ಸಾರಾಂಶ
ಸಾಗರ ಪಟ್ಟಣದ ಗಾಂಧಿ ಮಂದಿರದಲ್ಲಿ ಜನ್ಮದಿನದ ಅಂಗವಾಗಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಸಾಗರ
ಇನ್ನೊಬ್ಬರ ಜೀವ ಉಳಿಸುವ ರಕ್ತದಾನಿಗಳ ಕೆಲಸ ಶ್ರೇಷ್ಠವಾದದ್ದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಜನ್ಮದಿನದ ಅಂಗವಾಗಿ ಪಟ್ಟಣದ ಗಾಂಧಿ ಮಂದಿರದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನದ ಮಹತ್ವದ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾಗೋಡು ತಿಮ್ಮಪ್ಪನವರು ವ್ಯಕ್ತಿಯಲ್ಲ ಶಕ್ತಿ ಎಂದ ಬೇಳೂರು ಹೋರಾಟದ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶ ಮಾಡಿದ ತಿಮ್ಮಪ್ಪನವರು ೯೨ ವರ್ಷ ಕಳೆದು, ೯೩ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಕಾಗೋಡು ಸಾಹೇಬರು ನೂರು ವರ್ಷ ಬದುಕಬೇಕು. ನಮಗೆಲ್ಲಾ ಮಾರ್ಗದರ್ಶನ ಮಾಡಬೇಕು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲಾ ನಡೆಯಲು ನಮಗೆ ಹೆಮ್ಮೆಯಿದೆ ಎಂದರು.ಭೂಮಿ ಭಾಗ್ಯ:
ಭೂಹೀನರಿಗೆ ಭೂಮಿ ಭಾಗ್ಯ ನೀಡಿದ ಹೆಗ್ಗಳಿಕೆ ಕಾಗೋಡು ತಿಮ್ಮಪ್ಪನವರಿಗೆ ಸಲ್ಲುತ್ತದೆ. ಹಿಂದುಳಿದ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಎಲ್ಲರಿಗೂ ಭೂಮಿಭಾಗ್ಯ ನೀಡಿದ್ದು ಕಾಗೋಡು ತಿಮ್ಮಪ್ಪನವರು ಎನ್ನುವುದು ದಾಖಲಾರ್ಹ ಸಂಗತಿ. ವಿವಿಧ ಖಾತೆಗಳ ಸಚಿವರಾಗಿ, ವಿಧಾನಸಭಾಧ್ಯಕ್ಷರಾಗಿ ಕಾಗೋಡು ತಿಮ್ಮಪ್ಪನವರು ಮಾಡಿರುವ ಕೆಲಸ ನಮ್ಮಂಥವರಿಗೆ ಪ್ರೇರಣೆಯಾಗಿದೆ. ಕಾಗೋಡು ಸತ್ಯಾಗ್ರಹದ ತಿಮ್ಮಪ್ಪನವರ ಅಭಿವೃದ್ಧಿಪರ ಆಲೋಚನೆ ನನಗೆ ಮಾರ್ಗದರ್ಶನವಾಗಿದೆ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್, ನಗರ ಕಾಂಗ್ರೆಸ್ ಅಧ್ಯಕ್ಷ ಸುರೇಶ ಬಾಬು, ಗಣಪತಿ ಮಂಡಗಳಲೆ, ರೋಟರಿ ರಕ್ತನಿಧಿ ಕೇಂದ್ರದ ಡಾ.ಎಚ್.ಎಂ.ಶಿವಕುಮಾರ್, ಎಲ್.ಚಂದ್ರಪ್ಪ, ತಾರಾಮೂರ್ತಿ, ನಾಗರಾಜ ಗುಡ್ಡೆಮನೆ, ಕೆ.ಹೊಳೆಯಪ್ಪ, ಮಹ್ಮದ್ ಖಾಸಿಂ ಇನ್ನಿತರರಿದ್ದರು.