ಕಡಿಯತ್ ನಾಡ್ ಕಪ್ ಹಾಕಿ: ಕಿರುಂದಾಡು, ಬಲಮುರಿ ಫೈನಲ್‌ಗೆ ಲಗ್ಗೆ

| Published : Nov 24 2024, 01:50 AM IST

ಸಾರಾಂಶ

ಕಡಿಯತ್‌ ನಾಡ್‌ ಕಪ್‌ ಹಾಕಿ ಪಂದ್ಯಾಟದಲ್ಲಿ ಕಿರುಂದಾಡು ಮತ್ತು ಬಲಮುರಿ ತಂಡಗಳು ಫೈನಲ್‌ ಪ್ರವೇಶಿಸಿದೆ. ವಿರಾಜಪೇಟೆ ಪೊಲೀಸ್‌ ಠಾಣೆಯ ವೃತ್ತ ನಿರೀಕ್ಷಕ ಅನೂಪ್‌ ಮಾದಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ವತಿಯಿಂದ ದ್ವಿತೀಯ ವರ್ಷದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟದಲ್ಲಿ ಕಿರುಂದಾಡು ಹಾಗೂ ಬಲಮುರಿ ತಂಡಗಳು ಫೈನಲ್‌ ಪ್ರವೇಶಿಸಿವೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶನಿವಾರ ಬೆಳಗ್ಗೆ ನಡೆದ ಮೊದಲ ಪಂದ್ಯದಲ್ಲಿ ಬಲಮುರಿ ತಂಡ ಅರಪಟ್ಟು ತಂಡವನ್ನು 3-2 ಗೋಲುಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು. ಬಲಮುರಿ ತಂಡದ ಆಟಗಾರ ಅದ್ವಿತ್ 14, 32 ನಿಮಿಷದಲ್ಲಿ, ಸಪನ್ ಅಯ್ಯಪ್ಪ 46 ನಿಮಿಷದಲ್ಲಿ ಗೋಲು ಹೊಡೆದರೆ, ಅರಪಟ್ಟು ತಂಡದ ಸೋಮಯ್ಯ 15, 19 ನಿಮಿಷದಲ್ಲಿ ಗೋಲು ಬಾರಿಸಿದರು.

2ನೇ ಪಂದ್ಯದಲ್ಲಿ ಬಾವಲಿ ತಂಡವನ್ನು ಕೈಕಾಡು ತಂಡ 2-1 ಗೋಲುಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಕೈಕಾಡು ತಂಡದ ನೀರಣ್ 15 ನಿಮಿಷದಲ್ಲಿ ಹಾಗೂ ವಿನಾಯಕ್ 36ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಬಾವಲಿ ತಂಡದ ಸುಗುಣ್ 46 ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು.

ಸೆಮಿಫೈನಲ್:

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸಮಬಲದ ಹೋರಾಟದಲ್ಲಿ ಕಿರುಂದಾಡು ತಂಡ ಪಾಲಂಗಾಲ ತಂಡವನ್ನು ಟ್ರೈ ಬ್ರೇಕರ್‌ನಲ್ಲಿ 4-1 ಗೋಲುಗಳಿಂದ ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.

ಟ್ರೈ ಬ್ರೇಕರ್‌ನಲ್ಲಿ ಕಿರುಂದಾಡು ತಂಡದ ಹೇಮಂತ್, ಶಂಕಪ್ಪ, ಬೋಪಣ್ಣ, ನಾಚಪ್ಪ ಗೋಲು ಸಿಡಿಸಿದರು. ಪಾಲಂಗಾಲ ತಂಡದ ಪೃಥ್ವಿ ಏಕೈಕ ಗೋಲು ಹೊಡೆದರು.

2ನೇ ಸೆಮಿಫೈನಲ್ ಪಂದ್ಯದಲ್ಲಿ ಕೈಕಾಡು ತಂಡವನ್ನು ಬಲಮುರಿ ತಂಡ 2-1 ಗೋಲುಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಬಲಮುರಿ ತಂಡದ ಅತಿಥಿ ಆಟಗಾರ ಅದ್ವಿತ್ 3ನೇ ನಿಮಿಷದಲ್ಲಿ ಆಕರ್ಷಕ ಗೋಲು ಹೊಡೆದರು. 16ನೇ ನಿಮಿಷದಲ್ಲಿ ಸಪನ್ ಅಯ್ಯಪ್ಪ ಗೋಲು ಬಾರಿಸಿ ಮುನ್ನಡೆ ಒದಗಿಸಿದರು. ಕೈಕಾಡು ತಂಡದ ಆಟಗಾರ ವಿನಾಯಕ್ 42 ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು.

