ದ್ವಿಭಾಷಾ ನೀತಿ ಜಾರಿಗೆ ಕದಂಬ ಕನ್ನಡ ಸೇನೆ ಆಗ್ರಹ

| Published : Jul 20 2025, 01:15 AM IST

ಸಾರಾಂಶ

ರಾಮನಗರ: ರಾಜ್ಯದಲ್ಲಿನ ವಿದ್ಯಾರ್ಥಿಗಳ ಮೇಲೆ ಬಲವಂತವಾಗಿ ಹಿಂದಿ ಹೇರಿಕೆ ಮಾಡಬಾರದು. ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು ಎಂದು ಕದಂಬ ಕನ್ನಡ ಸೇನೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿತು.

ರಾಮನಗರ: ರಾಜ್ಯದಲ್ಲಿನ ವಿದ್ಯಾರ್ಥಿಗಳ ಮೇಲೆ ಬಲವಂತವಾಗಿ ಹಿಂದಿ ಹೇರಿಕೆ ಮಾಡಬಾರದು. ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು ಎಂದು ಕದಂಬ ಕನ್ನಡ ಸೇನೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿತು.

ಚಾಮರಾಜನಗರದಿಂದ ಬೆಂಗಳೂರಿಗೆ ಜಾಥಾ ಹೊರಟಿರುವ ಕದಂಬ ಕನ್ನಡ ಸೇನೆಯ ಪದಾಧಿಕಾರಿಗಳು ರಾಮನಗರದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತ್ರಿಭಾಷ ನೀತಿಯಿಂದ ಹಿಂದಿ ಭಾಷೆಯನ್ನು ಬಲವಂತದಿಂದ ಹೇರಿಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 1.20 ಲಕ್ಷ ಮಕ್ಕಳು ಹಿಂದಿ ಭಾಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ನಮ್ಮದಲ್ಲದ, ನಮ್ಮ ರಾಜ್ಯದ ಭಾಷೆಯಲ್ಲದ, ಭಾಷೆಗೆ ರಾಜ್ಯ ಸರ್ಕಾರ ಮನ್ನಣೆ ನೀಡಿತ್ತು. ಬಲವಂತದ ಹಿಂದಿ ಹೇರಿಕೆ ದುಷ್ಟ ನೀತಿ. ಹೀಗಾಗಿ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.50 ಮೀಸಲಾತಿ ಘೋಷಿಸಬೇಕು. ಸರ್ಕಾರಿ ಹುದ್ದೆಗಳಲ್ಲಿ ಇರುವ ಸಮಸ್ತ ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕರಿ ಶಿಕ್ಷಣ ವ್ಯವಸ್ಥೆಯಲ್ಲೇ ಓದಿಸಬೇಕು. ಈ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕು. ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸದಿದ್ದರೆ, ಅವರಿಗೆ ಪ್ರಮೋಷನ್ ಸ್ಥಗಿತಗೊಳಿಸುವ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಕೃಪಾಂಕವನ್ನು ನೀಡಿ ಅವರ ಭವಿಷ್ಯದ ರಕ್ಷಣೆ ಮಾಡಲಾಗುತ್ತಿತ್ತು. ಈ ವ್ಯವಸ್ಥೆ ಈಗ ನಿರ್ಲಕ್ಷವಾಗಿದೆ. ಈ ಕೂಡಲೇ ಗ್ರಾಮೀಣ ಕೃಪಾಂಕ ಜಾರಿಗೆ ತರಬೇಕು ಎಂದು ಆಗ್ರಹ ಪಡಿಸಿದರು.

ಗ್ರಾಮಪಂಚಾಯ್ತಿ ಮಟ್ಟದಲ್ಲಿ ಸರ್ಕಾರಿ ಪಬ್ಲಿಕ್ ಶಾಲೆಗಳು ಈ ವರ್ಷದಿಂದಲೇ ಆರಂಭವಾಗಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ವಾಹನ ವ್ಯವಸ್ಥೆ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳನ್ನು ಆರಂಭಿಸಬೇಕು. ಎಸ್.ಡಿ.ಎಂ.ಸಿಗಳಲ್ಲಿ ಕನ್ನಡ ಪರ ಹೋರಾಟಗಾರರು, ಖಾಸಗಿ ಸಂಘ-ಸಂಸ್ಥೆಗಳ ಸದಸ್ಯರು, ಸಮಾಜ ಸೇವಕರು, ಸಾಮಾಜಿಕ ಕಾರ್ಯಕರ್ತರು, ಮಾಹಿತಿ ಹಕ್ಕು ಕಾರ್ಯಕರ್ತರನ್ನು ಒಳಗೊಂಡಂತೆ ಸಮಿತಿಗಳು ರಚನೆಯಾಗಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸೇನೆಯ ಸಂಸ್ಥಾಪಕ ಅಧ್ಯಕ್ಷ ನಾ.ಅಂಬರೀಷ್, ರಾಜ್ಯಾದ್ಯಕ್ಷ ಶಿವಕುಮಾರ್ , ರಾಜ್ಯ ಕಾರ್ಯದರ್ಶಿ ಅಶಾದ್‌ ಉಲ್ಲಾ, ಸಹಕಾರ್ಯದರ್ಶಿ ಭಗವಾನ್, ರಾಜ್ಯ ಪ್ರಮುಖರಾದ ಶಂಕರನಪುರ ನಿಂಗರಾಜು, ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಅಶ್ವಥ್, ರಾಮನಗರ ಜಿಲ್ಲಾಧ್ಯಕ್ಷ ಶಿವು, ರಾಜ್ಯ ಪ್ರತಿನಿಧಿ ಚಿಕ್ಕ ವೆಂಕಟಪ್ಪ, ಮೈಸೂರು ಘಟಕದ ಜಿಲ್ಲಾಧ್ಯಕ್ಷ ಬಸವಣ್ಣ, ಮಂಡ್ಯ ಘಟಕದ ಜಿಲ್ಲಾಧ್ಯಕ್ಷ ಯೋಗೇಶ್‌ , ಚನ್ನಪಟ್ಟಣ ತಾಲೂಕು ಘಟಕದ ಅಧ್ಯಕ್ಷ ವರದರಾಜು ಮತ್ತಿತರರು ಹಾಜರಿದ್ದರು.

17ಕೆಆರ್ ಎಂಎನ್ 3.ಜೆಪಿಜಿ

ರಾಮನಗರದಲ್ಲಿ ಕದಂಬ ಕನ್ನಡ ಸೇನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರಿಗೆ ಮನವಿ ಸಲ್ಲಿಸಿದರು.