ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರುಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಯಾವ ಕ್ಷಣದಲ್ಲಾದರೂ ಘೋಷಣೆ ಆಗಬಹುದು ಎಂಬ ಹೊತ್ತಿನಲ್ಲಿ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷರ ಗೊಂದಲ ಇನ್ನಷ್ಟು ದಿನಕ್ಕೆ ವಿಸ್ತರಣೆಗೊಂಡಿದೆ.
ಕಳೆದ ಶನಿವಾರ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಕರೆದಿದ್ದ ತಾಲೂಕಿನ ಜೆಡಿಎಸ್ ಮುಖಂಡರ ಸಭೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರ ಆಯ್ಕೆಯ ಗೊಂದಲಕ್ಕೆ ತೆರೆ ಎಳೆದು ಕಳಿಸುತ್ತಾರೆ ಎಂಬ ಪಕ್ಷದ ಕಾರ್ಯಕರ್ತರ ನಿರೀಕ್ಷೆ ತಾತ್ಕಾಲಿಕವಾಗಿ ಹುಸಿಯಾಗಿದೆ. ಕಳೆದ ಅವಧಿಯಲ್ಲಿ ತಾಲೂಕು ಅಧ್ಯಕ್ಷರಾಗಿದ್ದ ಎನ್.ಹನುಮಂತರಾಯಪ್ಪನವರನ್ನು ಎರಡನೇ ಅವಧಿಗೂ ಮುಂದುವರೆಸಿ ಎಂಬ ವರಿಷ್ಟರ ಸೂಚನೆ ಮೇರೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಜೆಜಿ ಹಳ್ಳಿ ಮಂಜುನಾಥ್ ರವರು ಹನುಮಂತರಾಯಪ್ಪನವರಿಗೆ ಮರು ಆಯ್ಕೆಯ ಆದೇಶ ಪತ್ರ ನೀಡಿದ್ದರು. ಆದರೆ ಅದಕ್ಕೂ ಎರಡು ದಿನ ಮುಂಚೆ ಇದೇ ಜಿಲ್ಲಾಧ್ಯಕ್ಷರು ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ರಂಗೇನಹಳ್ಳಿ ಶಂಕರಮೂರ್ತಿ ಎನ್ನುವವರಿಗೆ ತಾಲೂಕು ಅಧ್ಯಕ್ಷರು ಎಂದು ಆದೇಶ ಪತ್ರ ನೀಡಿ ಬಿಟ್ಟಿದ್ದರು.ಎರಡು ದಿನದ ಅವಧಿಯಲ್ಲಿ ಎರಡೆರಡು ಆದೇಶ ಪತ್ರ ಹಿಡಿದು ಇಬ್ಬರೂ ಮಾಧ್ಯಮಗಳ ಮುಂದೆ ಬಂದು ಪಕ್ಷದ ಮಾನ ಹರಾಜು ಹಾಕಿದ್ದರು. ಅದಾಗಿ ಇಲ್ಲಿಗೆ ಮೂರು ತಿಂಗಳಾಗುತ್ತಾ ಬಂದಿದ್ದು ಅಲ್ಲಿಂದ ಇಲ್ಲಿಯವರೆಗೆ ಇಬ್ಬರೂ ಸಹ ನಾನೇ ಜೆಡಿಎಸ್ ತಾಲೂಕು ಅಧ್ಯಕ್ಷ ಎಂದು ಎಲ್ಲಾ ಕಡೆಯೂ ಹೇಳಿಕೊಂಡು ಬಂದಿದ್ದಾರೆ. ಸ್ಥಳೀಯ ಮುಖಂಡರ ಒತ್ತಡಕ್ಕೆ ಸಿಕ್ಕೋ ಇಲ್ಲವೇ ಪಕ್ಷದ ವರಿಷ್ಟರ ಕಟ್ಟಾಜ್ಞೆಗೆ ತಲೆಬಾಗಿಯೋ ಜೆಡಿಎಸ್ ಜಿಲ್ಲಾಧ್ಯಕ್ಷರು ಇಬ್ಬರಿಗೆ ಆದೇಶ ಪತ್ರ ನೀಡಿ ಮಮ್ಮಲ ಮರುಗುತ್ತಿದ್ದಾರೆ. ಇಬ್ಬರು ತಾಲೂಕು ಅಧ್ಯಕ್ಷರ ಬಣಗಳನ್ನು ಒಂದೆಡೆ ಸೇರಿಸಿ ಸಮಸ್ಯೆ ಸರಿಪಡಿಸುವುದು ಸ್ಥಳೀಯ ಮಟ್ಟದಲ್ಲಿ ಆಗದ ಕೆಲಸ ಎಂದು ಅರಿತ ಜಿಲ್ಲಾಧ್ಯಕ್ಷರು ತಾಲೂಕಿನ ಸಮಸ್ಯೆಯನ್ನು ಪಕ್ಷದ ಪ್ರಮುಖರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅಂಗಳಕ್ಕೆ ಹಾಕಿದ್ದರು. ಅದರಂತೆ ಜೂನ್ 20-2026ರಂದು ಎರಡೂ ಬಣದ ಪ್ರಮುಖರನ್ನು ಬೆಂಗಳೂರಿಗೆ ಕರೆಸಿಕೊಂಡು ಮಾತನಾಡಿದ ಕುಮಾರಸ್ವಾಮಿಯವರು ತಾಲೂಕಿನ 10 ಜನ ಮುಖಂಡರ ಒಂದು ಸಮಿತಿ ರಚಿಸಿ ಇಬ್ಬರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆದಷ್ಟು ಬೇಗ ಆಯ್ಕೆ ಮಾಡಿ ಈ ತಿಂಗಳ ಒಳಗೆ ತಿಳಿಸಿ ಎಂದು ಹೇಳಿ ಕಳಿಸಿದ್ದಾರೆ. ಇದೀಗ ಎರಡು ಬಣಗಳು ಒಮ್ಮತದಿಂದ ಒಬ್ಬರು ಅಧ್ಯಕ್ಷರ ಹೆಸರನ್ನು ಒಪ್ಪಿ ವರಿಷ್ಟರ ಗಮನಕ್ಕೆ ತರಬೇಕಾಗಿದೆ. ಅದು ಅಷ್ಟು ಸುಲಭದ ಕೆಲಸವಾ? ಖಂಡಿತ ಅಲ್ಲ. ಚುನಾವಣೆ ಹೊತ್ತಲ್ಲಿ ತಾಲೂಕಿನಲ್ಲಿ ಬಹು ಸಂಖ್ಯಾತರಾದ ದಲಿತ ಸಮುದಾಯದ ಹನುಮಂತರಾಯಪ್ಪನವರನ್ನು ತಾಲೂಕು ಅಧ್ಯಕ್ಷ ಹುದ್ದೆಯಿಂದ ಇಳಿಸುವುದು ಪಕ್ಷದ ಹಿತದೃಷ್ಟಿಯಿಂದ ಕಷ್ಟದ ಕೆಲಸವೇ. ಹಾಗಂತ ಮತ್ತೊಬ್ಬರಾದ ಶಂಕರಮೂರ್ತಿಯವರಿಗೆ ಅಧ್ಯಕ್ಷ ಹುದ್ದೆ ತಪ್ಪಿಸಿದರೆ ಒಕ್ಕಲಿಗ ಸಮುದಾಯಕ್ಕೆ ಹುದ್ದೆ ತಪ್ಪಿದಂತಾಗುತ್ತದೆ. ಪಕ್ಷದ ಮತ್ತು ಉಪ ಚುನಾವಣೆ ಆಡುವ ಅಭ್ಯರ್ಥಿಯ ಭವಿಷ್ಯದ ದೃಷ್ಟಿಯಿಂದ ಎರಡೂ ಅಪಾಯಕಾರಿ ಕೆಲಸಗಳೇ ಆಗಿವೆ. ಇನ್ನು ನಾಲ್ಕು ದಿನಗಳಲ್ಲಿ ಈ ಗೊಂದಲ ಬಗೆಹರಿದು ಒಬ್ಬರು ಅಧ್ಯಕ್ಷರ ಹೆಸರು ನಿರ್ಧಾರವಾಗಿ ಹೊರ ಬರಲಿದೆ ಎಂದು ಕಾರ್ಯಕರ್ತರು ಕಾಯುತ್ತಿದ್ದಾರೆ.