ಸಂತ ಕನಕದಾಸರ 539ನೇ ಜಯಂತ್ಯುತ್ಸವದ ಅಂಗವಾಗಿ ನ.26 ಮತ್ತು 27ರಂದು ಕಾಗಿನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ನ.27ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭಾಗವಹಿಸಲಿದ್ದಾರೆ.
ಕಾಗಿನೆಲೆಯಲ್ಲಿ ಎರಡು ದಿನಗಳ ಸಂಭ್ರಮ; ನ.26ರಂದು ಆರು ಲಕ್ಷ ರೊಟ್ಟಿಗಳೊಂದಿಗೆ ರೊಟ್ಟಿ ಜಾತ್ರೆ
ಹಾವೇರಿಯಲ್ಲಿ ಕನಕದಾಸರ ಕಂಚಿನ ಮೂರ್ತಿ ಅನಾವರಣಕನ್ನಡಪ್ರಭ ವಾರ್ತೆ ಹಾವೇರಿ
ಸಂತ ಕನಕದಾಸರ 539ನೇ ಜಯಂತ್ಯುತ್ಸವದ ಅಂಗವಾಗಿ ನ.26 ಮತ್ತು 27ರಂದು ಕಾಗಿನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ನ.27ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭಾಗವಹಿಸಲಿದ್ದಾರೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಹಾವೇರಿ ತಾಲೂಕಿಗೆ ಜಯಂತ್ಯುತ್ಸವದ ಜವಾಬ್ದಾರಿ ದೊರೆತಿದ್ದು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ತಾಲೂಕಿನ ಎಲ್ಲ ಗ್ರಾಮಗಳಲ್ಲಿಯೂ ಪ್ರಚಾರ ನಡೆಸಿ ಸಾರ್ವಜನಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದರು.
ನ.26ರಂದು ಕಾಗಿನೆಲೆಯಲ್ಲಿ ಸುಮಾರು ಆರು ಲಕ್ಷ ರೊಟ್ಟಿಗಳೊಂದಿಗೆ ರೊಟ್ಟಿ ಜಾತ್ರೆ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ಗ್ರಾಮಗಳ ಜನರು ಉತ್ಸಾಹದಿಂದ ಪಾಲ್ಗೊಳ್ಳುವ ನಿರೀಕ್ಷೆಯಿದೆ. ನ.27ರಂದು ನಡೆಯುವ ಕನಕದಾಸರ ಜಯಂತ್ಯುತ್ಸವಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು ಆಗಮಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲಿಗೆ ಆಗಮಿಸುವುದಾಗಿ ತಿಳಿಸಿದ್ದರೂ, ಕಾರಣಾಂತರಗಳಿಂದ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.ನ.27ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಹಾವೇರಿಯ ಕೆಎಲ್ಇ ಮೈದಾನಕ್ಕೆ ಆಗಮಿಸಲಿದ್ದು, ಬಳಿಕ ನಗರದ ಕಾಗಿನೆಲೆ ಕ್ರಾಸ್ನಲ್ಲಿ ನಿರ್ಮಿಸಿರುವ ಎಂಟೂವರೆ ಅಡಿ ಎತ್ತರದ ಕನಕದಾಸರ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಲಿದ್ದಾರೆ. ನಂತರ ಕಾಗಿನೆಲೆಯಲ್ಲಿ ನಡೆಯುವ ಜಯಂತ್ಯುತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಸ್ವಾಮೀಜಿ ಅವರು ಹಾವೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೇವಣಸಿದ್ದೇಶ್ವರ ಜೋಳಿಗೆ ಅಭಿಯಾನದ ಮೂಲಕ ದುಶ್ಚಟಗಳ ಭಿಕ್ಷೆ ಪಡೆದು ಸದ್ಗುಣಗಳ ದೀಕ್ಷೆ ನೀಡುತ್ತಿದ್ದಾರೆ. ಈ ಅಭಿಯಾನದ ಸಮಾರೋಪ ಸಮಾರಂಭವೂ ಜಯಂತ್ಯುತ್ಸವದೊಂದಿಗೆ ನಡೆಯಲಿದೆ ಎಂದರು.ಕಾಗಿನೆಲೆ ಹಾಗೂ ಬಾಡದ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, 2026-27ನೇ ಸಾಲಿನ ಬಜೆಟ್ನಲ್ಲಿ 34 ಕೋಟಿ ರು. ಅನುದಾನ ಒದಗಿಸಲಾಗಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ದೊರೆಯಲಿದೆ. ಸಮಾಜದ ಎಲ್ಲ ಮುಖಂಡರು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಪಾಲ್ಗೊಂಡು ಜಯಂತ್ಯುತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜ ಅನ್ವೇರಿ, ಉಪಾಧ್ಯಕ್ಷ ಅಶೋಕ ಬಣಕಾರ, ಮುಖಂಡ ಗಿರೀಶ ಇಂಡಿಮಠ ಇತರರು ಉಪಸ್ಥಿತರಿದ್ದರು.