ಸಾರಾಂಶ
ಬೆಳಗಾವಿ : ಕಾಂಗ್ರೆಸ್ ಸರ್ಕಾರ ಹಗರಣಗಳ ಸರಮಾಲೆಯಲ್ಲಿ ಸಿಲುಕಿದೆ. ಮಹರ್ಷಿ ವಾಲ್ಮೀಕಿ ನಿಗಮದ ಹಗರಣವು ಮುಖ್ಯಮಂತ್ರಿಗಳ ಕುಮ್ಮಕ್ಕಿನಿಂದ ನಡೆದಿದ್ದು, ಸಚಿವರು ರಾಜೀನಾಮೆ ಕೊಟ್ಟು ಜೈಲಿಗೆ ಹೋಗಿ ಬಂದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಬಾಣಂತಿಯರ ಸರಣಿ ಸಾವು, ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಸೋಮವಾರ ಬೆಳಗಾವಿಯ ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು. ಮೈಸೂರಿನ ಮುಡಾ ಹಗರಣವು ₹5 ಸಾವಿರ ಕೋಟಿಗೂ ಹೆಚ್ಚು ಮೊತ್ತದ್ದು. ಸ್ವತಃ ಮುಖ್ಯಮಂತ್ರಿಗಳ ಕುಟುಂಬವೇ ನೇರವಾಗಿ ಹಗರಣದಲ್ಲಿ ಭಾಗಿಯಾಗಿದೆ ಎಂದು ಟೀಕಿಸಿದ ಅವರು, ಬಡವರ ಪಾಲಾಗಬೇಕಿದ್ದ ₹62 ಕೋಟಿ ಮೌಲ್ಯದ ನಿವೇಶನಗಳು ಸ್ವತಃ ಮುಖ್ಯಮಂತ್ರಿಗಳ ಕುಟುಂಬದ ಪಾಲಾಗಿತ್ತು. ಇದರ ವಿರುದ್ಧ ಬಿಜೆಪಿ ಪಾದಯಾತ್ರೆಯನ್ನೂ ಸಂಘಟಿಸಿ ಹೋರಾಟ ಮಾಡಿತ್ತು ಎಂದು ವಿವರಿಸಿದರು.
ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿಲ್ಲ. ಇದು ಪಿಕ್ನಿಕ್‌ನಂತಿದೆ ಬಾಣಂತಿಯರ ಸಾವು ನಿರಂತರವಾಗಿದೆ. ಹಸುಗೂಸುಗಳೂ ಅಸುನೀಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಧ್ವನಿ ಇಲ್ಲದ ಬಾಣಂತಿಯರ ಕುಟುಂಬದ ಪರವಾಗಿ ಧ್ವನಿ ಎತ್ತುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ.
ಆ ಕೆಲಸವನ್ನು ಮಾಡಿದ ಬಿಜೆಪಿ ಮಹಿಳಾ ಮೋರ್ಚಾಕ್ಕೆ ಅಭಿನಂದನೆ ತಿಳಿಸಿದ ಅವರು, ರೈತ ನಾಯಕ, ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಲ್ಲಿ ಸುವರ್ಣಸೌಧ ನಿರ್ಮಿಸಿ ಉತ್ತರ ಕರ್ನಾಟಕದ ವಿಚಾರದ ಸಮಗ್ರ ಚರ್ಚೆ ಆಗಬೇಕೆಂದು ಆಶಿಸಿದ್ದರು. ಈ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ಆಗಲೆಂದು ಬಯಸಿದ್ದರು. ಸದನದಲ್ಲಿ ಇವು ಯಾವ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯುತ್ತಿಲ್ಲ. ಶಿಶುಗಳ ಮರಣ ಆಗುತ್ತಿದೆ, ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ. ಇವುಗಳ ಜೊತೆಗೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಚರ್ಚೆ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಯಡಿಯೂರಪ್ಪ ಅವರ ಭಾಗ್ಯಲಕ್ಷ್ಮಿ ಯೋಜನೆಯನ್ನು ಸಿದ್ದರಾಮಯ್ಯನವರ ಸರ್ಕಾರ ನಿಲ್ಲಿಸಿದೆ. ಇಂತಹ ದರಿದ್ರ ಸರ್ಕಾರ ರಾಜ್ಯದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ತಾಯಂದಿರಿಗೆ ಅವಮಾನ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವು ನಮ್ಮ ತಾಯಂದಿರ ರಕ್ಷಣೆಗೆ ಬರದೆ ಇರುವ ಸಂದರ್ಭವಿದು. ಒಂದೆಡೆ ಬಾಣಂತಿಯರ ಸಾವಾಗಿದೆ. ಆ ಮಗುವನ್ನು ಯಾರು ನೋಡಿಕೊಳ್ಳಬೇಕು ಎಂದು ಪ್ರಶ್ನಿಸಿದ ಅವರು, ಇದರ ಬಗ್ಗೆಯೂ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ದೂರಿದರು.
ಈ ವೇಳೆ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕು.ಸಿ.ಮಂಜುಳಾ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲುವಾದಿ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯರಾ ಸಿ.ಟಿ.ರವಿ, ಎನ್.ರವಿಕುಮಾರ್, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಶಾಸಕಿ ರೂಪಾಲಿ ನಾಯ್ಕ್, ಶಾಸಕರಾದ ಭಾಗೀರಥಿ ಮುರಳ್ಯ, ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಎಚ್.ವಿಶ್ವನಾಥ್, ಹೇಮಲತಾ ನಾಯಕ್, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಶೋಭಾ ನಿಸ್ಸೀಮ್ ಗೌಡ, ಉಪಾಧ್ಯಕ್ಷೆ ಶಾಂಭವಿ ಅಶ್ವಥಪುರ, ರಾಜ್ಯ ಕಾರ್ಯದರ್ಶಿ ಮಹಿಳಾ ಮೋರ್ಚಾ ಸೋನಾಲಿ ಸರ್ನೋಬತ್, ಬೆಳಗಾವಿ ಮಹಾನಗರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಕು.ಶಿಲ್ಪಾ ಕೇಕ್ರೆ, ಬೆಳಗಾವಿ ಗ್ರಾಮಾಂತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಭಸ್ಮೆ ಪಕ್ಷದ ಪ್ರಮುಖರು, ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಯತ್ನ
ರಾಜ್ಯದಲ್ಲಿ ಬಾಣಂತಿಯರು, ಶಿಶುಗಳ ಸರಣಿ ಸಾವಿಗೆ ರಾಜ್ಯಸರ್ಕಾರಕ್ಕೆ ಬೇವಾಬ್ದಾರಿಯೇ ಕಾರಣ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು, ಪಕ್ಷದ ಕಾರ್ಯಕರ್ತರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾನಿರತ ಕಾರ್ಯಕರ್ತರನ್ನು ತಮ್ಮ ವಶಕ್ಕೆ ಪಡೆದುಕೊಂಡರು.