ಜಂಟಿ ಅಧಿವೇಶನ ಸಂದರ್ಭದಲ್ಲಿ ಸದನದಿಂದ ಹೊರನಡೆಯುತ್ತಿದ್ದ ರಾಜ್ಯಪಾಲರನ್ನು ಕಾಂಗ್ರೆಸ್‌ ಶಾಸಕರು ಅಡ್ಡಗಟ್ಟಿದ ವಿಚಾರ ಹಾಗೂ ರಾಷ್ಟ್ರಗೀತೆ ಬಿತ್ತರಿಸುವುದಕ್ಕೂ ಮುನ್ನ ರಾಜ್ಯಪಾಲರು ಹೊರನಡೆದು ರಾಷ್ಟ್ರಗೀತೆಗೆ ಅವಮಾನ ಮಾಡಿರುವ ಆರೋಪ ಕುರಿತು ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರ ನಡುವೆ ಶುಕ್ರವಾರ ತೀವ್ರ ವಾಗ್ವಾದ ನಡೆಯಿತು.

ಕನ್ನಡಪ್ರಭ ವಾರ್ತೆ ವಿಧಾನಸಭೆ/ವಿಧಾನಪರಿಷತ್‌

ಜಂಟಿ ಅಧಿವೇಶನ ಸಂದರ್ಭದಲ್ಲಿ ಸದನದಿಂದ ಹೊರನಡೆಯುತ್ತಿದ್ದ ರಾಜ್ಯಪಾಲರನ್ನು ಕಾಂಗ್ರೆಸ್‌ ಶಾಸಕರು ಅಡ್ಡಗಟ್ಟಿದ ವಿಚಾರ ಹಾಗೂ ರಾಷ್ಟ್ರಗೀತೆ ಬಿತ್ತರಿಸುವುದಕ್ಕೂ ಮುನ್ನ ರಾಜ್ಯಪಾಲರು ಹೊರನಡೆದು ರಾಷ್ಟ್ರಗೀತೆಗೆ ಅವಮಾನ ಮಾಡಿರುವ ಆರೋಪ ಕುರಿತು ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರ ನಡುವೆ ಶುಕ್ರವಾರ ತೀವ್ರ ವಾಗ್ವಾದ ನಡೆಯಿತು.

ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು, ಜಂಟಿ ಅಧಿವೇಶನದಲ್ಲಿ ಪಾಲ್ಗೊಂಡು ಹೊರಟಿದ್ದ ರಾಜ್ಯಪಾಲರನ್ನು ಸದನದೊಳಗೆ ಅಡ್ಡಗಟ್ಟಿ ಅವಮಾನ ಮಾಡಿದ ವಿಚಾರವನ್ನು ಪ್ರಸ್ತಾಪಿಸಿದರು. ಜತೆಗೆ ಕರ್ನಾಟಕದ ಇತಿಹಾಸದಲ್ಲಿ ರಾಜ್ಯಪಾಲರಿಗೆ ಈ ರೀತಿ ಅಗೌರವ ತೋರಿರಲಿಲ್ಲ. ಮಾರ್ಷಲ್‌ಗಳು ಇಲ್ಲದಿದ್ದರೆ ರಾಜ್ಯಪಾಲರ ಮೇಲೆ ಹಲ್ಲೆಯನ್ನೂ ಮಾಡುತ್ತಿದ್ದರು. ಹೀಗೆ ರಾಜ್ಯಪಾಲರಿಗೆ ಅಡ್ಡಗಟ್ಟಿದ, ಅಗೌರವ ತೋರಿದ ಸಚಿವ ಎಚ್‌.ಕೆ.ಪಾಟೀಲ್‌, ಶಾಸಕರಾದ ಎಚ್‌.ಸಿ.ಬಾಲಕೃಷ್ಣ, ಶರತ್‌ ಬಚ್ಚೇಗೌಡ, ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಸೇರಿ ಇನ್ನಿತರರನ್ನು ಅಮಾನತು ಮಾಡಬೇಕು ಹಾಗೂ ಈ ವಿಚಾರವಾಗಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಅದಕ್ಕೆ ಬಿಜೆಪಿಯ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಧ್ವನಿಗೂಡಿಸಿದರು.

