ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಬುಡಕಟ್ಟು ಸಂಸ್ಕೃತಿಯನ್ನು ಹೊಂದಿರುವ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬುದು ಸಮುದಾಯದ ಬಹುದಿನದ ಬೇಡಿಕೆ. ಇದು ಈಡೇರಿದರೆ ಮಾತ್ರ ಗೊಲ್ಲಸಮುದಾಯ ಶೈಕ್ಷಣಿಕವಾಗಿ, ಅರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂದುವರೆಯಲು ಸಾಧ್ಯ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದ್ದಾರೆ.ಹೆಬ್ಬೂರಿನ ಶ್ರೀ ಚಿಕ್ಕಣ್ಣಸ್ವಾಮಿ ಸುಕ್ಷೇತ್ರದ ಧರ್ಮದರ್ಶಿಯಾದ ಡಾ. ಪಾಪಣ್ಣ ಅವರ 50ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚಿಕ್ಕಣ್ಣಸ್ವಾಮಿಯ ಕೃಪಾಶೀರ್ವಾದದಿಂದ ಸುಕ್ಷೇತ್ರ ಬಹಳ ಪ್ರವರ್ಧಮಾನಕ್ಕೆ ಬಂದಿದೆ. ಅದೇ ರೀತಿ ಸಮುದಾಯವೂ ಮುಂದೆ ಬರಬೇಕೆಂದರೆ, ಎಲ್ಲಾ ರೀತಿಯ ಸರಕಾರಿ ಸೌಲಭ್ಯಗಳು ಸಮುದಾಯಕ್ಕೆ ದೊರೆಯುವಂತಾದರೆ ಮಾತ್ರ ಸಾಧ್ಯ ಎಂದರು.
ಇಂದು ನಾನು ಶಾಸಕ, ಸಚಿವನಾಗಿದ್ದರೆ ಅದಕ್ಕೆ ಕಾರಣ ಪಾಪಣ್ಣನವರು, ಚಿಕ್ಕಣ್ಣಸ್ವಾಮಿ ಸುಕ್ಷೇತ್ರದ ಜೊತೆಗೆ, ಈ ಭಾಗದ ಮಕ್ಕಳಿಗಾಗಿ ಶಾಲೆ ತೆರೆದು ಶಿಕ್ಷಣ ನೀಡಿದ್ದಾರೆ. ಇವರ ಈ ಸಮಾಜಸೇವೆ ಹೀಗೆಯೇ ಮುಂದುವರೆಯಲೆಂದು ಶುಭ ಹಾರೈಸಿದರು.ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಸಮಾಜ ಸೇವೆಗೆ ಮತ್ತೊಂದು ಹೆಸರು ಪಾಪಣ್ಣ ಅವರು, ಅವರಿಗೆ ರಾಜಕೀಯ ಅಧಿಕಾರ ದೊರೆಯುವ ಅವಕಾಶ ಒದಗಿ ಬಂದರೂ ಸಹ ನಿರಾಕರಿಸಿ, ಎಲ್ಲ ಪಕ್ಷದ ಮುಖಂಡರೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿದ್ದಾರೆ. ಎಲ್ಲಾ ವರ್ಗಗಳಿಗೂ ಚಿಕ್ಕಣ್ಣಸ್ವಾಮಿ ಕ್ಷೇತ್ರ ಪವಿತ್ರ ದೇವಾಲಯವಾಗಿದೆ ಎಂದರು.
