ಬಹಿಷ್ಕಾರದಿಂದ ಬಳಲುತ್ತಿರುವ ಕಾಡಸಿದ್ದರು

| Published : Nov 04 2023, 12:31 AM IST

ಬಹಿಷ್ಕಾರದಿಂದ ಬಳಲುತ್ತಿರುವ ಕಾಡಸಿದ್ದರು
Share this Article
  • FB
  • TW
  • Linkdin
  • Email

ಸಾರಾಂಶ

ಹೆಣ್ಣು ಕೊಡುತ್ತಿಲ್ಲ, ತೆಗೆದುಕೊಳುತ್ತಿಲ್ಲ. ಬಹಿಷ್ಕಾರಕ್ಕೊಳಗಾದವರನ್ನು ಮಾತನಾಡಿಸಿದರೆ ದಂಡ. ಕೆಲವರು ಊರೇ ತೊರೆದಿದ್ದಾರೆ. ಶಾಲೆಯಿಂದ ಮಕ್ಕಳು ದೂರ. ಅಮಾನವೀಯ ಬಹಿಷ್ಕಾರ ಇನ್ನು ಜೀವಂತ.

ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳಬಹಿಷ್ಕಾರಕ್ಕೊಳಗಾದವರನ್ನು ಯಾರೂ ಮಾತನಾಡಿಸುವಂತಿಲ್ಲ. ಮಾತಾಡಿಸಿದವರಿಗೆ ದಂಡ. ದೇವಸ್ಥಾನಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ದೇವಸ್ಥಾನಕ್ಕೆ ಹೋದರೂ ದಂಡ. ಅವರಿಗೆ ಹೆಣ್ಣು ಕೊಡುತ್ತಿಲ್ಲ. ಅವರಿಂದ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಹೆತ್ತ ಮಕ್ಕಳು ಮನೆಗೆ ಬರುವಂತಿಲ್ಲ. ಇದರಿಂದ ರೋಸಿ ಹೋಗಿ ಕೆಲವರು ಊರನ್ನೇ ತೊರೆದಿದ್ದಾರೆ. ಇನ್ನು ಕೆಲವರು ಊರೂರು ಅಲೆಯುತ್ತಿದ್ದಾರೆ.

ಕುಲ ಪಂಚಾಯಿತಿಗೆ ಬಾರದೇ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ ಎನ್ನುವ ಕಾರಣಕ್ಕಾಗಿ ಕಾಡಸಿದ್ದ ಜನಾಂಗದ 45 ಕುಟುಂಬಗಳು ಅನುಭವಿಸುತ್ತಿರುವ ಯಾತನೆ ಇದು.

ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದ ಬಸವಣ್ಣಿ ಕ್ಯಾಂಪ್ ನಿವಾಸಿಗಳಾದ ಡೊಕ್ಕಣ್ಣವರ ಎನ್ನುವ 45 ಕುಟುಂಬಗಳು ಕಳೆದ ಒಂದೂವರೆ ವರ್ಷದಿಂದ ತಮ್ಮದೇ ಸಮಾಜದಿಂದ ಬಹಿಷ್ಕಾರಕ್ಕೆ ತುತ್ತಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ.

ಸಂಗನಾಳದಲ್ಲಿರುವ 27 ಎಕರೆ ಜಮೀನು ವಿವಾದದಿಂದ ಕುಲಪಂಚಾಯಿತಿಯಲ್ಲಿ ಅವರಿಗೆ ಬಹಿಷ್ಕಾರ ಹಾಕಿರುವುದರಿಂದ ರಾಜ್ಯಾದ್ಯಂತ ಡೊಕ್ಕಣ್ಣವರ ಕುಟುಂಬದವರನ್ನು ಉಳಿದ ಕಾಡಸಿದ್ದರು ಬಹಿಷ್ಕಾರ ಹಾಕಿ ದೂರ ಇಟ್ಟಿದ್ದಾರೆ.

ಆಗಿದ್ದೇನು?: ಫಕೀರಪ್ಪ ಹುಸೇನಪ್ಪ ಡೊಕ್ಕಣ್ಣವರ, ಲಕ್ಷ್ಮಣ ಸಣ್ಣಹನುಮಪ್ಪ, ಸಣ್ಣಮುದಕಪ್ಪ, ಕೃಷ್ಣಪ್ಪ ಸಣ್ಣಹುಸೇನಪ್ಪ ಎಂಬವರ ಹೆಸರಿನಲ್ಲಿ 27 ಎಕರೆ ಭೂಮಿ ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮದಲ್ಲಿದೆ.

