ಸಾರಾಂಶ
ರಾಮನಗರ: ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಬರುವ ಕದಂಬ ಜಂಕ್ಷನ್ ನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸುವ ಸಂಬಂಧ ಅಂಡರ್ ಗ್ರೌಂಡ್ ಟನಲ್ ನಿರ್ಮಾಣ ಅಥವಾ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಕುರಿತಂತೆ ಬೆಂಗಳೂರು ಉಸ್ತುವಾರಿ ಸಚಿವರಿಗೆ ಪತ್ರ ಬರೆಯುವುದಾಗಿ ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸಂಸದ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕದಂಬ ಜಂಕ್ಷನ್‌ನಲ್ಲಿ ಟ್ರಾಫಿಕ್ ಜಾಮ್ ಗೆ ಪರಿಹಾರ ಕಲ್ಪಿಸುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದೇನೆ. ಈ ಸಮಸ್ಯೆ ಪರಿಹಾರಕ್ಕೆ ಅಂಡರ್ ಗ್ರೌಂಡ್ ಟನಲ್ ನಿರ್ಮಿಸುವ ಅಥವಾ 2 ಕಿ.ಮೀ ಹಿಂದೆಯೇ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಸಲಹೆ ನೀಡಿದ್ದಾರೆ. ಈ ಬಗ್ಗೆ ನಾನು ಬೆಂಗಳೂರು ಉಸ್ತುವಾರಿ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.ನಾನು ಸಂಸದನಾಗಿ ಮೂರುವರೆ ತಿಂಗಳಾಗಿದೆ. ಸಂಸತ್ ಅಧಿವೇಶನದಲ್ಲಿ ಎರಡು ಬಾರಿ ಮಾತನಾಡುವ ಅವಕಾಶ ಸಿಕ್ಕಿದೆ. ದೇಶದಲ್ಲಿ ಶೇಕಡ 13ರಷ್ಟು ಸಾವುಗಳು ರಸ್ತೆ ಅಪಘಾತದಿಂದ ಆಗುತ್ತಿದೆ. ಕ್ಯಾನ್ಸರ್ ನಿಂದ ಶೇಕಡ 8ರಷ್ಟು ಸಾವುಗಳು ಸಂಭವಿಸುತ್ತಿವೆ. ಹೀಗಾಗಿ ಪ್ರತಿ 125 -150 ಕಿ.ಮೀ.ಗೆ ಪಾಲಿ ಟ್ರಾಮಾ ಕ್ಲಿನಿಕ್ ಪ್ರಾರಂಭಿಸುವಂತೆ ಸಂಸತ್ ಮತ್ತು ಸಚಿವರ ಗಮನ ಸೆಳೆದಿದ್ದೇನೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮಾತ್ರವಲ್ಲದೆ ದೇಶಾದ್ಯಂತ ಈ ಯೋಜನೆ ಜಾರಿಗೆ ತರುವಂತೆ ಚರ್ಚೆ ನಡೆಸಿದ್ದೇನೆ. ಇದರಿಂದ ಅಪಘಾತಕ್ಕೊಳಗಾದ ಗಾಯಾಳುಗಳ ಪ್ರಾಣ ರಕ್ಷಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕನಕಪುರ, ಸಾತನೂರು, ಚನ್ನಪಟ್ಟಣ ಹಾಗೂ ಬನ್ನೇರುಘಟ್ಟ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಟ್ ನಿರ್ಮಾಣ ಮಾಡುವ ಅಗತ್ಯವಿದೆ. ಈಗಾಗಲೇ 72 ಕಿ.ಮೀ. ತಡೆಗೋಡೆ ನಿರ್ಮಾಣವಾಗಿದ್ದು, 28 ಕಿ.ಮೀ ಬಾಕಿಯಿದೆ. ಆದ್ದರಿಂದ ಕೇಂದ್ರ ರೈಲ್ವೆ ಸಚಿವರೊಂದಿಗೆ ಚರ್ಚೆ ನಡೆಸಿ ರೇಲ್ವೆ ಹಳಿಗಳನ್ನು ಕಡಿಮೆ ದರದಲ್ಲಿ ಒದಗಿಸುವಂತೆ ಮನವಿ ಮಾಡಿದ್ದು, ಇದಕ್ಕೆ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.ಸ್ಯಾಟ್ ಲೈಟ್ ರಿಂಗ್ ರೋಡ್(ಎಸ್ ಟಿಆರ್ ಆರ್ ) ನಿಂದ ಅನುಮೋದನೆ ಕೊಡುವಂತೆ ನಾನು ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇವು. ಅವರು 45 ದಿನಗಳಲ್ಲಿ ಅನುಮೋದನೆ ನೀಡುವ ಭರವಸೆ ನೀಡಿದ್ದರು. ಈಗ 30 ದಿನದೊಳಗೆ ಅನುಮೋದನೆ ನೀಡಿದ್ದಾರೆ. ಎಸ್ ಟಿಆರ್‌ಆರ್ ಯೋಜನೆ ಬೆಂಗಳೂರಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ ಎಂದು ಹೇಳಿದರು.
