಗಿ ಬಿದ್ದಿದೆ. ಬೀಳುವ ಸಮಯದಲ್ಲಿ ಪಕ್ಕದ ವಿದ್ಯುತ್ ತಂತಿ ಮೇಲೆ ಬಿದ್ದು ತಂತಿ ತುಂಡಾಗಿ ಬಿದ್ದಿದೆ. ಕಾಡಾನೆ ದಾಳಿ ತಪ್ಪಿಸಲು ಜಿ.ಡಿ.ಸೋಮಣ್ಣ ಅವರು ತೋಟದ ಸುತ್ತಲೂ ಐಬೆಕ್ಸ್ ಬೇಲಿ ಮಾಡಿದ್ದರು. ಜಿ.ಟಿ.ಸೋಮಣ್ಣ ಅವರು ರಾತ್ರಿ ಮಡಬೂರು ಜಾತ್ರೆಗೆ ಹೋಗಿದ್ದರಿಂದ ಗೇಟನ್ನು ತೆರೆದಿಟ್ಟು ಹೋಗಿದ್ದರು. ಒಂಟಿ ಸಲಗ ಐಬೆಕ್ಸ್ ಬೇಲಿಯ ಹತ್ತಿರ ಹೋಗದೆ ಮನೆಯ ಮುಂಭಾಗದಲ್ಲಿರುವ ತೆರೆದ ಗೇಟಿನ ಮೂಲಕವೇ ಬಂದು ತೋಟಕ್ಕೆ ಹೋಗಿದೆ. ನಂತರ ಅದೇ ಗೇಟಿನ ಮೂಲಕ ಹೊರಗೆ ಹೋಗಿದೆ. ಮನೆಯವರು ಬೆಳಿಗ್ಗೆ ತೋಟಕ್ಕೆ ಹೋದ ನಂತರವೇ ಕಾಡಾನೆ ದಾಳಿ ಮಾಡಿರುವುದು ಬೆಳಕಿಗೆ ಬಂದಿದೆ.