ಚಿಕ್ಕಣ್ಣಸ್ವಾಮಿ ಸುಕ್ಷೇತ್ರದ ಧರ್ಮದರ್ಶಿ ಡಾ. ಪಾಪಣ್ಣ ಅವರ ೫೦ನೇ ವರ್ಷದ ನೆನಪಿಗಾಗಿ ಹೊರತಂದ ವೀರಗಾರ ಚಿಕ್ಕಣ್ಣಸ್ವಾಮಿ ಕೃತಿ ಕುರಿತು ಮಾತನಾಡಿದ ಚಿಂತಕ ಡಾ.ಜಿ.ವಿ. ಆನಂದಮೂರ್ತಿ, ವೀರಗಾರರೆಂದರೆ ಪಶುಸಂಗೋಪನೆಯನ್ನೇ ಜೀವನಾಧಾರವನ್ನಾಗಿಸಿಕೊಂಡಿದ್ದ ಕಾಡುಗೊಲ್ಲ ಸಮುದಾಯದ ರಕ್ಷಣೆಗೆ ನಿಂತು, ಹುತಾತ್ಮರಾದ ಹಿರಿಯರನ್ನು ವೀರಗಾರರೆಂದು ಕರೆಯಲಾಗುತ್ತದೆ. ಜುಂಜಪ್ಪ, ಹೆತ್ತಪ್ಪ ಇನ್ನು ಆನೇಕ ವೀರಗಾರರು ಈ ಸಮುದಾಯದಲ್ಲಿದ್ದಾರೆ. ಇವರಿಗೆ ತಮ್ಮ ವೀರಗಾರರೇ ದೇವರುಗಳು, ತಮ್ಮ ನಂಬಿಕೆ ಮತ್ತು ಕಟ್ಟುಪಾಡುಗಳ ನಡುವೆ ಸದಾ ಸಂಘರ್ಷದಲ್ಲಿಯೇ ಇರುವ ಈ ಸಮುದಾಯ, ಎಂದಿಗೂ ಅನ್ಯರ ಸಂಸ್ಕೃತಿ, ಸಂಪ್ರದಾಯಗಳನ್ನು ತಮ್ಮೊಳಗೆ ಬಿಟ್ಟುಕೊಂಡಿಲ್ಲ. ರಾಜ್ಯದ ೩೫ ಕ್ಕೂ ಹೆಚ್ಚು ಬುಡಕಟ್ಟುಗಳಲ್ಲಿ ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಏಕೈಕ ಸಮುದಾಯದ ಕಾಡು ಗೊಲ್ಲರು. ಇಂತಹ ಸಮುದಾಯದ ಘಟನೆಗಳು ಚರಿತ್ರೆಯಲ್ಲಿ ದಾಖಲಾಗುವಂತೆ ಇಂದಿನ ವಿದ್ಯಾವಂತರು ಮಾಡ ಬೇಕೆಂದರು.ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ವನಕಲ್ಲು ಮಠದ ಡಾ. ಶ್ರೀಬಸವ ರಮಾನಂದಸ್ವಾಮೀಜಿ ಮಾತನಾಡಿ, ಚಿಕ್ಕಣ್ಣಸ್ವಾಮಿ ಕ್ಷೇತ್ರ ಜಾತಿ, ಮತ, ಪಂಥವಿಲ್ಲದೆ ಎಲ್ಲಾ ವರ್ಗದ ಜನರನ್ನು ಒಳಗೊಂಡ ಪುಣ್ಯಕ್ಷೇತ್ರ. ಹೇಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಧರ್ಮದರ್ಶಿಗಳಾಗಿ ಕೆಲಸ ಮಾಡುತ್ತಿದ್ದಾರೆಯೋ, ಅದೇ ರೀತಿ ರಾಜದಲ್ಲಿರುವ ಸುಮಾರು ೭೨ಕ್ಕು ಹೆಚ್ಚು ಬುಡಕಟ್ಟು ಸಮುದಾಯಗಳ ಶ್ರೀಕ್ಷೇತ್ರವಾಗಿ ಚಿಕ್ಕಣ್ಣಸ್ವಾಮಿ ಸುಕ್ಷೇತ್ರ ಬೆಳೆಯುತ್ತಿದೆ. ಇದರ ಧರ್ಮದರ್ಶಿಯಾದ ಡಾ. ಪಾಪಣ್ಣ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಸಮಾಜಸೇವೆಗೆ ಹೆಸರಾಗಿದ್ದಾರೆ. ಇಂತಹವರ ಸಂತತಿ ಹೆಚ್ಚಾಗಲಿ ಎಂದು ಶುಭ ಹಾರೈಸಿದರು.