ಎಸ್ ಟಿಆರ್‌ಆರ್ ಯೋಜನೆಯಿಂದ ಬೆಂಗಳೂರು ನಗರ ಮಾತ್ರವಲ್ಲದೆ ಹೊರ ವಲಯದಲ್ಲಿನ ವಾಹನ ದಟ್ಟಣೆಯೂ ಕಡಿಮೆ ಆಗಲಿದೆ. ದಾಬಸ್ ಪೇಟೆಯಿಂದ - ಅರಿಶಿನಕುಂಟೆ - ಮಾಗಡಿ - ರಾಮನಗರ - ಕನಕಪುರ - ಹಾರೋಹಳ್ಳಿ - ಆನೇಕಲ್ - ಹೊಸೂರು ಮಾರ್ಗವಾಗಿ ಹೆದ್ದಾರಿ ನಿರ್ಮಾಣವಾಗಲಿದ್ದು, ಈಗಾಗಲೇ ಜಾಗತಿಕ ಟೆಂಡರ್ ಕರೆಯಲಾಗಿದೆ ಎಂದು ಮಂಜುನಾಥ್ ತಿಳಿಸಿದರು.ಬೆಂಗಳೂರು - ಹೊಸೂರು ಹೈವೈ ಬಗ್ಗೆಯೂ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಿದ್ದೇವೆ. ಕುಣಿಗಲ್ ನಲ್ಲಿ ಕೊಬ್ಬರಿ ಬೆಳೆಗಾರರ ಬಾಕಿ ಪಾವತಿ ಮಾಡಿಸಿದ್ದೇವೆ. ಕೆರೆ ತುಂಬಿಸುವ ಕಾರ್ಯಕ್ಕೂ ಒತ್ತು ಕೊಡಬೇಕಿದೆ. 56 ಕೆರೆಗಳು ತುಂಬಿಲ್ಲ. ಮಳೆ ಆಗುತ್ತಿದ್ದರೂ ಆ ನೀರು ಕೆರೆಗೆ ಹರಿಯುತ್ತಿಲ್ಲ. ಅದಕ್ಕಾಗಿ ಕೆರೆ ತುಂಬಿಸುವ ಕಾರ್ಯಕ್ಕೆ ವಿಶೇಷವಾಗಿ ಗಮನ ಹರಿಸುತ್ತೇವೆ ಎಂದು ಮಂಜುನಾಥ್ ಹೇಳಿದರು.
ಈ ಸಂದರ್ಭದಲ್ಲಿ ಮಂಜುನಾಥ್ ಪತ್ನಿ ಅನುಸೂಯ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಗೌತಮ್ ಗೌಡ, ಮುರಳೀಧರ್, ಪದ್ಮನಾಭ, ಚಂದ್ರಶೇಖರರೆಡ್ಡಿ, ರುದ್ರದೇವರು, ಕಾಳಯ್ಯ, ಜೆಡಿಎಸ್ ಮುಖಂಡರಾದ ನರಸಿಂಹಮೂರ್ತಿ, ಜಯಕುಮಾರ್ ಇತರರು ಹಾಜರಿದ್ದರು.ಬಾಕ್ಸ್.............
ಜನರ ಅನುಕೂಲಕ್ಕಾಗಿ ಕಚೇರಿ ಪ್ರಾರಂಭ:ಜಿಲ್ಲಾ ಕೇಂದ್ರವಾಗಿರುವ ಕಾರಣ ರಾಮನಗರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸಂಸದರ ಕಚೇರಿ ಉದ್ಘಾಟನೆ ಮಾಡಿದ್ದೇನೆ ಎಂದು ಸಂಸದ ಡಾ. ಮಂಜುನಾಥ್ ಹೇಳಿದರು.
ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ಹಾರೋಹಳ್ಳಿ ತಾಲೂಕಿನ ಜನರು ಸಮಸ್ಯೆಗಳನ್ನು ಹೊತ್ತು ಬೆಂಗಳೂರಿಗೆ ಆಗಮಿಸುತ್ತಾರೆ. ಅವರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಕಚೇರಿ ತೆರೆದು ಅಹವಾಲು ಸ್ವೀಕರಿಸಲಾಗುತ್ತಿದೆ. ನಾನು ವಾರದಲ್ಲಿ ಒಂದು ಅಥವಾ ಎರಡು ದಿನ ಕಚೇರಿಯಲ್ಲಿ ಸಾರ್ವಜನರಿಗೆ ಲಭ್ಯ ಇರುತ್ತೇನೆ. ಜನರ ಆಶೋತ್ತರ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕಚೇರಿ ತೆರೆಯಲಾಗಿದೆ ಎಂದು ತಿಳಿಸಿದರು.ಕೋಟ್ ....
ಶಾಸಕ ಮುನಿರತ್ನ ಆಡಿರುವ ಮಾತುಗಳು ಬಹಳ ದೊಡ್ಡ ಸುದ್ದಿಯಾಗಿದೆ. ಈಗಾಗಲೇ ದೂರು ಸಹ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಕಾನೂನಿಗೆ ಎಲ್ಲರೂ ಬದ್ಧರಾಗಿರಬೇಕು. ಅವರು ನಾನು ಮಾತನಾಡಿಲ್ಲ ಎಂದಿದ್ದಾರೆ. ಆದರೆ, ಒಂದು ವೇಳೆ ಅವರು ಆ ರೀತಿ ಮಾತನಾಡಿದ್ದರೆ ಅದು ತಪ್ಪು. ತಪ್ಪಾಗಿದ್ದರೆ ಈ ನೆಲದ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ.-ಡಾ.ಸಿ.ಎನ್ .ಮಂಜುನಾಥ್, ಸಂಸದರು, ಬೆಂಗಳೂರು ಗ್ರಾಮಾಂತರ ಕ್ಷೇತ್ರ
15ಕೆಆರ್ ಎಂಎನ್ 3.ಜೆಪಿಜಿರಾಮನಗರ ಜಿಪಂ ಕಚೇರಿಯಲ್ಲಿ ನೂತನ ಸಂಸದ ಕಚೇರಿಯಲ್ಲಿ ಡಾ.ಸಿ.ಎನ್.ಮಂಜುನಾಥ್ ದಂಪತಿ ವಿಶೇಷ ಪೂಜೆ ಸಲ್ಲಿಸಿದರು.