ಮೂಲ ಸೌಕರ್ಯ ವಂಚಿತ ಕಾಡು ಪೂಜಾರಿ ಕುಟುಂಬ

| Published : Jan 23 2025, 12:47 AM IST

ಸಾರಾಂಶ

ಕನಕಪುರ: ತಾಲೂಕಿನ ಗಡಿಭಾಗದ ಆಲನತ್ತ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ನೆಲೆಸಿರುವ ಕಾಡು ಪೂಜಾರಿ ಸಮುದಾಯದ ಜೀವನಕ್ಕೆ ತಾಲೂಕು ಆಡಳಿತ ಶಾಶ್ವತ ಪರಿಹಾರ ದೊರಕಿಸಿಕೊಡಬೇಕಿದೆ.

ಕನಕಪುರ: ತಾಲೂಕಿನ ಗಡಿಭಾಗದ ಆಲನತ್ತ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ನೆಲೆಸಿರುವ ಕಾಡು ಪೂಜಾರಿ ಸಮುದಾಯದ ಜೀವನಕ್ಕೆ ತಾಲೂಕು ಆಡಳಿತ ಶಾಶ್ವತ ಪರಿಹಾರ ದೊರಕಿಸಿಕೊಡಬೇಕಿದೆ. ತಾಲೂಕಿನ ಜನಾಂಗದವರು ಸ್ಥಳೀಯ ಭೂ ಮಾಲೀಕರ 400ಕ್ಕೂ ಹೆಚ್ಚು ದನ -ಕರುಗಳನ್ನು ಕಾಡಿನಲ್ಲಿ ಮೇಯಿಸುವುದು ಇವರ ವೃತ್ತಿ. ಇವರ ಅಜ್ಜ-ಅಜ್ಜಿ, ತಂದೆ ತಾಯಿಯೂ ಅದೇ ಕೆಲಸವನ್ನು ಮುಂದುವರೆಸಿದ್ದು, ಈಗಲೂ ಅದೇ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ.