ರಾಜ್ಯದಲ್ಲಿ ಗೂಂಡಾ ಸರ್ಕಾರ:

ಬಿಜೆಪಿಯ ವಿ.ಸುನೀಲ್‌ಕುಮಾರ್‌ ಮಾತನಾಡಿ, ರಾಜಕಾರಣಕ್ಕಾಗಿ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನೇ ರಾಜ್ಯಪಾಲರು ಮಂಡಿಸಿದ್ದಾರೆ. ಆದರೂ, ಅವರನ್ನು ಅಡ್ಡಗಟ್ಟಲಾಯಿತು. ಇದರ ವಿರುದ್ಧ ಕ್ರಮವಾಗದಿದ್ದರೆ ಸದನಕ್ಕೆ ಗೌರವ ಇಲ್ಲದಂತಾಗಲಿದೆ. ಕಾನೂನು ಸಚಿವರೂ ಸೇರಿ ಶಾಸಕರ ವಿರುದ್ಧ ಕ್ರಮವಾಗಬೇಕು. ರಾಜ್ಯಪಾಲರಿಗೆ ಗೌರವ ಕೊಡದ ಗೂಂಡಾ ಸರ್ಕಾರ ಇಲ್ಲಿದೆ ಎಂದು ಹೇಳಿದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ ಶಾಸಕರು, ಸರ್ಕಾರವನ್ನು ಟೀಕಿಸುವ ಭರದಲ್ಲಿ ಪದ ಬಳಕೆ ಸರಿಯಾಗಿರಬೇಕು ಎಂದು ಗದ್ದಲ ಎಬ್ಬಿಸಿದರು. ಕೊನೆಗೆ ಸ್ಪೀಕರ್‌ ಯು.ಟಿ. ಖಾದರ್‌, ಗೂಂಡಾ ಸರ್ಕಾರ ಎಂಬ ಪದವನ್ನು ಕಡತದಿಂದ ತೆಗೆಸಿದರು.

ಗವರ್ನರ್‌ ಜನರ-ಸದಸನದ ಕ್ಷಮೆ ಕೇಳಲಿ:

ವಿರೋಧ ಪಕ್ಷದ ಶಾಸಕರ ವಾದಕ್ಕೆ ಪ್ರತಿಯಾಗಿ ರಾಜ್ಯಪಾಲರಿಂದ ರಾಷ್ಟ್ರಗೀತೆಗೆ ಅವಮಾನ ಮಾಡಿರುವ ವಿಚಾರ ಪ್ರಸ್ತಾಪಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್, ರಾಜ್ಯಪಾಲರು ಸಂವಿಧಾನದ ಕಲಂ 176 (1) ಉಲ್ಲಂಘಿಸಿದ್ದಾರೆ. ಸಚಿವ ಸಂಪುಟ ಅನುಮೋದಿಸಿದ ಭಾಷಣವನ್ನು ಓದದೇ ಸದನಕ್ಕೆ ಅವಮಾನ ಮಾಡಿದ್ದಾರೆ. ಅದರೊಂದಿಗೆ ರಾಜ್ಯಪಾಲರು ತಮ್ಮ ಭಾಷಣ ಮುಗಿಸಿದ ಕೂಡಲೇ ಹೊರಟಿದ್ದು, ರಾಷ್ಟ್ರಗೀತೆ ಬಿತ್ತರಿಸಲೂ ಅವಕಾಶ ನೀಡಲಿಲ್ಲ. ಈ ಬಗ್ಗೆಯೂ ಚರ್ಚೆ ನಡೆಯಬೇಕು. ಸಂವಿಧಾನದ ರಕ್ಷಣೆ ಮಾಡಬೇಕಾದ ರಾಜ್ಯಪಾಲರು ಅದನ್ನು ಉಲ್ಲಂಘಿಸುವ ಕೆಲಸ ಮಾಡಿದ್ದಾರೆ. ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅವಮಾನ ಮಾಡಿದ ರಾಜ್ಯಪಾಲರು ಕರ್ನಾಟಕದ ಜನರು ಮತ್ತು ಸದನದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಕೇಂದ್ರದಿಂದ ರಾಜ್ಯಪಾಲರಿಗೆ ಕರೆ:

