ಸಿಎಂ ಸಿದ್ದರಾಮಯ್ಯ ಪರ ರಸ್ತೆಗಿಳಿದ ಕೈ ಪಡೆ

| Published : Aug 06 2024, 12:37 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ವೆಂಕಟಪೇಟ, ವಲ್ಲಭಬಾಯಿ ಚೌಕ್‌, ಎಂ.ಜಿ.ರಸ್ತೆ ಮೂಲಕ ಬಸವೇಶ್ವರ ವೃತ್ತ ತಲುಪಿತು. ಮೆರವಣಿಗೆ ವೇಳೆ ಬಿಜೆಪಿ-ಜೆಡಿಎಸ್ ಹಾಗೂ ರಾಜ್ಯಪಾಲರ ವಿರು ಘೋಷಣೆಗಳನ್ನು ಕೂಗಿ ಕೈ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಭ್ರಷ್ಟರ ಪಾದಯಾತ್ರೆ:

ಹೊಳೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಸಿಎಂ ಸಿದ್ದರಾಮಯ್ಯ ಜನಪರ ಕೆಲಸ ಮಾಡುತ್ತಿದ್ದಾರೆ. ಜಾತಿ, ಮತ, ಪಂಥ ಮಾಡಲಿಲ್ಲ. ಪರಿಣಾಮವೇ ಎರಡನೇ ಬಾರಿ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಪತ್ನಿ ರಾಜಕಾರಣದತ್ತ ಕಣ್ಣು ಹಾಯಿಸದ ಆ ತಾಯಿ, ಸ್ವಚ್ಛ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರನ್ನು ಟಚ್ ಮಾಡಿದರೆ ರಾಜ್ಯವಷ್ಟೇ ಅಲ್ಲ ದೇಶವೇ ಅಲ್ಲೋಲ ಕಲ್ಲೋಲ ಆಗಲಿದೆ. ಬಿಜೆಪಿ-ಜೆಡಿಎಸ್ ಪಾದಯಾತ್ರೆ ಒಂದು ಭ್ರಷ್ಟರ ಪಾದಯಾತ್ರೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

136 ಶಾಸಕರು ಸಿದ್ದರಾಮಯ್ಯಗೆ ಬಂಡೆಗಲ್ಲು:

ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ದೇಶದಲ್ಲಿ ಪ್ರಧಾನಿ ಮೋದಿ ಅವರಿಗೆ ತಕ್ಕ ವಿರೋಧ ಮಾಡುವ ಶಕ್ತಿಯುಳ್ಳ ನಾಯಕ ಸಿದ್ದರಾಮಯ್ಯ ಮಾತ್ರ. ಅಮಿತ್ ಶಾ ಹಾಗೂ ಮೋದಿ ಅವರ ಕುರ್ಚಿ ಕಸಿದುಕೊಳ್ಳುತ್ತಾರೆ ಎಂಬ ಹೊಟ್ಟೆ ಕಿಚ್ಚು ಅವರಿಗಿದೆ. ದೇಶದ ಶಕ್ತಿಯುತ ನಾಯಕರಾಗಿ ಸಿದ್ದರಾಮಯ್ಯ ಹೊರಹೊಮ್ಮುತ್ತಿದ್ದಾರೆ. ಅಹಿಂದಕ್ಕಷ್ಟೇ ನಾಯಕರಲ್ಲ ಎಂದರು.

136 ಶಾಸಕರು ಸಿದ್ದರಾಮಯ್ಯ ಅವರಿಗೆ ಬಂಡೆಗಲ್ಲಾಗಿ ನಿಂತಿದ್ದೇವೆ. ಯಾವುದೇ ಕಪ್ಪುಚುಕ್ಕೆ ಇಲ್ಲದ ನಾಯಕನ ಶಕ್ತಿ ನೋಡಿ ಬಿಜೆಪಿ-ಜೆಡಿಎಸ್ ನವರಿಗೆ ಹೊಟ್ಟೆಕಿಚ್ಚು ಶುರುವಾಗಿದೆ. ಪೆನ್ ಡ್ರೈವ್‌ ಹಗರಣ ಮರತಿದ್ದಾರೆ ಎಂದು ಎಚ್ಚರಿಸಿದರು.