ಚಿತ್ರದುರ್ಗದ ಶ್ರೀಯಾದವ ಮಠದ ಕೃಷ್ಣಯಾದವಾನಂದ ಸ್ವಾಮೀಜಿ ಮಾತನಾಡಿ, ಚಿಕ್ಕಣ್ಣ ಸ್ವಾಮೀ ಸುಕ್ಷೇತ್ರ ಡಾ. ಪಾಪಣ್ಣ ಅವರ ದಕ್ಷತೆ ಮತ್ತು ಪ್ರಾಮಾಣಿಕತೆಯ ಫಲವಾಗಿ ಇಂದು ಎಲ್ಲಾ ಧರ್ಮಗಳ ಭಾವೈಕ್ಯತೆಯ ಕೇಂದ್ರವಾಗಿದೆ. ಇಂದು ನಾಡಿನ ಎಲ್ಲಾ ಬುಡಕಟ್ಟು ಸಮುದಾಯದ ಜನರು ಸೇರಿ ಅವರನ್ನು ಅಭಿನಂದಿಸುತ್ತಿರುವುದು ಅತ್ಯಂತ ಸುತ್ಯಾರ್ಹವಾದ ಕೆಲಸ ಎಂದರು.ಇದೇ ವೇಳೆ ಚಿಕ್ಕಣ್ಣಸ್ವಾಮಿ ಸುಕ್ಷೇತ್ರದ ಧರ್ಮದರ್ಶಿಗಳಾದ ಡಾ. ಪಾಪಣ್ಣ ಅವರ ಸುರ್ವಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಡಾ. ಪಾಪಣ್ಣ ಅವರಿಗೆ ಬೆಳ್ಳಿ ಕಿರೀಟ ಧಾರಣೆ ಮಾಡಿ, ಅಭಿಮಾನಿಗಳು, ಹಿತೈಷಿಗಳು ಶುಭಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಣ್ಣಸ್ವಾಮಿ ದೇವಾಲಯದ ಪ್ರಧಾನ ಆರ್ಚಕ ಪೂಜಾರಿ ಚಿಕ್ಕಣ್ಣ, ಶಾಸಕ ಎಸ್.ಟಿ. ಸೋಮಶೇಖರ್, ಬಿಬಿಎಂಪಿ ರಾಜಣ್ಣ, ಮಾಜಿ ಶಾಸಕಿ ಪೂರ್ಣೀಮ ಶ್ರೀನಿವಾಸ್, ಕಾಂಗ್ರೆಸ್ ವಕ್ತಾರ ನಿಖೇತ್ ರಾಜ್ ಮೌರ್ಯ, ಸ್ಪೂರ್ತಿ ಚಿದಾನಂದ್, ಡಾ. ಕರಿಯಣ್ಣ, ಪತ್ರಕರ್ತ ಸಾ.ಚಿ. ರಾಜಕುಮಾರ್, ಬಳಗೆರೆ ಜಯಣ್ಣ, ಮಹಾಲಕ್ಷಮ್ಮ , ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರೇಮ ಮಹಾಲಿಂಗಪ್ಪ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷಮ್ಮ, ಈರಣಗೌಡ, ದೊಡ್ಡ ಬಾಣಗೆರೆ ಮಾರಣ್ಣ ಮತ್ತಿತರರು ವೇದಿಕೆಯಲ್ಲಿದ್ದರು.ಕೋಟ್ಡಾ. ಪಾಪಣ್ಣ ಅವರು ಕರ್ನಾಟಕ ಕೃಷಿಕ ಸಮಾಜದ ಕಾರ್ಯಾಧ್ಯಕ್ಷರಾಗಿ ತಾವು ಬೆಳೆಯುವುದರ ಜೊತೆಗೆ, ಸಮುದಾಯವನ್ನು ಬೆಳೆಸಿದ್ದಾರೆ. ಯಾವ ಕರಪತ್ರ, ಬ್ಯಾನರ್, ಪೋಸ್ಟರ್ ಇಲ್ಲದಿದ್ದರು ಭಕ್ತರು ಚಿಕ್ಕಣ್ಣಸ್ವಾಮಿ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಾರೆ. ಇದಕ್ಕೆ ಕಾರಣರೂ ಇದರ ಧರ್ಮದರ್ಶಿ ಪಾಪಣ್ಣ ಅವರು, ಅವರ ಈ ಸೇವೆ ಮುಂದುವರೆದು ಮತ್ತಷ್ಟು ಜನರಿಗೆ ಒಳ್ಳೆಯದಾಗಲಿ.
ಎಸ್.ಪಿ. ಮುದ್ದಹನುಮೇಗೌಡ ಮಾಜಿ ಸಂಸದ