ಈ ಭೂಮಿಯಲ್ಲಿ ನಮಗೂ ಪಾಲು ಇದೆ ಎಂದು ಗೋಪಾಲ ಒಂಟೆತ್ತಿನವರ, ಹನುಮಂತಪ್ಪ, ನಾಗರಾಜ ಗಡ್ಡಿ, ಹುಸೇನಪ್ಪ, ಮಂಜಪ್ಪ ಗಡ್ಡಿ ಎಂಬವರು ಸೇರಿದಂತೆ 12 ಮಂದಿ ಜಗಳವಾಡಿದ್ದಾರೆ. ನಾವು ಜಮೀನು ಕೊಡುವ ಪ್ರಶ್ನೆಯೇ ಇಲ್ಲ ಎಂದು ಡೊಕ್ಕಣ್ಣವರ ಕುಟುಂಬದವರು ಹೇಳಿದ್ದಾರೆ.

ಇದರಿಂದ ರೊಚ್ಚಿಗೆದ್ದ ಗಡ್ಡಿ, ಒಂಟೆತ್ತಿನ, ಕುಮ್ಮಾವರಿ ಕುಟುಂಬದವರು ಇವರ ಜತೆ ಜಗಳವಾಡಿದ್ದಾರೆ. ಹೀಗೆ ಜಗಳವಾದ ಮೇಲೆ ಡೊಕ್ಕಣ್ಣವರ ಕುಟುಂಬದವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಬಹಿಷ್ಕಾರ: ಗಡ್ಡಿ, ಒಂಟೆತ್ತಿನ, ಕುಮ್ಮಾವರಿ ಕುಟುಂಬದವರು ಕುಲಪಂಚಾಯಿತಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ₹6 ಲಕ್ಷ ಪಾವತಿ ಮಾಡಿ ಕುಲಪಂಚಾಯಿತಿ ಹಿರಿಯರಲ್ಲಿ ನ್ಯಾಯ ಕೇಳಿದ್ದಾರೆ. ಅದರಂತೆ ಡೊಕ್ಕಣ್ಣವರ ಕುಟುಂಬದವರಿಗೆ ₹6 ಲಕ್ಷ ಪಾವತಿ ಮಾಡುವಂತೆ ಹೇಳಿದ್ದಾರೆ. ಇವರು ಕೊಡದೇ ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದ 2022ರ ಆಗಸ್ಟ್ 16ರಂದು ಕುಲಪಂಚಾಯಿತಿಯಲ್ಲಿ ಡೊಕ್ಕಣ್ಣವರ ಕುಟುಂಬದವರಿಗೆ ಬಹಿಷ್ಕಾರ ಹಾಕಿದ್ದಾರೆ. ಈ 45 ಕುಟುಂಬದವರನ್ನು ಸಮಾಜದಿಂದ ಕಳೆದ ಒಂದೂವರೆ ವರ್ಷದಿಂದ ದೂರ ಇಟ್ಟಿದ್ದಾರೆ.

ಯಮಯಾತನೆ: ಬಹಿಷ್ಕಾರದ ಬಳಿಕ ಈ 45 ಕುಟುಂಬಗಳ ಕಾಡಸಿದ್ದರನ್ನು ಇತರೆ ಕಾಡಸಿದ್ದರು ಮಾತಾಡಿಸುತ್ತಿಲ್ಲ. ಮಾತಾಡಿಸಿದವರಿಗೆ ದಂಡ ಹಾಕಿದ್ದಾರೆ. ಡೊಕ್ಕಣ್ಣವರ ಕುಟುಂಬದವರು ಮದುವೆ ಮಾಡಿಕೊಟ್ಟಿರುವ ಹೆತ್ತಮಕ್ಕಳನ್ನು ಮನೆಗೆ ಕಳುಹಿಸುತ್ತಿಲ್ಲ. ಅವರನ್ನು ಯಾವುದೇ ಧಾರ್ಮಿಕ ಕಾರ್ಯದಲ್ಲಿ ಸೇರಿಸಿಕೊಳ್ಳುತ್ತಿಲ್ಲ. ದೇವಸ್ಥಾನಕ್ಕೂ ಪ್ರವೇಶ ನೀಡುತ್ತಿಲ್ಲ. ಇವರಿಗೆ ಹೆಣ್ಣು ಕೊಡುತ್ತಿಲ್ಲ ಮತ್ತು ಇವರಿಂದ ಹೆಣ್ಣು ತೆಗೆದುಕೊಳ್ಳುತ್ತಿಲ್ಲ.