ರಾಜ್ಯಪಾಲರ ನಡೆಯುವ ದೇಶದಲ್ಲಿ, ಅದರಲ್ಲೂ ದಕ್ಷಿಣ ಭಾರತದ ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಶಾಸಕರು ‘ನಮ್ಮದು ಗೂಂಡಾ’ ಸರ್ಕಾರ ಎಂದು ಹೇಳುತ್ತಾರೆ. ಆದರೆ, ಕೇಂದ್ರ ಸರ್ಕಾರದಿಂದ ರಾಜ್ಯಪಾಲರಿಗೆ ಯಾವೆಲ್ಲ ರೀತಿಯ ಕರೆ ಬರುತ್ತದೆ ಎಂಬುದೂ ನಮಗೆ ಗೊತ್ತಿದೆ ಎಂದು ಎಚ್‌.ಕೆ. ಪಾಟೀಲ್‌ ಹೇಳಿದರು.

ಹಿಂದಿನ ಘಟನೆ ಪ್ರಸ್ತಾಪಿಸಿದ ಅಶೋಕ್‌:

ಆಗ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್‌.ಅಶೋಕ್‌, 1998ರ ಮಾರ್ಚ್‌ನಲ್ಲಿ ನಡೆದ ಜಂಟಿ ಅಧಿವೇಶನಲ್ಲಿ ಆಗಿನ ರಾಜ್ಯಪಾಲ ಖುರ್ಷಿದ್‌ ಆಲಂಖಾನ್‌, 2010ರಲ್ಲಿ ಹಂಸರಾಜ್‌ ಭಾರದ್ವಾಜ್‌ ಅವರು ಸರ್ಕಾರ ನೀಡಿದ ಭಾಷಣ ಮಾಡಲಿಲ್ಲ. ಈಗಿನ ರಾಜ್ಯಪಾಲರು ನಡೆದುಕೊಂಡ ರೀತಿಯಲ್ಲಿ ಯಾವುದೇ ತಪ್ಪಿಲ್ಲ. ಅದಕ್ಕೆ ಅವರ ಮೇಲೆ ದಾಳಿ ಮಾಡಿರುವುದು ಸರಿಯಲ್ಲ ಎಂದರು.

ಖಂಡಿಸಿದ ಸಿಎಂ:

ಮುಖ್ಯಮಂತ್ರಿ ಸಿದ್ದರಾಮಯ್ಯ ಎದ್ದುನಿಂತು, ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮುಗಿಸಿ ಹೋಗಿರುವ ರೀತಿ ಸರಿಯಲ್ಲ. ಅವರು ರಾಷ್ಟ್ರಗೀತೆ ಬಿತ್ತರಿಸುವುದಕ್ಕೂ ಮುನ್ನ ಆತುರಾತುರಿಂದ ಹೊರಟಿದ್ದು ಸರಿಯಲ್ಲ. ಅವರು ರಾಜ್ಯದ ರಾಜಪಾಲರು, ಈ ಸರ್ಕಾರದ ಮುಖ್ಯಸ್ಥರು. ಅವರು ಎಷ್ಟಾದರೂ ಭಾಷಣ ಓದಲಿ, ಆದರೆ, ರಾಷ್ಟ್ರಗೀತೆಗೆ ಅವಮಾನ ಮಾಡಿದ್ದು ಖಂಡನೀಯ ಎಂದು ಹೇಳಿದರು.

