ಸಾರಾಂಶ
ಬಿಜೆಪಿ ಅಭ್ಯರ್ಥಿ ಸ್ಪೀಕರ್ ಇದ್ದರು. ಚುನಾವಣೆಯಲ್ಲಿ ಸೋತು ಈಗ ಮತ್ತೆ ಅಭ್ಯರ್ಥಿಯಾಗಿದ್ದಾರೆ ಎಂದು ಮಾರ್ಗರೆಟ್ ಆಳ್ವಾ ವಾಗ್ದಾಳಿ ನಡೆಸಿದರು.
ಕಾರವಾರ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಡಜನರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವಾ ವಾಗ್ದಾಳಿ ನಡೆಸಿದರು.ಬುಧವಾರ ಸೋಮವಾರ ಶಿರವಾಡ ಬಂಗಾರಪ್ಪನಗರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ಸ್ಪೀಕರ್ ಇದ್ದರು. ಚುನಾವಣೆಯಲ್ಲಿ ಸೋತು ಈಗ ಮತ್ತೆ ಅಭ್ಯರ್ಥಿಯಾಗಿದ್ದಾರೆ. ಬೆಂಗಳೂರಿನಲ್ಲಿ ಅತಿಕ್ರಮಣದಾರರ ಹೋರಾಟ ನಡೆದಾಗ ಇಡೀ ದಿನ ಹೋರಾಟಗಾರರು ಬಿಸಿಲೆನ್ನದೆ ಕೂತರೂ ನಮ್ಮ ವಿಧಾನಸಭಾಧ್ಯಕ್ಷರು ವಿಧಾನಸಭೆಯಿಂದ ಒಂದು ಕಿಮೀ ದೂರದ ಪ್ರತಿಭಟನಾ ಸ್ಥಳಕ್ಕೆ ಬಂದಿರಲಿಲ್ಲ. ಈಗ ಬಂದು ಮತ ಕೇಳುತ್ತಿದ್ದಾರೆ. ಜನ ಕಷ್ಟದಲ್ಲಿದ್ದಾಗ ಸಹಾಯಕ್ಕೆ ಬಾರದವರನ್ನು ನೀವು ಗೆಲ್ಲಿಸುತ್ತೀರಾ ಎಂದು ಪ್ರಶ್ನಿಸಿದರು.
ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು, ಪ್ರಧಾನಿ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಬಾಯಲ್ಲಿ ಹೇಳೋದು ಒಂದು, ಮಾಡೋದು ಮತ್ತೊಂದು. ಅವರು ನಿಷ್ಠಾವಂತರಲ್ಲ, ಭಾರತೀಯರ ಕಷ್ಟದೊಂದಿಗೆ ಅವರಿಲ್ಲ ಎಂದರು.ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಪ್ರಜಾಪ್ರಭುತ್ವ ಬಲಪಡಿಸಲು ಕಾಂಗ್ರೆಸ್‌ಗೆ ಮತ ನೀಡಬೇಕಿದೆ. ಮೋದಿ ಅವರ ಆಡಳಿತದಲ್ಲಿ ಉದ್ಯೋಗ ಸೃಷ್ಟಿಯಾಗುವ ಬದಲು ನಿರುದ್ಯೋಗದ ಸಮಸ್ಯೆ ಜ್ವಲಂತವಾಗಿದೆ. ಗ್ಯಾರಂಟಿಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಪ್ರಧಾನಿ ಮೋದಿ ಹೇಳಿಕೆ ಸತ್ಯಕ್ಕೆ ದೂರವಾದುದು. ಎಲ್ಲೆಡೆ ಗ್ಯಾರಂಟಿಯ ಜತೆಗೆ ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿದೆ ಎಂದರು.ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್, ವಿಧಾನಸಭಾ ಚುನಾವಣೆಯಲ್ಲಿ ಐದು ಗ್ಯಾರಂಟಿ ಕೊಟ್ಟು ಈಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮತ್ತೆ ಐದು ನ್ಯಾಯ ಗ್ಯಾರಂಟಿ ಕೊಡಲಿದ್ದೇವೆ ಎಂದರು.ಶಾಸಕ ಸತೀಶ್ ಸೈಲ್ ಮಾತನಾಡಿ, ವಿಧಾನಸಭಾ ಚುನಾವಣಾ ಪೂರ್ವ ನೀಡಿದ್ದ ಐದು ಗ್ಯಾರಂಟಿ ಆಶ್ವಾಸನೆಯನ್ನು ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಈಡೇರಿಸಿ ನುಡಿದಂತೆ ನಡೆದಿದ್ದೇವೆ ಎಂದರು. ಮಾಜಿ ಸಚಿವ ರಮಾನಾಥ ರೈ, ಕೆಪಿಸಿಸಿ ಕಾರ್ಯದರ್ಶಿ ನಿವೇದಿತ್ ಆಳ್ವಾ, ಮಾಧ್ಯಮ ವಕ್ತಾರ ನಿಕೇತರಾಜ್ ಮೌರ್ಯ, ಪ್ರಭಾಕರ್ ಮಾಳ್ಸೇಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ, ಜಿ.ಪಿ. ನಾಯ್ಕ, ಶಂಭು ಶೆಟ್ಟಿ ಮತ್ತಿತರರು ಇದ್ದರು.