ಪಂಧ್ಯದ ವಿಶೇಷತೆ:

ಅಂತಾರಾಷ್ಟ್ರೀಯ ಆಟಗಾರ, ಏಕಲವ್ಯ ಪ್ರಶಸ್ತಿ ವಿಜೇತ ಆಟಗಾರ ಕರಿನೆರವಂಡ ಸೊಮಣ್ಣ ತಮ್ಮ ಗ್ರಾಮವಾದ ಪಾಲಂಗಾಲ ತಂಡದ ಪರವಾಗಿ ಆಡಿ ಗಮನ ಸೆಳೆದರು.

ಉದ್ಘಾಟನಾ ಕಾರ್ಯಕ್ರಮ:

ಸೆಮಿಫೈನಲ್ ಪಂದ್ಯಾಟವನ್ನು ವಿರಾಜಪೇಟೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಉದ್ಘಾಟಿಸಿ ಪಂದ್ಯಾಟಕ್ಕೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ವಾಣಿ ಪಾಲ್ಗೊಂಡಿದರು.

ಈ ಸಂದರ್ಭ ಕ್ಲಬ್ ಅಧ್ಯಕ್ಷ ಬೇಪಡಿಯಂಡ ಬಿದ್ದಪ್ಪ, ಕ್ರೀಡಾಕೂಟ ಸಮಿತಿ ಅಧ್ಯಕ್ಷ ಮೇದುರ ಗಣು ಕುಶಾಲಪ್ಪ, ಉಪಾಧ್ಯಕ್ಷ ಐತಿಚಂಡ ಬಿಮ್ಮಯ್ಯ, ಕಾರ್ಯದರ್ಶಿ ಬೇಪಡಿಯಂಡ ವಿಲಿನ್, ಕೋಶಾಧಿಕಾರಿ ಐತಿಚಂಡ ಪ್ರಕಾಶ್ ಕಾರ್ಯಪ್ಪ, ಕ್ಲಬ್ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.

ತೀರ್ಪುಗಾರರಾಗಿ ಚೆಯ್ಯಂಡ ಲವ ಅಪ್ಪಚ್ಚು, ಚೋಯಮಾಡಂಡ ಚಂಗಪ್ಪ, ಕರವಂಡ ಅಪ್ಪಣ್ಣ, ವಿನೋದ್, ಅಪ್ಪ ಚೋಟೋಳಂಡ ಅಯ್ಯಪ್ಪ, ಪಟ್ರಪಂಡ ಮಂದಣ್ಣ ಕಾರ್ಯನಿರ್ವಹಿಸಿದರು.

ವೀಕ್ಷಕ ವಿವರಣೆಯನ್ನು ಚೆಪ್ಪುಡಿರ ಕಾರ್ಯಪ್ಪ ಹಾಗೂ ಹರ್ಷ ಮಂದಣ್ಣ, ವಿಲಿನ್ ನಿರ್ವಹಿಸಿದರು.

ಕಡಿಯತ್ ನಾಡ್ ಕಪ್ ಆಯೋಜಕರಾದ ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ವತಿಯಿಂದ ಕೊಡವ ಹಾಕಿ ಜನಕ ಪಾಂಡಂಡ ಕುಟ್ಟಪ್ಪ (ಕುಟ್ಟಣಿ) ಅವರ ಪುತ್ಥಳಿಯನ್ನು ಕರಡದಲ್ಲಿ ಸ್ಥಾಪಿಸಲಾಗುವುದು. ಅದಕ್ಕಾಗಿ ಭೂಮಿ ಪೂಜೆ ಕೂಡ ನಡೆಯಿತು.

ಇಂದಿನ ಪಂದ್ಯ: ತೃತೀಯ ಸ್ಥಾನಕ್ಕೆ 9 ಗಂಟೆಗೆ ಪಾಲಂಗಾಲ ಮತ್ತು ಕೈಕಾಡು

ಫೈನಲ್: 11 ಗಂಟೆಗೆ ಕಿರುಂದಾಡು ಮತ್ತು ಬಲಮುರಿ