ಸಾರಾಂಶ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಲವು ಕೆಮಿಕಲ್ ತ್ಯಾಜ್ಯ ಕಂಪನಿಗಳಿಂದ ಹೊರಹೊಮ್ಮುತ್ತಿರುವ ವಿಷಗಾಳಿ, ದುರ್ನಾತ ಹಾಗೂ ಕಳ್ಳದಾರಿ ಮೂಲಕ ರಾತ್ರೋರಾತ್ರಿ ಹಳ್ಳಕೊಳ್ಳಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಕಂಪನಿಗಳ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಗಿದೆ.
ಕನ್ನಡಪ್ರಭ ಸರಣಿ ವರದಿ ಭಾಗ: 119
ಆನಂದ್ ಎಂ. ಸೌದಿಕನ್ನಡಪ್ರಭ ವಾರ್ತೆ ಯಾದಗಿರಿ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಲವು ಕೆಮಿಕಲ್ ತ್ಯಾಜ್ಯ ಕಂಪನಿಗಳಿಂದ ಹೊರಹೊಮ್ಮುತ್ತಿರುವ ವಿಷಗಾಳಿ, ದುರ್ನಾತ ಹಾಗೂ ಕಳ್ಳದಾರಿ ಮೂಲಕ ರಾತ್ರೋರಾತ್ರಿ ಹಳ್ಳಕೊಳ್ಳಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಕಂಪನಿಗಳ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಗಿದೆ.ಕಳೆದೊಂದು ವಾರದ ಅವಧಿಯಲ್ಲಿ ಯಥೇಚ್ಛವಾಗಿ ದಟ್ಟವಾದ ಕಪ್ಪು ಹೊಗೆ ಬಿಡುತ್ತಿರುವ ಕಂಪನಿಗಳು ಹಾಗೂ ಅಪಾಯಕಾರಿ ರಾಸಾಯನಿಕ ತ್ಯಾಜ್ಯವನ್ನು ಎಲ್ಲೆಂದರೆಲ್ಲಿ ಸುರಿದು ನಾಪತ್ತೆಯಾಗುತ್ತಿರುವ ಈ ಕಂಪನಿಗಳ ಟ್ಯಾಂಕರ್‌ಗಳ ಕೃತ್ಯ ಅಲ್ಲಿನ ಜನರ ಜೀವಕ್ಕೆ ಕುತ್ತು ತರುವ ಆತಂಕಕ್ಕೆ ಕಾರಣವಾಗಿದೆ. ಜನ-ಜೀವ-ಜಲಮೂಲಗಳ ಕಲುಷಿತ ವಾತಾವರಣಕ್ಕೆ ಕಾರಣವಾಗುವ ಈ ಕೈಗಾರಿಕೆ ಕಂಪನಿಗಳು ಸರ್ಕಾರದ ಷರತ್ತುಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬರುತ್ತಿದ್ದರೂ, ಸರ್ಕಾರದ ಪ್ರಮುಖರು "ಇಂಡಸ್ಟ್ರಿಯಲ್ ಫ್ರೆಂಡ್ಲೀ " ವರ್ತನೆ ಜನರ ಸಾವಿಗೆ ಕಾರಣವಾಗುತ್ತಿದೆ ಎಂಬ ಆರೋಪಗಳಿವೆ.
