ಕೊಡವಲ್ಯಾಂಡ್ ಸ್ವಾಯತ್ತತೆ, ಕೊಡವ ಜನಾಂಗಕ್ಕೆ ಪ್ರತ್ಯೇಕ ಗುರುತಿನ ಮಾನ್ಯತೆ ಹಾಗೂ 2027ರ ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ಗೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕೊಡವ ಪ್ರದೇಶದಾದ್ಯಂತ ಹಮ್ಮಿಕೊಂಡಿರುವ ಶಾಂತಿಯುತ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದ 9ನೇ ಸರಣಿ 11ರಂದು ಬೆಳಿಗ್ಗೆ 10.30ಕ್ಕೆ ಕಡಿಯತ್ನಾಡ್-ಬೆಪ್ಪುನಾಡ್ ನಡುವಿನ ಕಡಂಗದಲ್ಲಿ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಮಡಿಕೇರಿ: ಕೊಡವಲ್ಯಾಂಡ್ ಸ್ವಾಯತ್ತತೆ, ಕೊಡವ ಜನಾಂಗಕ್ಕೆ ಪ್ರತ್ಯೇಕ ಗುರುತಿನ ಮಾನ್ಯತೆ ಹಾಗೂ 2027ರ ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ಗೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕೊಡವ ಪ್ರದೇಶದಾದ್ಯಂತ ಹಮ್ಮಿಕೊಂಡಿರುವ ಶಾಂತಿಯುತ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದ 9ನೇ ಸರಣಿ 11ರಂದು ಬೆಳಿಗ್ಗೆ 10.30ಕ್ಕೆ ಕಡಿಯತ್ನಾಡ್-ಬೆಪ್ಪುನಾಡ್ ನಡುವಿನ ಕಡಂಗದಲ್ಲಿ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಕೊಡವ ಜನಾಂಗದ ಅಸ್ತಿತ್ವ, ಗುರುತು, ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆ ಹಾಗೂ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯದ ರಕ್ಷಣೆಗಾಗಿ ಈ ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕೊಡವಲ್ಯಾಂಡ್‌ಗೆ ಸಂವಿಧಾನದ 244 ಮತ್ತು 371ನೇ ವಿಧಿ ಹಾಗೂ 5 ಮತ್ತು 6ನೇ ಶೆಡ್ಯೂಲ್ ಅಡಿಯಲ್ಲಿ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತದ ಮಾನ್ಯತೆ ನೀಡಬೇಕು. ವಿಶ್ವಸಂಸ್ಥೆಯ ಚಾರ್ಟರ್ ಹಾಗೂ ಸಂವಿಧಾನದ ಅಡಿಯಲ್ಲಿ ಕೊಡವ ಜನಾಂಗಕ್ಕೆ ಆದಿಮಸಂಜಾತ ಸಮುದಾಯವಾಗಿ ವಿಶೇಷ ಸಂವಿಧಾನಬದ್ಧ ಮಾನ್ಯತೆ ನೀಡಬೇಕು.

ಕೊಡವರ ಪವಿತ್ರ ಗನ್-ತೋಕ್ ಸಂಪ್ರದಾಯವನ್ನು ಸಂವಿಧಾನದ 25, 26 ಮತ್ತು 28ನೇ ವಿಧಿಗಳ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿ ಮುಂದುವರಿಸಲು ಅವಕಾಶ ನೀಡಬೇಕು. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ ಮಾದರಿಯಲ್ಲಿ ಕೊಡವ ಜನಾಂಗಕ್ಕೂ ಪ್ರತ್ಯೇಕ ಅಮೂರ್ತ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಕಲ್ಪಿಸಬೇಕು.

ಶಾಸ್ತ್ರ ಕೊಡವತಕ್ಕ್ ಭಾಷೆಯನ್ನು ಸಂವಿಧಾನದ 8ನೇ ಅನುಸೂಚಿಗೆ ಸೇರಿಸಬೇಕು ಹಾಗೂ ಕೆಳದಿ, ಪಾಲೇರಿ ರಾಜರು ಮತ್ತು ನಂತರ ಬ್ರಿಟಿಷರ ವಶಕ್ಕೆ ಹೋದ ಕೊಡವರ ವಂಶಪಾರಂಪರ್ಯ ಆಸ್ತಿಗಳನ್ನು ವಿಶ್ವಸಂಸ್ಥೆಯ ಆದಿಮಸಂಜಾತ ಆಸ್ತಿ ಮರುಪಡೆಯುವ ಹಕ್ಕುಗಳಡಿಯಲ್ಲಿ ಮರಳಿ ಕೊಡವರಿಗೆ ಹಸ್ತಾಂತರಿಸಬೇಕು ಎಂದು ಎನ್.ಯು.ನಾಚಪ್ಪ ಆಗ್ರಹಿಸಿದ್ದಾರೆ.