ಈ ಜನಾಂಗ ವರ್ಷಕ್ಕೆ ಹತ್ತು ಸಾವಿರ ಸಂಬಳ ಪಡೆದು ಅದರಲ್ಲೇ ವರ್ಷವೆಲ್ಲಾ ಜೀವನ ನಡೆಸಬೇಕಾದ ದುರಂತ ಜೀವನ ಇವರದ್ದು. ಜನಾಂಗ ಬೇರೆ ಎಲ್ಲೂ ಹೋಗುವ ಪರಿಸ್ಥಿತಿ ಇಲ್ಲದೆ, ಇವರಿಗೆ ತಿಳಿವಳಿಕೆ ನೀಡುವ ಜನ ಯಾರೂ ಇಲ್ಲದೆ, ಮುಂಗಾರು ಮಳೆ ಪ್ರಾರಂಭವಾದಾಗ ಕಾಡಿಗೆ ಹೋದರೆ ಮತ್ತೆ ಒಂದು ವರ್ಷ ಕಳೆದ ಮೇಲೆ ಊರಿಗೆ ಹಿಂದಿರುಗುತ್ತಿದ್ದರು. ದೈನಂದಿನ ಬದುಕಿಗಾಗಿ ಆಹಾರ ಬೇಕಾದಾಗ ದಟ್ಟ ಕಾಡಿನ ನಡುವೆ ನಡೆದು ಬರಬೇಕಾಗಿತ್ತು. ಅಲ್ಲಿ ಎದುರಾಗುವ ಕ್ರೂರ ಮೃಗಗಳು ವಿಷ ಜಂತುಗಳಿಂದ ತಪ್ಪಿಸಿಕೊಂಡು ಬಂದು ಹೋಗ ಬೇಕಾದಂತ ಪರಿಸ್ಥಿತಿಯಿದೆ. ವರ್ಷ ಮುಗಿದ ನಂತರ ಜೀತ ಬಿಡುತ್ತೇವೆ ಎಂದು ದನಗಳ ಮಾಲೀಕರ ಬಳಿ ಹೇಳಿದರೆ ನಿಮ್ಮ ಸಾಲ ಇನ್ನೂ ತೀರಿಲ್ಲ. ನೀವು ಹತ್ತು ಸಾವಿರ ಬದಲು, ಇಪ್ಪತ್ತು ಸಾವಿರ ರು. ತೆಗೆದುಕೊಂಡಿದ್ದೀರಿ ಎಂದು ದೌರ್ಜನ್ಯವೆಸಗಿ ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ಹೆದರಿಸುತ್ತಿದ್ದರು. ಇದರಿಂದ ಅವರು ಗ್ರಾಮಗಳಲ್ಲಿ ವಾಸಿಸುವ ಬದುಕನ್ನೇ ಕೈಬಿಟ್ಟಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲದೆ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ ಯಾವುದೂ ಇಲ್ಲದ ಕಾರಣ ಎರಡು ಕುಟುಂಬಗಳು ಸರ್ಕಾರದ ಸವಲತ್ತುಗಳನ್ನು ಪಡೆಯಲು ಆಗುತ್ತಿಲ್ಲವೆಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಆಲನತ್ತ ಗ್ರಾಮದ ದಲಿತ ಮುಖಂಡ ನಾಗಣ್ಣ, ಆಕಸ್ಮಿಕವಾಗಿ ಈ ಕುಟುಂಬವನ್ನು ಭೇಟಿ ಮಾಡಿದ ವೇಳೆ ಇವರ ಕಷ್ಟ ಅರಿವಿಗೆ ಬಂದು, ನಿಮ್ಮ ಅಜ್ಜ, ಮುತ್ತಜ್ಜ ನಮ್ಮ ಗ್ರಾಮದಲ್ಲೇ ವಾಸವಿದ್ದು, ನಮ್ಮ ಜಮೀನಿನ ಬಳಿ ನಿಮ್ಮ ಜಮೀನು ಇದೆ. ನೀವೇಕೆ ಕಾಡಲ್ಲಿ ಅಲೆದಾಡುತ್ತಿರುವಿರಾ, ಅದರ ಬದಲು ನಿಮ್ಮ ತಾತನ ಜಮೀನಿನಲ್ಲೇ ಮನೆ ಕಟ್ಟಿಕೊಂಡು ಜೀವನ ನಡೆಸಬಹುದಲ್ಲ ಎಂದು ಹೇಳಿದ್ದರು. ಆ ಬಳಿಕ 3 ವರ್ಷಗಳಿಂದೀಚೆಗೆ ಆಲನತ್ತ ಗ್ರಾಮದಲ್ಲೇ ಟಾರ್ಪಾಲ್ ಕಟ್ಟಿಕೊಂಡು ನೆಲೆಸಿವೆ ಈ 2 ಕಾಡು ಪೂಜಾರಿ ಜನಾಂಗದ ಕುಟುಂಬಗಳು. ಕೋಡಿಹಳ್ಳಿ ಹೋಬಳಿ ಆಲನತ್ತ ಗ್ರಾಮ ಬನ್ನಿಮ್ಮುಕ್ಕೋಡ್ಲು ಗ್ರಾಪಂ ವ್ಯಾಪ್ತಿಗೆ ಸೇರುತ್ತದೆ. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗಣತಿ ಮಾಡುವಾಗ ಈ ನೊಂದ ಕುಟುಂಬವನ್ನು ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಇವರ ಸಂಕಷ್ಟಕ್ಕೆ ಸ್ಪಂದಿಸಿದ ತಾಲೂಕು ದಲಿತ ಸಂಘಟನೆಯ ಮುಖಂಡರಾದ ರೇವೇಶ್, ಟಿ ಗೋಪಿ, ಸೋಮಶೇಖರ್, ನವೀನ್ ಸೇರಿದಂತೆ ಹಲವರು ನೊಂದ ಕುಟುಂಬಗಳ ಜೊತೆ ತಹಸೀಲ್ದಾರ್ ಜಿ ಮಂಜುನಾಥ್ ರನ್ನು ಭೇಟಿ ಮಾಡಿ ಈ ಎರಡು ಕುಟುಂಬಗಳಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದರು.

ಆ ಪರಿಣಾಮ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ಕಚೇರಿಗೆ ಕರೆಸಿ ವಿಚಾರಣೆ ನಡೆಸಿ ಕೂಡಲೇ ಈ ಕುಟುಂಬಕ್ಕೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿಗಳನ್ನು ಕೊಡಿಸಿ ಕೊಡುವುದಾಗಿ ಭರವಸೆ ನೀಡಿದರು.

ಕೋಟ್‌......

ಮೊದಲು ಈ ಎರಡು ಕುಟುಂಬಗಳಿಗೆ ಆಧಾರ್ ಗುರುತಿನ ಚೀಟಿ ಮಾಡಿಕೊಡಲಾಗುವುದು. ಆ ಬಳಿಕ ಉಳಿದ ದಾಖಲೆಗಳನ್ನು ಪರಿಶೀಲಿಸಿ ಕಾನೂನು ಬದ್ಧ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲಾಗುವುದು.

- ಮಂಜುನಾಥ್‌, ತಹಸೀಲ್ದಾರ್‌, ಕನಕಪುರ

ಕೆ ಕೆ ಪಿ ಸುದ್ದಿ 01:

ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಕಾಡು ಪೂಜಾರಿ ಕುಟುಂಬ.