ಸೋಮವಾರ, ಕಡೇಚೂರು ಬಚಾವೋ ಸಮಿತಿಯು ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಎಸ್ಪಿ ಅವರನ್ನು ಭೇಟಿ ಮಾಡಿ, ಇಂತಹ ಕೃತ್ಯಗಳಿಗೆ ಹಾಗೂ ಕಲುಷಿತ ವಾತಾವರಣಕ್ಕೆ ಕಾರಣವಾಗುತ್ತಿರುವ ಕಂಪನಿಗಳ ಬಂದ್‌ಗೆ ಆಗ್ರಹಿಸಿ, ಮನವಿ ಸಲ್ಲಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಭೀಮಣ್ಣ ವಡವಟ್, ಕನ್ನಡಪರ ಸಂಘಟನೆಯ ವೀರೇಶ ಸಜ್ಜನ್ ಹಾಗೂ ಕಾಶೀನಾಥ್ ಮತ್ತವರ ತಂಡವು, ಜಿಲ್ಲೆಯ ಮೂವರು ಅಧಿಕಾರಿಗಳನ್ನು ಭೇಟಿಯಾಗಿ, ಶನಿವಾರ ರಾತ್ರಿ ಕೈಗಾರಿಕಾ ಪ್ರದೇಶದ ರೈತರ ಜಮೀನುಗಳು, ಹಳ್ಳಕೊಳ್ಳಗಳ ಬಳಿ ವಿಲೇವಾರಿ ಮಾಡಲಾಗಿದ್ದ ಅಪಾಯಕಾರಿ ರಾಸಾಯನಿಕ ತ್ಯಾಜ್ಯ ತುಂಬಿದ್ದ ಬಾಟಲಿ ಸಮೇತ ಭೇಟಿಯಾಗಿ, ದೂರು ಸಲ್ಲಿಸಿದರು. ಈ ಹಿಂದೆ, ಇಂತಹುದ್ದೇ ಘಟನೆ ನಡೆದು, ಹಳ್ಳದಲ್ಲಿ ಮಿಶ್ರಣಗೊಂಡ ಕಲುಷಿತ ನೀರು, ನದಿಗೆ ಸೇರಿ ಸಾವಿರಾರು ಜಲಚರಗಳು ಮೃತಪಟ್ಟ ಬಗ್ಗೆ, ಜನ-ಜಾನುವಾರುಗಳಿಗೆ ದುಸ್ಥಿತಿ ಬಗ್ಗೆ ಅಧಿಕಾರಿಗಳೆದುರು ವಿವರಿಸಿ, ಕ್ರಮಕ್ಕೆ ಆಗ್ರಹಿಸಿದರು.ಜನಾಂದೋಲನಕ್ಕೆ ಜನಸಂಗ್ರಾಮ ಪರಿಷತ್ ರೂಪುರೇಷೆ
ಯಾದಗಿರಿ: ಈ ಮಧ್ಯೆ, ಕಡೇಚೂರು ಬಚಾವೋ ತಂಡವು, ಭಾನುವಾರ ರಾಯಚೂರಿಗೆ ತೆರಳಿ, ಜನಸಂಗ್ರಾಮ ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ, ಹಿರಿಯ ಸಾಮಾಜಿಕ ಹೋರಾಟಗಾರ ರಾಘವೇಂದ್ರ ಕುಷ್ಟಗಿ ಅವರನ್ನು ಭೇಟಿ ಮಾಡಿ ಚರ್ಚಿಸಿದೆ. ಹೈದರಾಬಾದಿನ ಪರಿಸರ ಎಂಜಿನೀಯರ್ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಸರವಾದಿ ಖ್ಯಾತಿಯ ಸಾಗರಧರಾ ಅವರನ್ನು ಭೇಟಿಯಾಗಿ, ಈ ಭಾಗದ ಪರಿಸರ ಅಧ್ಯಯನ, ಕಾನೂನು ಹೋರಾಟದ ಬಗ್ಗೆ ಮುಂದಿನ ರೂಪುರೇಷೆಗಳು ಹಾಗೂ ಜನಾಂದೋಲನ ಕರೆಗೆ ಸಿದ್ಧತೆ ಕುರಿತು ಅವರು ನಮ್ಮೊಡನೆ ಮಾತನಾಡಿದರು ಎಂದು ಪತ್ರಕರ್ತ ಭೀಮಣ್ಣ ವಡವಟ್ "ಕನ್ನಡಪ್ರಭ "ಕ್ಕೆ ತಿಳಿಸಿದರು.-----------
ರಾಚನಹಳ್ಳಿ ಸೀಮೆಯ ನಮ್ಮ ಸರ್ವೆ ನಂಬರ್ 47 ರಲ್ಲಿ ಕೆಮಿಕಲ್ ತ್ಯಾಜ್ಯ ಸುರಿದು ಹೋಗಿದ್ದಾರೆ. ಇದು ಅಪಾಯಕಾರಿ ವಸ್ತು, ಜನ-ಜಾನುವಾರುಗಳಿಗೆ ಸಂಕಷ್ಟ ಎದುರಾಗುತ್ತದೆ. ನೀರು ಸಂಗ್ರಹವಾಗಿ ಹಳ್ಳಕ್ಕೆ ಸೇರಿದರೆ, ಈ ಕೆಮಿಕಲ್ ತ್ಯಾಜ್ಯ ಸಹ ವಿಷವಾಗಿ ಪರಿವರ್ತನೆಯಾಗುತ್ತದೆ. ಇಂತಹ ಕೃತ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕು.ಮೆಹಬೂಬ್ ಅಲಿ, ಗ್ರಾಮಸ್ಥರು, ರಾಚನಹಳ್ಳಿ.