ಶಾಸಕ ಎಚ್.ವೈ.ಮೇಟಿ ಮಾತನಾಡಿ, ರಾಜ್ಯಪಾಲರು ಸಂವಿಧಾನ ಪ್ರಕಾರ ನಡೆದುಕೊಳ್ಳಬೇಕು. ಕೇಂದ್ರದ ಕೈಗೊಂಬೆಯಾಗಿ ಕೆಲಸ ಮಾಡಬಾರದು. ಬಂಗಾರದಲ್ಲಿ ಕೆಸರು ಬರಬಹುದು, ಆದರೆ ಸಿದ್ದರಾಮಯ್ಯ ಆಡಳಿತದಲ್ಲಿ ಕೆಟ್ಟದ್ದು ಬರುವುದಿಲ್ಲ. ಅಂತಹ ನಾಯಕನಿಗೆ ರಾತ್ರಿ ನೋಟಿಸ್ ಕೊಡುವ ಅಗತ್ಯವಿತ್ತಾ?, ಹಗಲು ಸಮಯವಿರಲಿಲ್ಲವಾ? ಸಂವಿಧಾನ ವಿರೋಧಿಯಾಗಿ ರಾಜ್ಯಪಾಲರು ನಡೆದುಕೊಳ್ಳಬಾರದು ಎಂದು ಆಗ್ರಹಿಸಿದರು.

ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಸಂವಿಧಾನ ಬದ್ಧವಾಗಿ ರಾಜ್ಯಪಾಲರು ಕೆಲಸ ಮಾಡದೇ ಮನಸ್ಸು ಬಂದ ರೀತಿ ಮಾಡುತ್ತಿದ್ದಾರೆ. ಸಿಎಂ ಅವರನ್ನು ಪ್ರಶ್ನೆ ಮಾಡುವಾಗ ಒಂದು ಗೌರವ ಇದೆ. ಆದರೆ, ರಾಜ್ಯಪಾಲರು ಕೂಡ ಸಂವಿಧಾನ ಬದ್ದವಾಗಿ ನಡೆಯಬೇಕು ಎಂದು ಹೇಳಿದರು.

ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಸಿದ್ದು ಕೊಣ್ಣೂರ, ಪರಶುರಾಮ ಮಹಾರಾಜನ, ಸಿಕಂದರ್ ಅಥಣಿ, ಚಂದ್ರಶೇಖರ ರಾಠೋಡ ಮಾತನಾಡಿದರು.

(ಪೊಟೋ 5ಬಿಕೆಟಿ4,4, (1) ಬಿಜೆಪಿ ಹಾಗೂ ಜೆಡಿಎಸ್‌ನವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು, ಅಭಿಮಾನಿಗಳು ನಗರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿದರು.

---------------------------------------

ಕೋಟ್‌.....

ಸಿಎಂ ಸಿದ್ದರಾಮಯ್ಯ ಕುಟುಂಬ ಅನ್ಯಮಾರ್ಗ ಅನುಸರಿಸಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಬಿಟ್ ಕಾಯಿನ್‌ ಹಗರಣ, ಕೋವಿಡ್ ನಲ್ಲಿ ಸಂದರ್ಭದಲ್ಲಿ ಮಾಸ್ಕ್‌, ಆಕ್ಸಿಜನ್ ಖರೀದಿಯಲ್ಲಿ ಸಾವಿರಾರು ಕೋಟಿ ನುಂಗಿ ನೀರು ಕುಡಿದರು. ಅವರದೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನೆ ಮಾಡಿದರು. ಆದರೆ ರಾಜ್ಯಪಾಲರು ಆವಾಗ ನೋಟಿಸ್ ನೀಡಲಿಲ್ಲ. ಇದೀಗ ಮೋದಿ ಒತ್ತಡಕ್ಕೆ ಮಣಿದು ಸಿಎಂ ಸಿದ್ದರಾಮಯ್ಯ ಮೇಲೆ ನೋಟಿಸ್ ನೀಡಿರುವುದು ನಾಚಿಕೆಗೇಡಿನ ಸಂಗತಿ.

- ಆರ್.ಬಿ.ತಿಮ್ಮಾಪುರ, ಅಬಕಾರಿ ಸಚಿವ