ಸಾರಾಂಶ
ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ಹೋರಾಟದ ವೇದಿಕೆಯಲ್ಲಿ ಕುರ್ಚಿಗಾಗಿ ಕೈ ನಾಯಕ ನಡುವೆ ವಾಗ್ವಾದ ಜರುಗಿತು.
ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಬಣ ರಾಜಕೀಯದ ಸಂಘರ್ಷದಿಂದಾಗಿ ಸೋಮವಾರ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕುರ್ಚಿಗಾಗಿ ಕೈ ನಾಯಕರು ಕಾದಾಡಿದ ಪ್ರಸಂಗ ನಡೆಯಿತು.ಪ್ರತಿಭಟನೆ ಪ್ರಾರಂಭಕ್ಕೂ ಮುನ್ನ ವೇದಿಕೆ ಮೇಲೆ ಸಚಿವರು, ಶಾಸಕರು ಹಾಗೂ ಹಿರಿಯ ನಾಯಕರಿಗಾಗಿ ಹಾಕಿದ್ದ ಕುರ್ಚಿಯಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಸಿ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ ಹಾಗೂ ನಗರಸಭೆ ಸದಸ್ಯ ಜಿಂದಪ್ಪ ಅವರು ಕಚ್ಚಾಟ ಆರಂಭಿಸುತ್ತಿದ್ದಂತೆ ಮಧ್ಯ ಪ್ರವೇಶಿಸಿದ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಜೋರಾಗಿ ಕಿರಿಚಾಡಲು ಆರಂಭಿಸಿದರು. ವಾಗ್ವಾದ ಆರಂಭಗೊಳ್ಳುತ್ತಿದ್ದಂತೆ ಸಿಎಂಸಿ ಮಾಜಿ ಸದಸ್ಯ ಬಾಬರ್ ಅವರು ಜಿಂದಪ್ಪರ ಮೇಲೆ ರೇಗಾಡುತ್ತಿದ್ದಂತೆ, ಸ್ಥಳದಲ್ಲಿದ್ದ ಇತರೆ ಮುಖಂಡರು ಕಕ್ಕಾಬಿಕ್ಕಿಯಾದರು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮುಖಂಡರನ್ನು ಸಮಧಾನ ಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಸಚಿವ ಎನ್.ಎಸ್.ಬೋಸರಾಜು ಹಾಗೂ ಎಂಎಲ್‌ಸಿ ಎ.ವಸಂತಕುಮಾರ ಅವರ ನಡುವಣ ಬಣರಾಜಕೀಯದ ಕಿಚ್ಚು ದಿನೇ ದಿನೆ ಹೆಚ್ಚಾಗುತ್ತಿದ್ದು ಅದಕ್ಕೆ ಸಾಕ್ಷಿ ಎನ್ನುವಂತೆ ಈ ಘಟನೆ ಜರುಗಿದ್ದು, ಇಷ್ಟೇಲ್ಲಾ ನಡೆಯುತ್ತಿದ್ದರು ಸಹ ಸಚಿವ ಎನ್.ಎಸ್.ಬೋಸರಾಜು ತುಟಿಬಿಚ್ಚದೇ ಮೌನವಾಗಿದ್ದರು.