ಎರಡೂ ವಿಚಾರಗಳನ್ನು ಆಲಿಸಿದ ಯು.ಟಿ. ಖಾದರ್‌, ‘ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ನೀಡಿರುವ ನಿಲುವಳಿ ಸೂಚನೆಯ ಹೊರತಾಗಿ ಸಾಕಷ್ಟು ವಿಷಯಗಳು ಚರ್ಚೆಯಾಗಿವೆ. ಹೀಗಾಗಿ, ಚರ್ಚೆಗೆ ಈಗ ಅವಕಾಶ ನೀಡಲಾಗದು. ಈ ಕುರಿತು ಪರಿಶೀಲನೆ ನಡೆಸಿ ಮುಂದಿನ ವಾರ ಚರ್ಚೆಗೆ ಅವಕಾಶ ನೀಡುವ ಕುರಿತು ನಿರ್ಧರಿಸಲಾಗುವುದು’ ಎಂದರು.ಕಲಾಪ ನುಂಗಿದ ಸದಸ್ಯರ ‘ಅಮಾನತು’ ವಿಷಯ:

ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮುಗಿಸಿ ನಿರ್ಗಮಿಸುವಾಗ ರಾಜ್ಯಪಾಲರನ್ನು ಅಡ್ಡಗಟ್ಟಿದ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಹಾಗೂ ಎಸ್‌.ರವಿ ಅಮಾನತು ಮಾಡಬೇಕೆಂದು ಬಿಜೆಪಿ ಬಿಗಿ ಪಟ್ಟು, ಇದಕ್ಕೆ ಪ್ರತಿಯಾಗಿ ರಾಷ್ಟ್ರಗೀತೆಗೂ ರಾಜ್ಯಪಾಲರು ಅಪಮಾನ ಮಾಡಿರುವ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಕಾಂಗ್ರೆಸ್‌ ಒತ್ತಾಯ ಮಾಡಿದ ಪರಿಣಾಮ ಕಲಾಪದಲ್ಲಿ ಕೋಲಾಹಲಕರ ವಾತಾವರಣ ನಿರ್ಮಾಣ‍ವಾಗಿ, ಸದನವನ್ನು 4 ಬಾರಿ ಮುಂದೂಡಿದ ಪ್ರಸಂಗ ನಡೆಯಿತು. ಇದರಿಂದಾಗಿ ಇಡೀ ದಿನ ಬೇರೆ ಯಾವುದೇ ಕಲಾಪ ನಡೆಯಲಿಲ್ಲ.

ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿ ನಿರ್ಗಮಿಸುವಾಗ ಅಡ್ಡಗಟ್ಟಿ, ಘೋಷಣೆ ಕೂಗಿದ ಸದಸ್ಯರನ್ನು ಅಮಾನತು ಮಾಡಬೇಕು. ಈ ರೀತಿಯ ವರ್ತನೆ ಸಹಿಸಲು ಸಾಧ್ಯವಿಲ್ಲ. ತಕ್ಷಣ ಸದಸ್ಯರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.ಈ ಮಧ್ಯೆ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌ ಅವರು ಕ್ರಿಯಾಲೋಪ ಎತ್ತಿದರೆ. ಬಿಜೆಪಿ ಸದಸ್ಯರು ಗೂಂಡಾಗಿರಿ ಮಾಡಿದ ಸದಸ್ಯರನ್ನು ಅಮಾನತು ಮಾಡಿ, ಗೂಂಡಾಗಿರಿ ನಡೆಯಲ್ಲ ಎಂದು ಘೋಷಣೆ ಕೂಗಿದರೆ, ಕಾಂಗ್ರೆಸ್‌ ಸದಸ್ಯರು ‘ಗೋ ಬ್ಯಾಕ್‌ ಗವರ್ನರ್‌’, ಬಿಜೆಪಿ ಶೇಮ್‌ ಶೇಮ್‌ ಎಂದು ಘೋಷಣೆ ಕೂಗತೊಡಗಿದರು. ಇದೇ ವೇಳೆ ಹೊರಟ್ಟಿ ಅವರು ಹರಿಪ್ರಸಾದ್‌ ಅವರ ಕ್ರಿಯಾಲೋಪವನ್ನು ತಿರಸ್ಕರಿಸಿರುವುದಾಗಿ ರೂಲಿಂಗ್‌ ನೀಡಿದರು.ಈ ಹಂತದಲ್ಲಿ ಎರಡು ಕಡೆ ಘೋಷಣೆ, ವಾಗ್ವಾದ ಕೆಲಕಾಲ ನಡೆಯಿತು. ಆಗ ಸದನವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು. ಎರಡು ಪತ್ರ ಸಲ್ಲಿಕೆ:ಪುನಃ ಸದನ ಆರಂಭವಾಗುತ್ತಿದ್ದಂತೆ ಸಭಾಪತಿಗಳು ಬಿಜೆಪಿ ಕಡೆಯಿಂದ ಹರಿಪ್ರಸಾದ್‌ ಹಾಗೂ ಎಸ್. ರವಿ ಅವರನ್ನು ಅಮಾನತು ಮಾಡಬೇಕೆಂಬ ಪತ್ರ ಬಂದಿದೆ. ಕಾಂಗ್ರೆಸ್‌ನಿಂದ ರಾಜ್ಯಪಾಲರಿಂದ ರಾಷ್ಟ್ರಗೀತೆಗೆ ಅಗೌರವ ಆಗಿದೆ, ಈ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ಪತ್ರ ಸಲ್ಲಿಕೆಯಾಗಿದೆ. ಈ ಬಗ್ಗೆ ಚರ್ಚಿಸಿ ತೀರ್ಮಾನಿಸುವುದಾಗಿ ತಿಳಿಸಿದರು. ಈ ಹಂತದಲ್ಲಿ ಎರಡು ಕಡೆ ಸದಸ್ಯರು ಏಕ ಕಾಲದಲ್ಲಿ ವಾಗ್ವಾದ ಶುರುವಾಗುತ್ತಿದ್ದಂತೆ ಸಭಾಪತಿಗಳು ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.ರೂಲಿಂಗ್‌ ನೀಡಿದ ಸಭಾಪತಿ:ಭೋಜನ ವಿರಾಮದ ನಂತರವೂ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ತಮ್ಮ ಪ್ರಸ್ತಾವನೆಗಳ ಚರ್ಚೆಗೆ ಪಟ್ಟು, ವಾಗ್ವಾದ ಮುಂದುವರೆಸಿದ್ದರಿಂದ ಕಲಾಪವನ್ನು ಸಭಾಪತಿ ಅವರು ಮತ್ತೆ 10 ನಿಮಿಷ ಮುಂದೂಡಿದರು.ತಿರಸ್ಕಾರ:ಪುನಃ ಸದನ ಆರಂಭವಾದಾಗ ಸಭಾಪತಿ ಅವರು, ನಿಯಮ 306/10ರ ಅನ್ವಯ ರಾಜ್ಯಪಾಲರ ಕುರಿತು ಚರ್ಚಿಸಲು ಅವಕಾಶವಿಲ್ಲ. ಹೀಗಾಗಿ ರಾಜ್ಯಪಾಲರು ಭಾಷಣ ಮುಗಿಸಿ ಹೊರಡುವಾಗ ರಾಷ್ಟ್ರಗೀತೆ ಗಾಯನಕ್ಕೆ ಅವಕಾಶ ನೀಡದೆ ಅವಮಾನ ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆಗೆ ಕೋರಿದ್ದ ಆಡಳಿತ ಪಕ್ಷದ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದಾಗಿ ರೂಲಿಂಗ್‌ ನೀಡಿದರು.ಪುರಸ್ಕಾರ:ರಾಜ್ಯಪಾಲರು ಸಭೆಯಿಂದ ನಿರ್ಗಮಿಸುವಾಗ ಸದಸ್ಯರಾದ ಬಿ.ಕೆ.ಹರಿಪ್ರಸಾದ್‌ ಮತ್ತು ಎಸ್‌.ರವಿ ಅಡ್ಡಗಟ್ಟಿ, ಅವಮಾನಿಸಿದ್ದಾರೆ. ಹಾಗಾಗಿ ಅವರನ್ನು ಅಮಾನತು ಮಾಡಬೇಕೆಂದು ಬಿಜೆಪಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ವಿಧಾನ ಪರಿಷತ್‌ನ ನೀತಿ ನಿರೂಪಣಾ ಸಮಿತಿಗೆ ವಹಿಸಲಾಗಿದೆ ಎಂದು ತೀರ್ಪು ನೀಡಿದರು.