ಇದೆಲ್ಲದರ ಜೊತೆಗೆ ಉಪ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿಯಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯೇ ಅಖಾಡಕ್ಕೆ ಎಂಬ ಸುಳಿವನ್ನು ಶನಿವಾರ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನೀಡಿದ್ದು ತಾಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲಿ ಸಂಚಲನ ಹುಟ್ಟು ಹಾಕಿದೆ.ಈಗಾಗಲೇ ಬಿಜೆಪಿ ಪಕ್ಷದ ಅಭ್ಯರ್ಥಿಯೇ ಮೈತ್ರಿ ಅಭ್ಯರ್ಥಿ ಎಂದು ಬಹಳಷ್ಟು ಜನರು ಭಾವಿಸಿದ್ದು ಅದಕ್ಕೆ ಪುಷ್ಟಿ ನೀಡಿದಂತೆ ಇತ್ತೀಚಿಗೆ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣನವರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರವರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದರು. ಆ ಕ್ಷಣದಿಂದಲೇ ಅವರು ಕ್ಷೇತ್ರದಲ್ಲಿ ಬಿರುಸಿನ ಓಡಾಟ ನಡೆಸಿದ್ದಾರೆ.ಆದರೆ ಇದೀಗ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂಬ ಉಹಾಪೋಹ ಎದ್ದಿದ್ದು ಎರಡು ಪಕ್ಷದ ಮುಖಂಡರು ನಾವಾ? ನೀವಾ ಎಂಬ ಚರ್ಚೆಯಲ್ಲಿದ್ದಾರೆ.
( ಬಾಕ್ಸ್ ) ಜೆಡಿಎಸ್ ಮುಖಂಡ ಮೇಟಿಕುರ್ಕೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹನುಮಂತಪ್ಪ ಪ್ರತಿಕ್ರಿಯಿಸಿ ತಾಲೂಕಿನಲ್ಲಿ ಬಹು ಸಂಖ್ಯಾತರಾಗಿರುವ ಮಾದಿಗ ಸಮುದಾಯದ ಹನುಮಂತರಾಯಪ್ಪ ನವರನ್ನು ತಾಲೂಕು ಅಧ್ಯಕ್ಷರಾಗಿ ಮುಂದುವರೆಸಬೇಕು.ಉಪ ಚುನಾವಣೆ ಕಣ್ಮುಂದೆಯೇ ಇರುವ ಸಮಯದಲ್ಲಿ ಹನುಮಂತರಾಯಪ್ಪನವರನ್ನು ಬದಲಾಯಿಸಿದರೆ ಮಾದಿಗ ಸಮುದಾಯಕ್ಕೆ ಪಕ್ಷ ಮಾಡಿದ ದ್ರೋಹವಾಗುತ್ತದೆ. ಪಕ್ಷದ ಬಹಳಷ್ಟು ಹುದ್ದೆ ಅನುಭವಿಸಿರುವ ಜನಾಂಗವೇ ಮತ್ತೆ ಮತ್ತೆ ಹುದ್ದೆಯ ಹಿಂದೆ ಬೀಳುವುದು ಪಕ್ಷದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತರಾಯಪ್ಪನವರನ್ನು ಬದಲಾಯಿಸಿದರೆ ನಾವು ಪಕ್ಷದಲ್ಲಿರಬೇಕೇ ಬೇಡವೇ ಎಂಬುದನ್ನು ಯೋಚಿಸಿ ನಿರ್ಧರಿಸುತ್ತೇವೆ ಎಂದರು.