ಸಾರಾಂಶ
ಶೀಘ್ರ 14 ಮಂಡಲಗಳಲ್ಲೂ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಳ್ಳಲಿದ್ದಾರೆ.
ಯಲ್ಲಾಪುರ: ಲೋಕಸಭಾ ಚುನಾವಣೆಯ ಅವಲೋಕನ ಸಭೆ ಗುರುವಾರ ನಡೆಯಿತು. 14 ಮಂಡಲದ ಕಾರ್ಯಕರ್ತರಿಂದ ಪ್ರತಿ ಬೂತ್‌ಗಳಲ್ಲಿ ಬಿಜೆಪಿ ಪಡೆದ ಮತಗಳ ಕುರಿತು ಚರ್ಚಿಸಲಾಗಿದ್ದು, 2.5 ಲಕ್ಷದ ಅಂತರದಿಂದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಜಯಗಳಿಸುವುದು ನಿಶ್ಚಿತ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಕಾರ್ಯಕರ್ತರ, ಮಂಡಲ ಅಧ್ಯಕ್ಷರ ಅಭಿಪ್ರಾಯ ಸಂಗ್ರಹಿಸಿ ಚುನಾವಣೆಯ ಪರಾಮರ್ಶೆ ಮಾಡಲಾಯಿತು. ಒಗ್ಗಟ್ಟಿನಿಂದ ಕಾರ್ಯಕರ್ತರು ಕೆಲಸ ಮಾಡಿದ್ದರಿಂದ ಉತ್ತಮವಾಗಿ ಚುನಾವಣೆ ಎದುರಿಸಲು ಸಾಧ್ಯವಾಗಿದೆ. ದೊಡ್ಡ ಪ್ರಮಾಣದಲ್ಲಿ ಮತ ಗಳಿಸಲು ಕಾರಣರಾದ ಮಹಾರಾಷ್ಟ್ರ ಮುಖ್ಯಮಂತ್ರಿ, ಗೋವಾ ಮುಖ್ಯಮಂತ್ರಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಅನೇಕ ನಾಯಕರು ಹಾಗೂ ವಿಶೇಷವಾಗಿ ಪ್ರಧಾನಿ ಮೋದಿ ಜಿಲ್ಲೆಗೆ ಎರಡನೇ ಬಾರಿಗೆ ಕಾರ್ಯಕರ್ತರಿಗೆ ಶಕ್ತಿ ತುಂಬಲು ಆಗಮಿಸಿದ್ದರು. 14 ಮಂಡಲಗಳಲ್ಲೂ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಳ್ಳಲಿದ್ದಾರೆ ಎಂದರು.ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಚುನಾವಣಾ ಪರ್ವ ಮುಗಿದು ಈಗ ಸಂಘಟನಾ ಪರ್ವ ಆರಂಭವಾಗಿದೆ. ಯಲ್ಲಾಪುರ, ಮುಂಡಗೋಡ ತಾಲೂಕಿಗೆ ಫಸಲ ಬಿಮಾ ₹41 ಕೋಟಿ ಜಿಲ್ಲಾ ಮದ್ಯವರ್ತಿ ಬ್ಯಾಂಕ ಮೂಲಕ ಗೆ ಜಮಾ ಆಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ಹಾಗೂ ಕೃಷಿಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಬಿಜೆಪಿ ಪ್ರಮುಖರಾದ ಗೋಪಾಲ ಕೃಷ್ಣ ಗಾಂವ್ಕರ್, ಉಮೇಶ ಭಾಗ್ವತ್, ಗಜಾನನ ಗುನಗಾ, ಗುರುಪ್ರಸಾದ ಹೆಗಡೆ, ಪ್ರಸಾದ ಹೆಗಡೆ ಇದ್ದರು.