ಇದರಿಂದ ರೋಸಿ ಹೋದ ಅನೇಕರು ತಾವರಗೇರಾ ಬಸವಣ್ಣ ಕ್ಯಾಂಪನ್ನೇ ತೊರೆದಿದ್ದಾರೆ. ಇದ್ದ ಮನೆಗೆ ಬೀಗ ಜಡಿದು ಊರೂರು ಅಲೆಯುತ್ತಿದ್ದಾರೆ. ಇದರಿಂದ ಪುಟ್ಟ ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಸಂಬಂಧಿಕರಲ್ಲಿಯೇ ಮದುವೆ ಮಾಡಿಕೊಟ್ಟಿರುವ ಹೆತ್ತಮಕ್ಕಳ ಮುಖ ನೋಡಲು ಆಗುತ್ತಿಲ್ಲ. ವ್ಯಾಪಾರಕ್ಕೆ ಹೋದಾಗ ಇವರನ್ನು ಯಾರೂ ಸಂಪರ್ಕಿಸುತ್ತಿಲ್ಲ. ಮದುವೆ ಸೇರಿದಂತೆ ಮೊದಲಾದ ಕಾರ್ಯಕ್ರಮಗಳಿಗೆ ಇವರ ಬಳಿಗೆ ಯಾರೂ ಬರುತ್ತಲೇ ಇಲ್ಲ. ಸತ್ತರೂ ಬರುತ್ತಿಲ್ಲ. ಅಷ್ಟು ಕಟ್ಟುನಿಟ್ಟಾಗಿ ಬಹಿಷ್ಕಾರ ಹಾಕಿದ್ದಾರೆ.

ಸಂಗನಾಳದಲ್ಲಿ ದೇವಿ ಜಾತ್ರೆಯಾದಾಗ ಡೊಕ್ಕಣ್ಣವರ ಕುಟುಂಬದ ಯಾರೂ ಬಾರದಂತೆ ಡಂಗುರ ಸಾರಿದ್ದಾರೆ. ಬಹಿಷ್ಕಾರ ಹಿಂಪಡೆಯಲು ಕುಲಪಂಚಾಯಿತಿಗೆ ₹6 ಲಕ್ಷ ಪಾವತಿ ಮಾಡಿ ಹಾಜರಾಗಬೇಕು. ಬಳಿಕ ಕುಲಪಂಚಾಯಿತಿಯಲ್ಲಿ ತೀರ್ಮಾನ ಮಾಡಿದಂತೆ ನಡೆದುಕೊಂಡರೆ ಬಹಿಷ್ಕಾರ ಹಿಂಪಡೆಯುತ್ತೇವೆ ಎನ್ನುತ್ತಾರೆ ಕುಲಪಂಚಾಯಿತಿ ಹಿರಿಯರು.

ಕುಲಪಂಚಾಯಿತಿಗೆ ₹6 ಲಕ್ಷವನ್ನು ಎಲ್ಲಿಂದ ಪಾವತಿಸಬೇಕು. ನ್ಯಾಯಕ್ಕಾಗಿ ನಾವು ನ್ಯಾಯಾಲಯ ಮೊರೆ ಹೋಗಿದ್ದೇ ತಪ್ಪಾಯಿತಾ? ನಮಗೆ ಬಹಿಷ್ಕಾರ ಹಾಕಿದ್ದರಿಂದ ನಾವು, ನಮ್ಮ ಕುಟುಂಬದವರು ನರಕಯಾತನೆ ಅನುಭವಿಸುತ್ತಿದ್ದೇವೆ. ಇದರಿಂದ ನಮಗೆ ಮುಕ್ತಿ ಕೊಡಿಸಿ ಎನ್ನುತ್ತಾರೆ ಮುಖಂಡ ರಾಜಶೇಖರ ಡೊಕ್ಕಣ್ಣವರ.